Discover millions of ebooks, audiobooks, and so much more with a free trial

Only $11.99/month after trial. Cancel anytime.

Kempu Kalave
Kempu Kalave
Kempu Kalave
Ebook1,053 pages11 hours

Kempu Kalave

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200200207
Kempu Kalave

Read more from K.T. Gatti

Related to Kempu Kalave

Related ebooks

Reviews for Kempu Kalave

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kempu Kalave - K.T. Gatti

    http://www.pustaka.co.in

    ಕೆಂಪು ಕಳವೆ

    Kempu Kalave

    Author :

    ಕೆ. ಟಿ. ಗಟ್ಟಿ

    K T Gatti

    For more books :

    http://www.pustaka.co.in/home/author/kt-gatti

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆ. ಟಿ. ಗಟ್ಟಿ
    ಕೆಂಪು ಕಳವೆ
    (ಕಾದಂಬರಿ)

    ರಕ್ಷಾ ಕವಚದ ಹಿಂದಿನ ಪುಟದ

    ಬ್ಲರ್ಬ್

    ಕೆ. ಟಿ. ಗಟ್ಟಿ

    ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು, 1956ರಲ್ಲಿ `ಮುಂಗಾರ ಮುಗಿಲು' ಎಂಬ ಒಂದು ಚಿಕ್ಕ ಕತೆಯ ಮೂಲಕ. ಆಗ ಅವರಿಗೆ ಹದಿನೆಂಟು ವರ್ಷ. ಅನಂತರ ಸುಮಾರು ಹದಿನೈದು ವರ್ಷ ತನ್ನ ಓದಿನ ನಡುವೆ ಬೇರೆ ಬೇರೆ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಅವರ ಕತೆ, ಕವಿತೆ ಮತ್ತು ಲೇಖನಗಳು ಪ್ರಕಟವಾಗುತ್ತಿದ್ದವು. ಕೆ.ಟಿ.ಗಟ್ಟಿಯವರ ಮೊದಲ ಕಾದಂಬರಿ `ಶಬ್ದಗಳು' ಪ್ರಕಟವಾದದ್ದು 1973ರಲ್ಲಿ. ಕಾದಂಬರಿ ಬರವಣಿಗೆಯಲ್ಲದೆ, ಸಣ್ಣ ಕತೆ, ಕಾವ್ಯ, ಪ್ರಬಂಧ, ನಾಟಕ, ಬಾನುಲಿ ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಅನುವಾದ, ಭಾಷಾ ಶಾಸ್ತ್ರ, ಶಿಕ್ಷಣ ಮುಂತಾದ ವಿವಿಧ ಪ್ರಕಾರಗಳಲ್ಲಿ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಮತ್ತು ತುಳುಭಾಷೆಯಲ್ಲಿ ಗಟ್ಟಿಯವರ ತೊಂಬತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಅವರ `ಕತೆ ಇನ್ನೂ ಇದೆ’, `ಅನುಭವದಡಿಗೆಯ ಮಾಡಿ’ ಮತ್ತು `ತಾಳಮದ್ದಳೆ’ ಎಂಬ ಮೂರು ಬಾನುಲಿ ಸರಣಿ ನಾಟಕಗಳು ಬಹಳ ಪ್ರಸಿದ್ಧ. ಗಟ್ಟಿಯವರ ಆತ್ಮ ಕಥೆ `ತೀರ' ಒಂದು ವಿಶಿಷ್ಟ ಕೃತಿಯಾಗಿದೆ. `ಕೆಂಪು ಕಳವೆ’ ಅವರ 46ನೇ ಕಾದಂಬರಿ.

    ಕೆಂಪು ಕಳವೆ

    ಬದಲಾಗುತ್ತಾ ಇರುವ ಜಗತ್ತಿನಲ್ಲಿ ಯಾವ ಕತೆಯನ್ನೂ ಹೇಳಿ ಅಥವಾ ಬರೆದು ಪೂರ್ಣಗೊಳಿಸಲಾಗುವುದಿಲ್ಲ. ಕತೆ ನಡೆಯುತ್ತಲೇ ಇರುವಂಥದು. ಬರವಣಿಗೆಯಲ್ಲಿ ಹಿಡಿದಿಡಲು ಸಾಧ್ಯ ಕತೆಯ ಯಾವುದೋ ಒಂದು ಘಟ್ಟವನ್ನು ಮಾತ್ರ. ಅಂಥ ಕತೆ ಕೆಲವು ಪ್ರಕರಣಗಳನ್ನು ಪೋಣಿಸಿದ ಒಂದು ಕಥಾನಕವಾಗಬಹುದು. ಅಥವಾ ಒಂದು ದೀರ್ಘ ಆಖ್ಯಾನವಾಗಬಹುದು. ಅದನ್ನು `ಕಾದಂಬರಿ’ ಎನ್ನುವುದು ಒಂದು ಸಾಹಿತ್ಯ ಸಂಪ್ರದಾಯ. ಆ ವ್ಯಾಖ್ಯೆ ಇತರ ಅನೇಕ ವ್ಯಾಖ್ಯೆಗಳಂತೆ ಆರ್ಬಿಟ್ರರಿಯಾಗಿರಬಹುದು.

    ಸೃಷ್ಟಿಯ ಆರಂಭವೋ ಎಂಬಂತೆ ಒಂದು ಬದುಕಿನ ಆರಂಭದ ವಿವರಗಳಿಂದ ತೊಡಗಿ ಆ ಬದುಕಿನ ಮುನ್ನಡೆಯ ಒಂದು ಹಂತದ ವರೆಗಿನ ಕಥೆಯನ್ನು `ಕೆಂಪು ಕಳವೆ’ ನೂರಾರು ದೃಶ್ಯಗಳಂತೆ, ನೂರಾರು ಚರಣಗಳ ಒಂದು ಹಾಡಿನಂತೆ ಕಟ್ಟಿಕೊಡುತ್ತದೆ. ಅದು ಚಿತ್ರಿಸುವ ಬದುಕು ಮಹತ್ತಾದ ಏರುಪೇರುಗಳಿಲ್ಲದ, ಪ್ರಕೃತಿಯೇ ಕಟ್ಟಿಕೊಟ್ಟಂತಿರುವ ಅಥವಾ ಪ್ರಕೃತಿಯನ್ನೇ ಗೂಡಾಗಿಸಿ ಒಂದು ಕುಟುಂಬ ಹೆಣೆದುಕೊಂಡಿರುವ ಬದುಕು. ದುಃಖದಿಂದ ಸಂತೋಷವನ್ನು, ಅಥವಾ ಸುಖದಿಂದ ನೋವನ್ನು ಬೇರೆಯಾಗಿ ಕಾಣಲಾಗದ ಬದುಕು. ವಾಸ್ತವದ ನೈಜ ರೋಚಕತೆಯಿಂದ ಕೂಡಿದ ಬದುಕು. ಬದುಕೇ ಒಂದು ಬೆರಗು. ಕೆಂಪು ಕಳವೆ ಒಂದು ಗ್ರಾಮದ ಅಂತರಾಳದಲ್ಲಿರುವ ಪುಟ್ಟ ವಿಶ್ವವನ್ನು ಪದರ ಪದರವಾಗಿ ಬಿಚ್ಚಿಡುವ ಕಥೆ.         

    ಈ ಕಥೆಯ ಕುರಿತು ಮಾದನ ಎರಡು ಮಾತು

    ಇದು ಮುಖ್ಯವಾಗಿ ನನ್ನ ಅಮ್ಮನ ಕತೆ. ಅಮ್ಮನ ಕತೆಯನ್ನು ಬರೆಯಬೇಕು ಎನ್ನುವ ಹಂಬಲಕ್ಕೆ ಒಂದು ಶತಮಾನವೇ ಆಯಿತೇನೋ ಎಂದನಿಸುತ್ತಿದೆ ನನಗೆ. ಈಗಲಾದರೂ ಬರೆಯದಿದ್ದರೆ ಮತ್ತೆ ಯಾವತ್ತೂ ಬರೆಯಲಿಕ್ಕಾಗಲಿಕ್ಕಿಲ್ಲ ಎನಿಸಿ ಬರೆಯತೊಡಗಿದ್ದೇನೆ. ಅಮ್ಮನ ಬಾಯಿಂದ ನಾನು ಲೆಕ್ಕವಿಲ್ಲದಷ್ಟು ಕತೆಗಳನ್ನು ಮತ್ತೆಷ್ಟೋ ಪಾಡ್ದನಗಳನ್ನು ಕೇಳಿದ್ದೇನೆ. ಹೆಚ್ಚಿನವು ಎಲ್ಲ ಕಾಲದಲ್ಲಿಯೂ ಮಕ್ಕಳಿಗೆ ಹೊಸದಾಗಿ ತೋರುವ ಹಳೆಯ ಕತೆಗಳು ಅಥವಾ ಒಂದು ಕಾಲದ ನಿಜ ಕತೆಗಳಾದ ಅಜ್ಜಿಕತೆಗಳು ಮತ್ತು ಕಟ್ಟುಕತೆಗಳು. `ನಿನಗೆ ಇಷ್ಟೆಲ್ಲ ಕತೆ ಪಾಡ್ದನಗಳು ಹೇಗೆ ಗೊತ್ತು?' ಎಂದು ಕೇಳಿದಾಗ ಅಮ್ಮ, `ನನಗೆ ಇವೆಲ್ಲ ಹೇಳಿದ್ದು ನನ್ನ ಅಮ್ಮ ಮತ್ತು ಅಜ್ಜಿ' ಎಂದು ಹೇಳಿದ್ದಳು. ತನ್ನ ಅಜ್ಜಿ ಮತ್ತು ಅಮ್ಮ ಹೇಳಿದವುಗಳಲ್ಲದೆ ಇತರರು ಹೇಳಿದ ಕತೆಗಳನ್ನು ಕೂಡ ಅಮ್ಮ ತನ್ನ ನೆನಪಿನ ಬುತ್ತಿಗೆ ಸೇರಿಸಿಕೊಂಡಿದ್ದಳು. ವಾಸ್ತವದಲ್ಲಿ, ನಾನು ಯೋಚಿಸಲು ಕಲಿತದ್ದು, ಮಾತು ಕಲಿತದ್ದು, ಲೋಕವನ್ನು ಅರ್ಥ ಮಾಡಕೊಳ್ಳತೊಡಗಿದ್ದು ಅಮ್ಮನ ಕತೆ ಪಾಡ್ದನಗಳ ಮೂಲಕವೇ. ಅವೆಲ್ಲ ಹಿಂದೆ ಲಕ್ಷಾಂತರ ಅಜ್ಜಿಯಂದಿರು, ಅಮ್ಮಂದಿರು ಹೇಳಿದ ಕತೆಪಾಡ್ದನಗಳೇ ಆದರೂ ಯಾರೂ ಅವುಗಳನ್ನು ಬಾಯಿ ಪಾಠ ಮಾಡಿಕೊಂಡವರಲ್ಲ. ಪ್ರತಿಯೊಬ್ಬರೂ ಕತೆ ಪಾಡ್ದನಗಳನ್ನು ಹೇಳಿದ್ದು ಅವರ ಸ್ವಂತ ನುಡಿಗಟ್ಟುಗಳಲ್ಲೇ; ತಮ್ಮ ಭಾಷೆಯಲ್ಲೇ ಆದರೂ ತಮಗೆ ಗೊತ್ತಿದ್ದ ಅಷ್ಟು ಭಾಷೆಯಲ್ಲೇ. ಪ್ರತಿಯೊಬ್ಬರದೂ ಒಂದು ಸ್ವಂತ ಶೈಲಿ. ಹಾಗೆಯೇ ನನ್ನ ಅಮ್ಮನ ಕತೆ ಪಾಡ್ದನ ಹೇಳುವ ಶೈಲಿಯೂ ಅವಳದೇ. ಯಾವುದೇ ಕತೆ ಆಸಕ್ತಿ ಹುಟ್ಟಿಸುವುದು ಈ ಶೈಲಿಯೆಂಬುದರಿಂದಾಗಿಯೇ. ಅಮ್ಮನ ಕಥನ ಶೈಲಿಯ ವೈಶಿಷ್ಟ್ಯವೆಂದರೆ, ಕೆಲವು ಕಥೆಗಳನ್ನು ಅವಳು ಅದರ ವಸ್ತು ಮತ್ತು ಭಾವಕ್ಕೆ ತಕ್ಕ ಶೈಲಿಯಲ್ಲಿ ಹೇಳುತ್ತಿದ್ದುದು. ಕಾವ್ಯ ಎಂದರೆ ಏನು ಎಂದು ಯಾವತ್ತೂ ಅರ್ಥ ಮಾಡಿಕೊಳ್ಳಲಾಗದ ನನಗೆ, ನನ್ನ ಅಮ್ಮ ಹೇಳಿದ ಎಲ್ಲಾ ಕತೆ ಪಾಡ್ದನಗಳ ಭಾಷೆ ಕಾವ್ಯದಂತೆಯೇ ಇದೆ ಎಂದನಿಸುತ್ತಿತ್ತು ಎಂದು ನಾನು ಹೇಳಿದರೆ ಯಾರಾದರೂ ಏನರ್ಥ ಮಾಡಿಕೊಂಡಾರು ನನಗೆ ಗೊತ್ತಿಲ್ಲ. 

    ಹಳೆಯ ಕತೆಗಳಷ್ಟೇ ಅಲ್ಲ, ನಾವು ಬಾಲ್ಯದಿಂದ ತಾರುಣ್ಯಕ್ಕೆ ಕಾಲಿಡುವಾಗ ಅಮ್ಮ ತನ್ನ ಬದುಕಿನ ಮತ್ತು ತನ್ನ ಕಾಲದ ಜನರ ಬದುಕಿನ ನೂರಾರು ವೃತ್ತಾಂತಗಳನ್ನು ಕೂಡ ನಮಗೆ ಹೇಳುತ್ತಿದ್ದಳು. ಅವುಗಳು ಬಹುಮಟ್ಟಿಗೆ ಪೂರ್ಣ ಅಪೂರ್ಣ ಕತೆಗಳಂತೆಯೇ ಇದ್ದವು. ಕೆಲವು ಪ್ರಕರಣಗಳು ನಮ್ಮ ಕಣ್ಣಮುಂದೆಯೇ ಕತೆಗಳಾಗಿ ಬೆಳೆದು ಕೊನೆಗೊಂಡವುಗಳಾಗಿದ್ದರೆ, ಕೆಲವು ಬೆಳೆಯುತ್ತಾ ಇದ್ದವು. ಆ ಕತೆಗಳ ಮೂಲಕ ಸತ್ಯವೆಂದರೇನು ಸುಳ್ಳೆಂದರೇನು, ಯಾವುದು ಸನ್ಮಾರ್ಗ ಯಾವುದು ದುರ್ಮಾರ್ಗ, ಧೈರ್ಯ ಯಾವುದು ಹೇಡಿತನ ಯಾವುದು, ಪ್ರೀತಿ ಮನುಷ್ಯನನ್ನು ಎಲ್ಲಿಗೆ ಒಯ್ಯತ್ತದೆ ದ್ವೇಷ ಎಲ್ಲಿಗೆ ಒಯ್ಯುತ್ತದೆ ಮುಂತಾದ ನೂರಾರು ವಿಚಾರಗಳನ್ನು ನಾವು ಅರಿತುಕೊಂಡಿದ್ದೆವು. ಅಮ್ಮ ನಮಗೆ ಬರೀ ಅಮ್ಮ ಅಲ್ಲ, ಅವಳು ನಮಗೆ ಶಾಲೆಯೇ ಆಗಿದ್ದಳು. ಅಮ್ಮ ನಮಗೆ ಹೇಳಿದ ಕತೆಗಳ ಶಬ್ದಗಳನ್ನು ಲೆಕ್ಕ ಹಾಕಿದರೆ ಕೆಲವು ಸಾವಿರವಾಗಬಹುದು. ಮಾತುಗಳು ಅಥವಾ ವಾಕ್ಯಗಳು ಕೆಲವು ಲಕ್ಷ. ಅಮ್ಮ ಮತ್ತು ನಾವು ಎಷ್ಟು ಮಾತಾಡುತ್ತಿದ್ದೆವು ಎಂದರೆ ಬದುಕಿಗೆ ಅನ್ನ ಮತ್ತು ನೀರಿನಷ್ಟೇ ಮಾತು ಕೂಡ ಮುಖ್ಯ ಎಂದೆನಿಸುತ್ತಿತ್ತು ನಮಗೆ. ನಮ್ಮ ಮಾತಿನಲ್ಲಿ ಮುಖ್ಯವಾಗಿ ಇದ್ದುದು ನಮ್ಮ ದೈನಂದಿನ ಬದುಕಿನ ಸುಖ ದುಃಖಗಳ ವಿಚಾರವೇ. ಇವತ್ತು ಮಾಡಿ ಮುಗಿಸಿದ್ದರ ಬಗ್ಗೆ, ನಾಳೆ ಮಾಡಬೇಕಾಗಿರುವುದರ ಬಗ್ಗೆ, ಘಟಿಸಿದ ತಪ್ಪುಗಳ ಬಗ್ಗೆ, ಮುಂದೆ ಹಾಗಾಗದಂತೆ ಏನು ಮಾಡಬೇಕು ಎಂಬ ಬಗ್ಗೆ. ಆ ಮಾತುಗಳೆಲ್ಲ ಮುಗಿದ ಬಳಿಕ ಕತೆ ಅಥವಾ ಪಾಡ್ದನ. ಪ್ರತಿ ರಾತ್ರಿ ಬಹಳ ಹೊತ್ತಿನ ತನಕ ನಾವು ಮಾತಾಡುತ್ತಾ ಇರುತ್ತಿದ್ದೆವು. ಮಾತಾಡುತ್ತಾ, ಅಥವಾ ಕತೆ ಕೇಳುತ್ತಾ, ಅಥವಾ ಅಮ್ಮನ ಪಾಡ್ದನ ಆಲಿಸುತ್ತಾ ನಿದ್ದೆ ಹೋಗುತ್ತಿದ್ದೆವು. ಉಳಿದ ನನ್ನ ಇಬ್ಬರು ತಮ್ಮಂದಿರ ವಿಚಾರ ಏನೇ ಇರಲಿ, ನಾನಂತೂ ಮಾತು ಎಂಥ ಅದ್ಭುತ ಎಂದು ಕಂಡುಕೊಂಡದ್ದು ಅಮ್ಮ ಎಂಬ ಶಾಲೆಯಲ್ಲೇ.

    ಅಮ್ಮ ಹೇಳುತ್ತಿದ್ದ ನೂರಾರು ಕತೆಗಳನ್ನು ಆಲಿಸುತ್ತಾ ಇಂಥ ಕಥೆಗಳನ್ನು ನಾನು ಕೂಡ ಕಟ್ಟಬಹುದು ಎಂದು ಅನೇಕ ಬಾರಿ ನನಗನಿಸಿತ್ತು. ಕೆಲವನ್ನು ಮನಸಿನಲ್ಲೇ ಕಟ್ಟಿರಿಸಿದ್ದೆ. ಅಮ್ಮನ ಭಾಷೆ ಎಂದರೆ ಶಬ್ದಗಳು ಮತ್ತು ನುಡಿಗಟ್ಟುಗಳು ಮಾತ್ರವಲ್ಲ, ಅವಳ ದನಿ ಕೂಡ. ಅದನ್ನು ನಾನು ಹೇಗೆ ದಾಖಲಿಸಲಿ ಎಂದು ಚಿಂತಿಸುತ್ತಿದ್ದೆ. ಅಮ್ಮ ಹೇಳಿದ ಕತೆ ಪಾಡ್ದನಗಳನ್ನು ಬರೆದಿರಿಸುವ ನನ್ನ ಪ್ರಯತ್ನ ಸಫಲವಾಗಲೇ ಇಲ್ಲ. ಬದುಕು ನಮ್ಮನ್ನು ಎತ್ತೆತ್ತಲೋ ಒಯ್ಯುತ್ತದೆ. ಒಂದು ಶಾಲೆ ಅಥವಾ ಕಾಲೇಜಿನಲ್ಲಿ ಓದುವ ಬದಲು ಇನ್ನೊಂದು ಶಾಲೆ ಅಥವಾ ಕಾಲೇಜಿನಲ್ಲಿ ಓದಿದ್ದರಿಂದಾಗಿ ಬದುಕಿನ ಸ್ವರೂಪವೇ ಬದಲಾಗುತ್ತದೆ. ಊರು ಬದಲಾಯಿಸಿದ್ದರಿಂದ ನಮ್ಮ ಚಿಂತನೆಗಳು ಬದಲಾಗುತ್ತವೆ. ಮನೆ ಬದಲಾಯಿಸಿದ್ದರಿಂದ ಯೋಚಿಸುವ ರೀತಿ ಬದಲಾಗುತ್ತದೆ. ಉದ್ಯೋಗ ವೃತ್ತಿ ಬದಲಾದಾಗ ಚಿತ್ತವೃತ್ತಿಯೇ ಬದಲಾಗುತ್ತದೆ. ನನ್ನ ಬದುಕಿನಲ್ಲಿ ಅಮ್ಮ ಎಂಬ ಶಾಲೆಯ ಹೊರತು ಉಳಿದುದೆಲ್ಲವೂ ಬದಲಾಗಿ ಹೋಯಿತು.

    ನಮ್ಮ ಬದುಕು ಆಗುವುದು ಅದು ಆಗಬಹುದಾದ ಹಲವು ಸಾಧ್ಯತೆಗಳಲ್ಲಿ ಯಾವುದೋ ಒಂದು. ಆಯ್ಕೆ ನಮ್ಮ ಕೈಯಲ್ಲಿದೆ ಅಂದುಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ, ಅದು ನಮ್ಮ ಕೈಯಲ್ಲಿ ಇಲ್ಲ. ಬದುಕೇ ಆಯ್ಕೆ ಮಾಡುತ್ತದೆ. ನಮ್ಮ ಆಯ್ಕೆ ಅಂತ ನಮಗನಿಸುತ್ತದೆ, ಮತ್ತು ಹಾಗೆ ಹೇಳುತ್ತೇವೆ ಅಷ್ಟೆ. ಇದು ಹೀಗೇಕಾಯ್ತು ಎಂದು ಅರ್ಥ ಮಾಡಿಕೊಳ್ಳಲಿಕ್ಕಾಗದಿದ್ದಾಗ ವಿಧಿ, ಹಣೆ ಬರಹ ಎಂದೆಲ್ಲ ಹೇಳುತ್ತೇವೆ. ನಮ್ಮ ವಿಧಿ, `ನಮ್ಮ ಹಣೆಬರಹ ನಮ್ಮ ಮುಷ್ಟಿಯಲ್ಲಿದೆ’ ಎಂದು ಬದುಕಿನಲ್ಲಿ ಯಶಸ್ಸನ್ನು ಸಾಧಿಸಿದ ಬುದ್ಧಿವಂತರು ಹೇಳುತ್ತಾರೆ. ಮುಷ್ಟಿಯಲ್ಲಿದೆ ನಿಜ. ಆದರೆ ಎಷ್ಟು? ಅರ್ಧ ಮಾತ್ರ. ಉಳಿದರ್ಧ ನಮ್ಮ ನಿಯಂತ್ರಣದಲ್ಲಿ ಇಲ್ಲದ ಬದುಕಿನಲ್ಲೇ ಇರುತ್ತದೆ. ಬೇರೇನೂ ಹೇಳಲಾಗದಿದ್ದರೆ, `ಆಕಸ್ಮಿಕ’ ಎನ್ನುತ್ತೇವೆ.

    ಅಮ್ಮನ ಕತೆಗಳ ಪಾತ್ರಗಳಲ್ಲಿ ಕೆಲವು ಈಗಲೂ ಜೀವಂತವಿವೆ. ಕೆಲವು ಸತ್ತು ಹೋಗಿವೆ. ಕೆಲವು ಕಾಣೆಯಾಗಿವೆ. ಈ ಕತೆಯನ್ನು ಬರೆಯುವಾಗ ಎಲ್ಲಾ ಪಾತ್ರಗಳು ಬಂದು ನನ್ನನ್ನು ಮುತ್ತಿಕೊಳ್ಳುತ್ತಿವೆ. ಯಾರನ್ನು ಇಟ್ಟುಕೊಳ್ಳಲಿ ಯಾರನ್ನು ಬಿಡಲಿ? ಸಾವಿರ ಸಂಗತಿಗಳು. ಯಾವುದನ್ನು ಹೇಳಲಿ ಯಾವುದನ್ನು ಹೇಳದಿರಲಿ?

    ***

    ಮೂವರು ಗಂಡು ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಲು ನಮ್ಮ ಅಮ್ಮ ಎಷ್ಟು ಕಷ್ಪಪಟ್ಟಳು ಎನ್ನುವುದನ್ನು ಎಷ್ಟು ಹೇಳಿದರೂ ಹೇಳಿ ಮುಗಿಯದು. ಮುಖ್ಯವಾಗಿ ನಮ್ಮ ಅಪ್ಪ ಸತ್ತ ಮೇಲೆ ಆ ಕಷ್ಟ ಇನ್ನೂ ಹೆಚ್ಚಾಯಿತು. ಅಮ್ಮನಿಗೆ ಓದು ಬರಹ ಗೊತ್ತಿದ್ದರೆ ಅವಳೇ ಈ ಕತೆಯನ್ನು ಬರೆಯಬಹುದಿತ್ತೋ ಏನೊ. ನಾವು ಬದುಕಿದಂಥ ಬದುಕು ಪ್ರಪಂಚದಲ್ಲಿ ಎಲ್ಲೆಡೆ ನಡೆಯುತ್ತಾ ಇರುತ್ತದೆ, ನಡೆದು ಇತಿಹಾಸವಾಗದೆ ಗತಕಾಲದ ಗರ್ತವನ್ನು ಸೇರುತ್ತದೆ ಎಂದು ಇದನ್ನು ಬರೆಯುವ ನನಗೆ ಗೊತ್ತಿರುವುದಾದರೂ ಪ್ರತಿಯೊಬ್ಬ ಮನುಷ್ಯ ಒಂದು ಅನನ್ಯ ಸೃಷ್ಟಿಯಾಗಿರುವಂತೆ ಪ್ರತಿಯೊಂದು ಕತೆಯೂ ಇತರ ಕೋಟ್ಯಂತರ ಕತೆಗಳಿಗಿಂತ ಭಿನ್ನ ಎನ್ನುವುದು ನನ್ನ ನಂಬಿಕೆ. ಆ ಕಾರಣದಿಂದಲೇ ಇದನ್ನು ಬರೆಯಬೇಕೆಂದು ನನಗೆ ಅನಿಸಿರುವುದು.

    ಈ ಕತೆಯನ್ನು ಬರೆಯುತ್ತಿರುವವನು ನಾನಾದರೂ ಇದರಲ್ಲಿ ನಾಲ್ಕು ಜೀವಗಳ ಧ್ವನಿಗಳಿವೆ. ಇದು ಬರೀ ಕತೆಯಲ್ಲ. ಬದುಕಿ ಉಳಿಯಲು ಒಂದು ಬಡ ಹೆಂಗಸು ಮತ್ತು ಅವಳ ಮೂರು ಮಕ್ಕಳು ನಡೆಸಿದ ಹೋರಾಟದ ಕತೆಯಾಗಿದೆ. ಆದುದರಿಂದ ಇದನ್ನು ನಾಲ್ಕು ಜೀವಗಳ ಆತ್ಮದ ಕಥೆಯೆಂದರೂ ಸಲ್ಲುತ್ತದೆ. ಇದು ತುಂಬಾ ವಿದ್ಯಾವಂತರು, ಮಹಾ ಕವಿಗಳು, ದೊಡ್ಡ ಲೇಖಕರು, ಮಹಾನ್ ಸಾಧಕರು ಅಥವಾ ಯಶಸ್ವೀ ಎಂದು ದಾಖಲಿಸಲ್ಪಟ್ಟ ಬದುಕನ್ನು ಬದುಕಿದವರ ಆತ್ಮಕಥೆಯಂತಿರಲು ಸಾಧ್ಯವೇ ಇಲ್ಲ ಎಂಬ ಅರಿವು ನನಗಿದೆ. ಎಲ್ಲಾ ಬದುಕೂ ಬದುಕೇ, ಅರಸನೂ ಪ್ರಜೆಯೇ ಎನ್ನುವುದು ಸರಿಯಾದುದರಿಂದ ಎಲ್ಲರ ಕಥೆಯೂ ಒಂದರ್ಥದಲ್ಲಿ ಒಂದೇ ಕಥೆ ಎಂದರೆ ತಪ್ಪಲ್ಲ.

    ಯೋಚಿಸುತ್ತಿರುವಾಗಲೇ ಯೋಚನೆಯನ್ನು ದಾಟಿ ಮುಂದರಿಯುವ ಯೋಚನೆಯಂತೆ, ಬರೆಯುತ್ತಿರುವಾಗಲೇ ನಡೆಯುತ್ತಿರುವ, ಬರೆಹವನ್ನು ದಾಟಿ ಮುಂದೆ ಹೋಗುತ್ತಿರುವ ಕತೆಯನ್ನು ಬರೆಯುವುದು ಸುಲಭದ ಕೆಲಸವಲ್ಲ ಎಂದು ಆರಂಭದಲ್ಲೇ ನನಗೆ ಅರಿವಾಗಿದೆ. ಬಹುಶಃ ಇದಕ್ಕೆ `ಇದು ಅಂತ್ಯ’ ಎನ್ನುವಂಥ ಅಂತ್ಯ ಕೂಡ ಇರಲಾರದು. ಎಷ್ಟು ಹೇಳಲು ಸಾಧ್ಯವೋ ಅಷ್ಟನ್ನು ಮಾತ್ರ ಹೇಳಿ ನಿಲ್ಲಿಸಬೇಕಾಗುತ್ತದೆ.

    ಸ್ಪಷ್ಟವಾದ ಆದಿ ಅಂತ್ಯಗಳಿರುವ ನಡೆದ ಕತೆಗಳನ್ನು ಬರೆಯುವುದು ಸುಲಭ. ಅರಸರ ಕತೆಗಳಾದರೆ ಇನ್ನೂ ಸುಲಭ. ಮನಬಂದಂತೆ ಬಣ್ಣಬಣ್ಣದ ರೆಕ್ಕೆ ಪುಕ್ಕಗಳನ್ನು ಹಚ್ಚಿ ಸಿಂಗರಿಸಬಹುದು. ಬಡ ಪ್ರಜೆಯ ಕರ್ಮಕಾಂಡವನ್ನು ಹೇಳಹೊರಟರೆ ಕೇಳುವವರೂ ಇಲ್ಲ, ಓದುವವರೂ ಇಲ್ಲ. ಅದಕ್ಕೆ ಬಣ್ಣ ತುಂಬಿ ರಂಗಾಗಿಸಲು ಕೂಡ ಸಾಧ್ಯವಿಲ್ಲ. ಆದರೆ ಬಡ ಪ್ರಜೆಯ ಬದುಕು ಕೂಡ ಒಂದು ಕತೆಯೇ ಎಂಬುದು ಅರಸನ ಕತೆಯಷ್ಟೇ ಸತ್ಯ ಎನ್ನುವುದನ್ನು ಕತೆ ಓದುವವರೆಲ್ಲ ಒಪ್ಪಿಯಾರು.

    ಈ ಕತೆಯನ್ನು ನಮ್ಮ ಅನುಭವದ ವರದಿಯ ರೂಪದಲ್ಲಿ ಹೇಳುವುದಕ್ಕಿಂತ ನಮ್ಮ ಬದುಕಿನ ನೂರಾರು ಅನುಭವಗಳನ್ನು ಪ್ರಸಂಗಗಳ ರೂಪದಲ್ಲಿ ಹೇಳುವುದು ಉಚಿತ ಎಂದು ನಮಗೆ ಅನಿಸುತ್ತದೆ. ವಾಸ್ತವದಲ್ಲಿ, ನಾವು ಮೂವರೂ ಜೊತೆಯಾಗಿ ಕುಳಿತು ಒಬ್ಬರಿಗೊಬ್ಬರು ಓದಿ ಹೇಳುತ್ತಾ ಅಲ್ಲಲ್ಲೇ ವಿವರಗಳನ್ನು ನೆನಪಿಸಿಕೊಳ್ಳುತ್ತಾ ಇದನ್ನು ಬರೆಯುತ್ತಿದ್ದೇವೆ. ಕೆಲವೊಮ್ಮೆ ಸ್ಫೂರ್ತಿಯ ಅಗ್ನಿಕಣ ನನ್ನಿಂದಲೇ ಒಂದಷ್ಟು ಬರೆಸಿಬಿಡುತ್ತದೆ. ಇದು ದುಃಖ ಅಥವಾ ದುರಂತ ಇಲ್ಲದ ಕತೆಯಾಗಿರುವುದರಿಂದ, `ಬದುಕಿನಲ್ಲಿ ದುಃಖ ಮತ್ತು ದುರಂತ ಬೇಡ’ ಎನ್ನುವ ಯಾರಿಗಾದರೂ ಈ ಕತೆಯನ್ನು ಪೂರ್ತಿ ಕೇಳಿಬಿಡೋಣ ಅಂತನಿಸಬಹುದು ಎಂದು ನನಗನಿಸುತ್ತದೆ. ಮತ್ತು, ದುಃಖ ಮತ್ತು ದುರಂತದಿಂದ ಹೊರಬರಲು ಇರುವ ನೂರಾರು ದಾರಿಗಳಂತೆ ಇಲ್ಲೂ ಇವೆ ತನ್ನಂತವರು ಕಂಡುಕೊಂಡ ಕೆಲವು ಸೂಕ್ಷ ದಾರಿಗಳು ಎಂದೆನಿಸಬಹುದು.

    ಒಂದು ದೃಷ್ಟಿಯಿಂದ ಎಲ್ಲಾ ಬದುಕು, ಎಲ್ಲರ ಬದುಕು ಕತೆಯೇ ಅಲ್ಲವೆ? ಬದುಕಿಗಿಂತ ಹೆಚ್ಚು ಆಸಕ್ತಿಯುತವಾದುದು ಏನಾದರೂ ಇದ್ದರೆ ಅದು ಬದುಕಿನ ಕತೆಯೇ ಅಲ್ಲವೆ? ಅತ್ಯಂತ ದಾರುಣವಾದ ಬದುಕನ್ನು ಬದುಕಿ, ಹೇಗೋ ಉಳಿದುಕೊಂಡು, ಸಿರಿವಂತರಾದ ಬಡವರು ತಾವು ಬಡವರಾಗಿದ್ದೆವು ಎಂಬುದನ್ನು ಮರೆತವರಂತೆ ಜೀವಿಸತೊಡಗಿದರೂ ತಮ್ಮ ಬಡತನದ ಬದುಕಿನ ಕತೆಯನ್ನು ಅದೆಷ್ಟು ಚೆನ್ನಾಗಿ ಮೆಲುಕು ಹಾಕುವುದಿಲ್ಲ? ಅಚ್ಚರಿಯ ವಿಚಾರವೆಂದರೆ, ಕೊನೆಯ ತನಕ ಬಡವರಾಗಿಯೇ ಉಳಿದವರು ತಾವು ಆ ತನಕ ಜೀವಿಸಿಯೇ ಇಲ್ಲ ಎಂಬಂತೆ ತಮ್ಮ ಬದುಕಿನ ಬವಣೆಯ ಕುರಿತು ಒಂದಕ್ಷರವನ್ನೂ ಹೇಳುವುದಿಲ್ಲ. ಆದರೆ ಅವರು ಕೂಡ ಬಡವರಾಗಿದ್ದು ಸಿರಿವಂತರಾದವರ ಕತೆಯನ್ನು ಕೇಳುವುದರಲ್ಲಿ ಮತ್ತು ಇತರರಿಗೆ ಹೇಳುವುದರಲ್ಲಿ ಬಹಳ ಆಸಕ್ತರಾಗಿರುತ್ತಾರೆ!

    ಕತೆಯಷ್ಟು ಆಸಕ್ತಿಯುತವಾದುದು ಇನ್ನೊಂದಿಲ್ಲ. ಜನ ಹಸಿವನ್ನು ಕೂಡ ಮರೆತು ಕತೆಯನ್ನು ಕೇಳುತ್ತಾ ಕುಳಿತುಕೊಳ್ಳುತ್ತಾರೆ; ಗಂಟೆಗಟ್ಟಳೆ ಹೇಳುತ್ತಾ ಕುಳಿತುಕೊಳ್ಳುತ್ತಾರೆ! ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು, ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುವುದು ಕೂಡ ತೀರಾ ಸಾಮಾನ್ಯ.

    ರಾಮಾಯಣ, ಮಹಾಭಾರತ, ಬೈಬಲ್, ಕುರಾನ್ ಮುಂತಾದ್ದು ಕೂಡ ಬದುಕಿನ ಕತೆಗಳೇ. ಅವುಗಳನ್ನು ತಿರುಚಿ ಬರೆದದ್ದು, ಇದ್ದದ್ದಕ್ಕೆ ಇಲ್ಲದ್ದನ್ನು ಸೇರಿಸಿ ಬರೆದದ್ದು ಕೂಡ ಕತೆಗಳೇ. ರಾಮಾಯಣ ಮಹಾಭಾರತದ ನಂತರ ಮಾತ್ರವಲ್ಲ, ಬೈಬಲ್ ಕುರಾನಿನ ರಚನೆಯ ಮೊದಲು `ಲೇಖಕರು’ ಎಂದು ಕರೆಸಿಕೊಳ್ಳುವವರೆಲ್ಲ ಬರೆದ ಅಸಂಖ್ಯ ಕತೆಗಳು ಬದುಕಿನ ಕತೆಗಳೇ ಅಲ್ಲವೆ? ಆದ್ದರಿಂದಲೇ ಕತೆ ನಮ್ಮ ಜೊತೆಗೆ ಮತ್ತು ನಾವು ಕತೆಯ ಜೊತೆಗೆ ಬದುಕುತ್ತಿರುವುದಲ್ಲವೆ? ಕತೆಗಳಿಲ್ಲದಿರುತ್ತಿದ್ದರೆ ನಮಗೆ ಬಹುಶಃ ದೇವರು ಕೂಡ ಸಿಗುತ್ತಿರಲಿಲ್ಲ. ನಮಗೆ ಸಿಕ್ಕ ಎಲ್ಲಾ ದೇವರುಗಳು ಕತೆಗಳು ಕೊಟ್ಟ ದೇವರ ಪ್ರತಿಮೆಗಳೇ ಅಲ್ಲವೆ? ದೇವರು ಅನಿವಾರ್ಯವೆಂದಾದರೆ, ಕತೆಯೂ ಅನಿವಾರ್ಯವೇ.

    ನನ್ನ ಪೂರ್ವಜರು ಯಾರೂ ಪಂಡಿತರಲ್ಲ, ವಿದ್ಯಾವಂತರೂ ಅಲ್ಲ. ನಾಚಿಕೆ ಬಿಟ್ಟು ಒಂದೇ ಶಬ್ದದಲ್ಲಿ ಹೇಳಬೇಕೆಂದರೆ, `ಅನಕ್ಷರಸ್ಥರು’ ಎಂದು ಹೇಳಿದರೆ ಸಾಕು, ಎಲ್ಲ ಹೇಳಿದಂತಾಗುತ್ತದೆ. ಸಾಹಿತ್ಯ ಎಂದರೇನೆಂದು ನನಗೆ ಗೊತ್ತಿಲ್ಲದಿರುವುದರಿಂದ ನನ್ನ ಈ ಬರೆಹ ಸಾಹಿತ್ಯ ಎಂದನಿಸಿಕೊಳ್ಳುವುದಿಲ್ಲ. ವಿದ್ಯೆ ಎಂದರೇನೆಂದು ನನ್ನ ತಾಯಿಗಾಗಲಿ ತಂದೆಗಾಗಲಿ ಗೊತ್ತಿರಲಿಲ್ಲ. ತಾಯಿ ವಿದ್ಯಾವಂತಳಾಗಿದ್ದರೆ ಮಾತ್ರ ಮಕ್ಕಳು ವಿದ್ಯಾವಂತರಾಗುತ್ತಾರೆ ಎನ್ನುವ ಮಾತು ಸರಿ. ಆದರೆ ನಿರಕ್ಷರಿಯಾಗಿದ್ದರೂ ನನ್ನ ಅಮ್ಮ ವಿದ್ಯಾವಂತಳು ಎಂದೇ ನನ್ನ ಭಾವನೆ. ನನ್ನೊಬ್ಬನದಷ್ಟೇ ಅಲ್ಲ, ನನ್ನ ಒಡಹುಟ್ಟಿದವರೂ ಹಾಗೆಯೇ ಭಾವಿಸಿದ್ದಾರೆ.  ನನ್ನ ಬರೆಹದ ಭಾಷೆ ಬಹುಮಟ್ಟಿಗೆ ಅಮ್ಮನ ಮಾತಿನ ಭಾಷೆಯೇ. ಬರೆಹದ ಭಾಷೆಯ ಪರಿಚಯ ನನಗಿಲ್ಲ. ಶೈಲಿ ಎಂದರೇನೆಂದು ಗೊತ್ತಿಲ್ಲ.

    ಈ ಕತೆಯನ್ನು ಎಲ್ಲಿ ಆರಂಭಿಸಬೇಕು ಹೇಗೆ ಆರಂಭಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ನಾಲ್ವರ ಸಂಭಾಷಣೆಯನ್ನು ಮತ್ತು ಅಭಿಪ್ರಾಯಗಳನ್ನು ಆಗಾಗ ದಾಖಲಿಸಬೇಕಾದ ಅಗತ್ಯವಿರುವುದರಿಂದ ನಾನು ಈ ನಾಲ್ವರ ಹೆಸರುಗಳನ್ನು ಹೇಳಿಬಿಡುವುದು ಒಳ್ಳೆಯದು. ಮಾತನ್ನು ಬರೆಹ ರೂಪದಲ್ಲಿ ದಾಖಲಿಸುತ್ತಿರುವ ನನ್ನ ಹೆಸರು ಮಾದ. ನನ್ನ ತಮ್ಮನ ಹೆಸರು ಜೂಜ, ಅವನ ತಮ್ಮನ ಹೆಸರು ಬೂದ. ನಾವು ಹರಿಜನರವರಲ್ಲ. ಹರಿಜನರಾಗಿರುತ್ತಿದ್ದರೆ ಹುಟ್ಟಿದ ದಿನದ ಹೆಸರಿನ ಆಧಾರದಲ್ಲಿ ನಮಗೆ ಆದಿತ್ಯವಾರ ಹುಟ್ಟಿದ್ದಕ್ಕೆ ಐತ, ಶನಿವಾರ ಹುಟ್ಟಿದ್ದಕ್ಕೆ ಚನಿಯ, ಶುಕ್ರವಾರ ಹುಟ್ಟಿದ್ದಕ್ಕೆ ಚುಕ್ರ ಮುಂತಾದ ಒಳ್ಳೆಯ ಹೆಸರುಗಳು ಇರುತ್ತಿದ್ದವು. ನಮ್ಮ ಅಮ್ಮನ ಹೆಸರು ಮಾನು ಎಂದು. ಅವಳು ಹುಟ್ಟಿದ್ದು ಮಂಗಳವಾರವಂತೆ. ಹರಿಜನರವಳಾಗುತ್ತಿದ್ದರೆ ಅವಳಿಗೂ ಮಂಗು ಎಂಬ ಒಂದು ಚೆಂದದ ಹೆಸರು ಇರುತ್ತಿತ್ತು ನಮ್ಮ ಅಪ್ಪನ ಹೆಸರು ಬಿರುಮ ಎಂದು. ಅವನು ಹುಟ್ಟಿದ್ದು ಯಾವ ವಾರ ಎಂದು ನಮಗೆ ಗೊತ್ತಿಲ್ಲ.

    ಆತ್ಮಕಥೆಯಲ್ಲಿ ನಿಜವಾದ ಹೆಸರುಗಳಿಗೆ ಬದಲಿ ಹೆಸರುಗಳನ್ನು ಬರೆಯಬಾರದು ಅನ್ನುವ ಅಭಿಪ್ರಾಯ ಸರಿಯೋ ತಪ್ಪೋ ನನಗೆ ಗೊತ್ತಿಲ್ಲ. ನಿಜವಾದ ಹೆಸರುಗಳನ್ನು ಮರೆಸುವುದಕ್ಕೆ ಮಾನವೀಯವಾದ ಕಾರಣಗಳಿರಬಹುದು. ಅದೇನೇ ಇರಲಿ, ನಾನು ಈ ನನ್ನ ಬರೆಹದಲ್ಲಿ ಯಾವ ನಿಜ ಹೆಸರಿಗೂ ಬದಲಿ ಹೆಸರು ಬರೆದಿಲ್ಲ.

    ನಾವು ಹರಿಜನರಷ್ಟು ಉತ್ತಮರು ಕೂಡ ಅಲ್ಲದ ಶೂದ್ರರು. ಆದರೆ ನಮಗೂ ಜಾತಿ ಇದೆ. ಈ ದೇಶದ ಮಣ್ಣಿನಲ್ಲಿ ಹುಟ್ಟಿದವನಿಗೆ ಜಾತಿ ಎಂಬುದು ಇಲ್ಲದಿರಲು ಸಾಧ್ಯವೆ? ಹಳ್ಳಿಯಲ್ಲಿ ಒಬ್ಬನನ್ನು ಇನ್ನೊಬ್ಬ ಗುರುತಿಸುವುದೇ ಅವನ ಜಾತಿಯ ಮೂಲಕ. ಜಾತಿ ಹೆಸರು ಮತ್ತು `ರವನು’ ಅಥವಾ `ರವಳು’ ಎಂದು. ವ್ಯಾವಹಾರಿಕವಾದ ಮಾತಿನಲ್ಲಿ ಇಂಥ `ರವನು’ ಅಥವಾ ಇಂಥ `ರವಳು’ ಎಂಬ ಗುರುತಿಸುವಿಕೆಯಲ್ಲಿ ಗೌರವ ಭಾವನೆ ಎನ್ನುವುದು ಇಲ್ಲ. ಯಾವುದೇ ಭಾವನೆ ಇಲ್ಲದಿದ್ದರೆ ಅದೇ ಸುಖಕರ; ಯಾಕೆಂದರೆ, ನಿರ್ಭಾವುಕವಲ್ಲವಾದರೆ ಇರುವುದು ತಿರಸ್ಕಾರ ಮಾತ್ರ. ಯಾವತ್ತೂ ಗೌರವ ಎಂಬುದು ಇಲ್ಲ. ಹುಟ್ಟಿನಿಂದ ಸಾಯುವ ವರೆಗೂ ಇಲ್ಲ. ಏನು ಮಾಡಿದರೂ ಇಲ್ಲ. ರಾಮನಂತೆ ಅಯೋಧ್ಯೆಯನ್ನು ಆಳಿದರೂ ಇಲ್ಲ, ಹನುಮಂತನಂತೆ ಲಂಕೆಗೆ ಹಾರಿದರೂ ಇಲ್ಲ. ಸಾಮಾಜಿಕವಾಗಿ ಗೌರವ ಎನ್ನುವುದು `ರು' ಎಂಬ ಏಕಾಕ್ಷರದಲ್ಲಿ ಅಡಗಿದೆ. `ರವನು' ಮತ್ತು `ರವಳು' ನಲ್ಲಿ ಇರಲು ಸಾಧ್ಯವೇ ಇಲ್ಲ.

    ಹಾಂ, ನಾನು ನಮ್ಮ ಕತೆಯನ್ನು ಬರೆಯಬೇಕಾದರೆ ಅದು ಸಾಧ್ಯ ಕನ್ನಡದಲ್ಲಿ ಮಾತ್ರ. ಆದರೆ ಕನ್ನಡ ನಮ್ಮ ಮಾತೃಭಾಷೆಯಲ್ಲ. ನಮ್ಮ ಮಾತೃಭಾಷೆ ಬಹುಮಟ್ಟಿಗೆ ತುಳು ಭಾಷೆಯನ್ನು ಹೋಲುವ ಒಂದು ಭಾಷೆ. ಆದರೂ ಕನ್ನಡವನ್ನು ಕೂಡ ನಾವು ನಮ್ಮ ಮಾತೃಭಾಷೆಯೆಂದೇ ಪರಿಗಣಿಸುತ್ತೇವೆ. ಕನ್ನಡ ನಮ್ಮ ಮಾತೃಭಾಷೆಯಾದುದು ನಾವು ಶಾಲೆಗೆ ಹೋದ ಒಂದೇ ಕಾರಣದಿಂದ. ಒಂದನೇ ತರಗತಿಯಿಂದಲೇ ನಮ್ಮ ವಿಶಿಷ್ಟವಾದ ತುಳುವಿನ ಜೊತೆಗೆ ಕನ್ನಡ ಕೂಡ ನಮ್ಮ ಮಾತೃಭಾಷೆಯಾಯಿತು. ನಮ್ಮ ಸುತ್ತ ಮುತ್ತ ಬೇರೆ ಕೆಲವು ಭಾಷೆಗಳನ್ನಾಡುವವರು ಇದ್ದಾರೆ. ನಾನು ಬರೆದದ್ದು ನಿಮಗೆ ಅರ್ಥವಾಗಬೇಕೆಂಬ ಉದ್ದೇಶ ನನಗಿರುವುದರಿಂದ ಬೇರೆ ಭಾಷೆಯವರ ಮಾತುಗಳನ್ನು ನಾನು ಕನ್ನಡಕ್ಕೆ ತರ್ಜುಮೆ ಮಾಡಿಯೇ ಹೇಳಬೇಕಾಗುತ್ತದೆ.

    ನಮ್ಮ ಜಾತಿಯ ಹೆಸರು ಮಾರ ಎಂದು. ಈ ಹೆಸರಿನ ಕಾರಣದಿಂದ ನಮ್ಮನ್ನು ಕಾಮನ ಅಥವಾ ಮನ್ಮಥನ ವಂಶದವರೆಂದು ಯಾರಾದರೂ ಪಂಡಿತರು ಭಾವಿಸಿದರೆ ಮನ್ಮಥನಿಗೂ ಅವನ ವಂಶದವರಿಗೂ ಅಪಚಾರವೆಸಗಿದಂತಾದೀತು. ಕಾಮ ಅರ್ಥಾತ್ ಮನ್ಮಥನಿಗೂ ನಮ್ಮಂಥ ಬಡವರಿಗೂ ಯಾವ ಸಂಬಂಧವೂ ಇಲ್ಲ. ಮನ್ಮಥ ಜಾತಿಯುಳ್ಳವನೋ, ಜಾತ್ಯತೀತನೋ ಗೊತ್ತಿಲ್ಲ; ಬಹುಶ: ಜಾತ್ಯತೀತನೇ. ಆದರೆ ಅವನು ಸಿರಿವಂತರ ಸಂಬಂದಿಕನು. ನಮ್ಮ ಹೆಸರುಗಳೇ ಸೂಚಿಸುವಂತೆ ಬಡವರಲ್ಲಿ ಬಡವರಾಗಿರುವ ನಮಗೆ ಮನ್ಮಥನ ಸಂಬಂಧವಿರಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕವಾದ ಅಥವಾ ನಿಜದ ಬದುಕಿಗೆ ಸಂಬಂಧಿಸದ ಕಾಮ ಎಂಬುದು ಇಲ್ಲ. ನಮ್ಮದು ಬರೀ ಬದುಕು. 

    ನಾವು ಮೂವರು ಅಣ್ಣತಮ್ಮಂದಿರು ನಮ್ಮ ಜಾತಿಯ ಹೆಸರಿನ ಅರ್ಥವನ್ನು ನಾನಾ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದೆವು. `ಮಾರ’ ಎಂದರೆ, `ಮಾರಲು ಏನೂ ಇಲ್ಲದವನು ಎಂದು ಅರ್ಥ’ ಎಂದು ನಾನು ಹೇಳಿದರೆ, `ಮಾರ’ ಎಂದರೆ `ಏನನ್ನೂ ಮಾರಲಾರದವನು’ ಎಂದು ಜೂಜ ಹೇಳುತ್ತಿದ್ದ. `ಮಾರ’ ಎಂದರೆ `ಇರುವುದೇನನ್ನೂ ಮಾರುವ ಸಾಮಥ್ರ್ಯ ಇಲ್ಲದವನು’ ಎಂದು ನಾನು ಹೇಳಿದರೆ, `ಮಾರ’ ಎಂದರೆ `ಮಾರಬಹುದಾದುದನ್ನು ಕೂಡ ಮಾರದವನು’ ಎಂದು ಬೂದ ಹೇಳುತ್ತಿದ್ದ. ಈ ಪರಿಯ ತರ್ಕದ ಜೊತೆಗೆ ಭಟ್ಟ, ಶೆಟ್ಟಿ, ಪೊರ್ಬು, ಪೈ ಮುಂತಾದ ನೂರಾರು ಶಬ್ದಗಳನ್ನು ಕೂಡ ನಾವು ವಿಶ್ಲೇಷಿಸುತ್ತಿದ್ದೆವು.

    ಒಬ್ಬ ಮನುಷ್ಯ ಯವ ಜಾತಿಯವನೂ ಅಲ್ಲ ಅರ್ಥಾತ್ ಒಬ್ಬ ಮನುಷ್ಯನಿಗೆ ಜಾತಿಯೇ ಇಲ್ಲ ಎಂದಾದರೆ ಅವನನ್ನು ಇತರ ಮನುಷ್ಯರು ಹೇಗೆ ಗುರುತಿಸುತ್ತಾರೆ? ಗುರುತಿಸುವುದೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಅಂಥ ಮನುಷ್ಯನಿಗೆ ಬಹಳ ಸಂದರ್ಭಗಳಲ್ಲಿ ಬದುಕುತ್ತಿರುವುದಕ್ಕೆ ಸಮರ್ಥನೆಂಯ ಸಿಗುವುದಿಲ್ಲ. ಕೆಲವು ಜಾತಿಯವರಿಗೆ ಹುಟ್ಟಿನಿಂದಲೇ ಬರುವಂಥ ಗೌರವ ಇದೆ. ಕೆಲವು ಜಾತಿಯವರಿಗೆ ಏನು ಅಪರಾಧ ಮಾಡಿದರೂ ಅವರ ಜಾತಿಯವರಿಂದ ಕ್ಷಮೆ ಇದೆ. ಏನು ಕೆಟ್ಟದು ಮಾಡಿದರೂ ಅದನ್ನು ಕೆಟ್ಟದು ಅಥವಾ ಅನೈತಿಕ ಅಂತ ಗುರುತಿಸುವ ಕ್ರಮವೇ ಇಲ್ಲದ ಜಾತಿಗಳಿವೆ. ಸತ್ಯ ಮತ್ತು ಸುಳ್ಳು ಎರಡೂ ಒಂದೇ ಎಂಬಂತೆ ನಡೆದುಕೊಳ್ಳುವ ಜಾತಿಗಳು ಕೂಡ ಇವೆ. `ಜಾತಿಯಿಲ್ಲದವನಿಲ್ಲ' ಎಂಬಂಥ ಈ ಜಗತ್ತಿನಲ್ಲಿ `ಜಾತಿಯಿಲ್ಲದವನು' ಅತ್ಯಂತ ಅಪರೂಪದ ಪ್ರಾಣಿಯೇ ಸರಿ. ಯಾವ ಜಾತಿಯವನೂ ಅಲ್ಲದಿರುವವನು ಅನಾಮಧೇಯ ಎಂದರೂ ಸರಿ; ಅಥವಾ `ಬದುಕಿಲ್ಲದವನು' ಎಂದರೂ ತಪ್ಪಲ್ಲ, ಯಾಕೆಂದರೆ, ಕೇವಲ ಹೆಸರು ಸಮಾಜದಲ್ಲಿ `ಗುರುತು’ ಅಲ್ಲ. ಆದುದರಿಂದ ಗುರುತಿಸುವವರೇ ಇಲ್ಲ!

    ನಮ್ಮದು ಏನೆಂದು ಯಾರಿಗೂ ಗೊತ್ತಿಲ್ಲದ ಜಾತಿ. ಇದರಿಂದ ನಮಗೆ ಕೆಲವು ಸುಖಕರ ಅನುಕೂಲಗಳು ಇವೆ. ಜಾತಿವಂತರಿಗಾದರೋ ಇವು ಬಹಳ ದುಃಖಕರವಾದ ಅನುಕೂಲಗಳು. ಅವುಗಳಲ್ಲಿ ಮುಖ್ಯವಾದುದು, ಊರಲ್ಲಿ ಜಾತಿಯಿರುವವರಲ್ಲಿ ನಡೆಯುವ ಮದುವೆ ಮುಂತಾದ ಮಂಗಳ ಕಾರ್ಯಗಳಿಗೆ ಆಮಂತ್ರಣ ಇಲ್ಲದಿರುವುದು. ಜಾತಿ ಸಂಘಗಳಿಗೆ ಸೇರಲು ಆಹ್ವಾನ ಇಲ್ಲದಿರುವುದು. `ನಮ್ಮ ಜಾತಿಯವರು’ ಎಂಬ ಒಂದೇ ಕಾರಣದಿಂದ ಬಂದು ಮಾತಾಡಿಸಿಕೊಂಡು ಹೋಗುವವರು ಇಲ್ಲದಿರುವುದು. ಸತ್ತಾಗ ಹೆಣ ಎತ್ತಲು `ಜಾತಿಯವರು’ ಎಂಬವರು ಇಲ್ಲದಿರುವುದು. ಒಂದೇ ಶಬ್ದದಲ್ಲಿ ಹೇಳುವುದಾದರೆ `ಜಾತಿ ಬಹಿಷ್ಕತರಾ’ಗಿರುವುದು. `ಜಾತಿ ಬಹಿಷ್ಕತ’ನಾದರೂ ಜಾತಿ ಹೋಗುವುದಿಲ್ಲ ಎನ್ನುವುದನ್ನರಿಯದ ಜಾತೀಯರು ನಿಜಕ್ಕೂ ಮೂರ್ಖರೇ ಸರಿ.

    ಯಾವ ಜಾತಿಗೂ ಸೇರದಿರುವ ಕಾರಣದಿಂದ ನಾವು ಇಷ್ಟು ಕಾಲ ಅನುಭವಿಸಿದ ಶಾಂತಿ ಸಮಾಧಾನವೇ ಹೆಚ್ಚು ಎಂದು ಹೇಳಬಹುದು. ಸ್ವಜಾತಿ ಮತ್ಸರ ಎನ್ನುವಂಥದೊಂದಿದೆ ಎಂದು ನಮಗೆ ಕೇಳಿ ಮಾತ್ರ ಗೊತ್ತು. ಅದಕ್ಕೆ ಗುರಿಯಾಗುವ ಕೆಟ್ಟ ಅವಕಾಶ ನಮಗೆ ಇಲ್ಲ. ಜಾತಿ ಸಂಘಗಳು ಕಾಲ ಕಾಲಕ್ಕೆ ಹಣ ಸಂಗ್ರಹಿಸಲಿಕ್ಕೆಂದೇ ಏರ್ಪಡಿಸುವ ಅರ್ಥಹೀನ ಕಾರ್ಯಕ್ರಮಗಳಿಗೆ ವಂತಿಗೆ ಕೇಳುವವರ ಪೀಡೆ ಇಲ್ಲ. ಊಟಕ್ಕೆ ಕೂಡ ಗತಿಯಿಲ್ಲದವರು ವಂತಿಗೆ ನೀಡುವುದಾದರೂ ಹೇಗೆ? ಎಲ್ಲಕ್ಕಿಂತ ಮುಖ್ಯವಾಗಿ, ಕುಲವೇ ಇಲ್ಲದ ನಮಗೆ ಕುಲ ಇರುವವರಂತೆ ಕುಲದ ಗುರಿಕಾರರು ಅಥವಾ ಕುಲಪುರೋಹಿತರ ಕಾಲಿಗೆ ಬೀಳುವ ಉಪದ್ವ್ಯಾಪ ಇರಲಿಲ್ಲ. ಕುಲದೇವರಿಲ್ಲದ್ದರಿಂದ ಕುಲ ದೇವರಿಗೆ ಮತ್ತು ಕುಲಸ್ಥರಿಗೆ ಸಂಬಂಧಿಸಿದ ಯಾವ ತಕರಾರೂ ಇಲ್ಲದೆ ನಮಗಿಷ್ಟ ಕಂಡ ದೇವರ ಬಳಿ ಹೋಗಬಹುದು. ದೇವರೇ ಬೇಡ ಎಂದರೂ ಪ್ರಶ್ನಿಸುವವರಿಲ್ಲ.

    ನಮ್ಮ ಗ್ರಾಮದಲ್ಲಿ ದೇವರನ್ನು ನಂಬುವುದು ಅಥವಾ ಆಸ್ತಿಕರಾಗಿರುವುದು ಎಂದರೆ ಪ್ರತಿ ವರ್ಷ ನಡೆಯುವ ಊರ ದೇವಾಲಯದ ಏಳು ಅಥವಾ ಒಂಬತ್ತು ದಿನದ ಜಾತ್ರೆಗೆ ಒಂದೆರಡು ದಿನ ಹೋಗುವುದು ಎಂದು ಅರ್ಥ. ಸೋಮಾರಿ ಭಕ್ತರು ಒಂಬತ್ತು ದಿನವೂ ಹೋಗಿ ದೇವರನ್ನು ಹುಡುಕುತ್ತಿರುತ್ತಾರೆ. ಜಾತ್ರೆ ಎನ್ನುವಂಥದು ಉಂಟಾಗುವುದು ಹಾಗೆ ಹೋಗುವ ಮಂದಿಯಿಂದಲೇ ಅಲ್ಲವೆ? ಅಂಥ ಜಾತ್ರೆಗಳಿಗೆ ಒಂದೆರಡು ದಿನ ನಾವು ಕೂಡ ಹೋಗುತ್ತಿದ್ದೆವು. ಎಲ್ಲರ ದೇವರು ನಮ್ಮ ದೇವರು. ನಮಗೆ ಪ್ರತ್ಯೇಕ ದೇವರಿಲ್ಲ. ದೇವರನ್ನು ನಂಬುವುದು ಅಂದರೇನು, ಹೇಗೆ ಎಂದು ನಮಗೆ ಗೊತ್ತಿಲ್ಲ. ದೇವರಿದ್ದಾನೆ ಎಂದು ನಾವು ಹೇಳುವುದಿಲ್ಲ, ಇಲ್ಲ ಎಂದೂ ಹೇಳುವುದಿಲ್ಲ. ಯಾಕೆಂದರೆ, ದೇವರಿರುವುದೂ ನಮಗೆ ಗೊತ್ತಿಲ್ಲ, ಇಲ್ಲದಿರುವುದೂ ಗೊತ್ತಿಲ್ಲ. 

    ಬೇರೆ ಬೇರೆ ಊರುಗಳಲ್ಲಿ ಕಾಲಕಾಲಕ್ಕೆ ನಡೆಯುವ ದೊಡ್ಡ ಮಟ್ಟದ ಜಗಳದಂಥ ಜಗಳ ಸಣ್ಣ ಮಟ್ಟದಲ್ಲಿ ನಮ್ಮ ಗ್ರಾಮದಲ್ಲಿ ಕೂಡ ಒಂದೆರಡು ಬಾರಿ ನಡೆದು ನಮ್ಮ ಗ್ರಾಮದ ಹೆಸರು ಕೂಡ ಸುದ್ದಿ ಪತ್ರಿಕೆಗಳಲ್ಲಿ ಬಂದದ್ದಿದೆ. ಊರಲ್ಲಿರುವವರೆಲ್ಲ ಸೇರಿ ಜಾತಿಯ ಮೂತಿ ನೋಡದೆ ಹೊಡೆದು ಬಡೆದು ಗುಲ್ಲೆಬ್ಬಿಸಿದ ಆ ಬಹಿರ್ಕಲಹದಲ್ಲಿ ನಮ್ಮನ್ನು ಸೇರಿಸಿಕೊಳ್ಳುವ ಪ್ರಯತ್ನಕ್ಕೆ ಯಾರೂ ಕೈ ಹಾಕದಿದ್ದುದರಿಂದ ನಾವು `ಮಾರ' ಆಗಿರುವುದು ಮಹಾಭಾಗ್ಯ ಎಂದುಕೊಳ್ಳುವಂತಾಗಿತ್ತು. ಒಮ್ಮೆ ಒಂದು ಹೆಣ್ಣಿನ ಕಾರಣಕ್ಕೆ ಹೊಡೆದಾಟ ಆರಂಭಿಸಿದವರು ಬೇರೆ ಬೇರೆ ಜಾತಿಗೆ ಸೇರಿದ ಇಬ್ಬರು ಯುವಕರು. ಹೊಡೆದಾಟದಲ್ಲಿ ಗಾಯಗಳಾಗಿ ಇಬ್ಬರೂ ಸಾವಿಗೆ ಹತ್ತಿರ ಹತ್ತಿರವಾದರೂ ಸಾಯಲಿಲ್ಲ. ಆದರೆ ಅನಂತರ ನಡೆದ ಕಲಹದಲ್ಲಿ ಒಬ್ಬಿಬ್ಬರು ಸತ್ತರು ಮತ್ತು ಹಲವರ ಮನೆಗಳು ಬೆಂಕಿಗೆ ಆಹುತಿಯಾದೆವು. ನಮಗೆ ನಷ್ಟವಾದದ್ದು ಎರಡು ರಾತ್ರಿಯ ನಿದ್ರೆ ಮಾತ್ರ ಎಂಬುದನ್ನು ಈಗಲೂ ನೆನಪಿಸಿಕೊಂಡು ಖುಷಿಪಡುತ್ತೇವೆ.   

    ಸಮಾಜದಲ್ಲಿ ಬಹುಸಂಖ್ಯಾತ ಜಾತಿಗಳು ಮತ್ತು ಅಲ್ಪಸಂಖ್ಯಾತ ಜಾತಿಗಳು, ಶ್ರೀಮಂತ ಜಾತಿಗಳು, ಬಡ ಜಾತಿಗಳು ಎಂದು ಇದೆ. ಆ ಧರ್ಮ ಈ ಧರ್ಮ, ಆ ಮತ ಈ ಮತ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ಅವೆಲ್ಲ ಧರ್ಮಗಳೂ ಅಲ್ಲ, ಮತಗಳೂ ಅಲ್ಲ. ಅವುಗಳು ಯಕಶ್ಚಿತ್ ಜಾತಿಗಳೇ ವಿನಾ ಈ ಸಮಾಜದಲ್ಲಿ ಬೇರೇನಲ್ಲ.

    ಜಾತಿಯೊಳಗೇ ಮೇಲು ಕೀಳು ಎಂದು ಇದೆ. ಹೀಗಾಗಿ ಜಾತಿ ಜಾತಿಗಳ ನಡುವೆ ಇರುವ ಭೇದವಲ್ಲದೆ ಸ್ವಜಾತಿಯೊಳಗೂ ಭೇದಭಾವದ ವರ್ಗೀಕರಣ ಇರುತ್ತದೆ. ಅಲ್ಪಸಂಖ್ಯಾತ ಜಾತಿಯೆಂದು ಸಮಾಜದಲ್ಲಿ ಗುರುತಿಸಲ್ಪಡುವ ಕೆಲವು ಜಾತಿಗೆ ಸೇರಿದವರು ಎಷ್ಟು ಒಳ್ಳೆಯ ಕೆಲಸ ಮಾಡಿದರೂ, ಎಷ್ಟು ಮೇಲು ಮಟ್ಟದ ಸತ್ಸಾಧನೆ ಮಾಡಿದರೂ ಗೌರವಿಸುವವರು, ಗುರುತಿಸುವವರು ಇಲ್ಲ. ಇತರ ಜಾತಿಯವರಲ್ಲಂತಿರಲಿ, ಅವರ ಜಾತಿಯಲ್ಲೇ ಗುರುತಿಸುವವರಿಲ್ಲ. ಇದೆಲ್ಲ ನಮಗೆ ತಮಾಷೆಯಾಗಿ ಕಾಣಿಸುತ್ತಿತ್ತು.

    ನಮ್ಮ ಶಾಲಾ ಸರ್ಟಿಫಿಕೇಟುಗಳಲ್ಲಿ ಮಾತ್ರವೇ ಇರುವ `ಮಾರ’ ಎಂಬ ಎರಡು ಅಕ್ಷರಗಳ ಪದದ ಮೂಲಕ ನಮ್ಮನ್ನು ನಾವೇ ಗುರುತಿಸಿಕೊಳ್ಳುವ ನಾವು ಯಾವತ್ತೂ ಯಾವ ಸರಕಾರಿ ಸವಲತ್ತಿಗೂ ಅರ್ಹರಲ್ಲ ಎಂಬುದನ್ನು ಅರಿತುಕೊಂಡ ಮೇಲೆ, ಬಹುಶಃ ನಮ್ಮ ಪೂರ್ವಜನೇ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಹೇಳಿದ `ಉದ್ಧಾರವೆಂಬುದು ನಮ್ಮನ್ನು ನಾವೇ ಉದ್ಧರಿಸಿಕೊಳ್ಳುವುದರಲ್ಲಿ’ ಎಂಬ ಮಾತನ್ನೇ ವೇದವನ್ನು ಕೂಡ ಮೀರಿದ ಸೂಕ್ತವೆಂದು ನಂಬಿಕೊಂಡು ನಾವು ಬದುಕಬೇಕಾಯಿತು. ಈ ಸಮಾಜದಲ್ಲಿ ಇದ್ದೂ ಇಲ್ಲ ಎಂಬಂತೆ ಬದುಕುವುದು ಬಹಳ ಕ್ಲೇಶದಾಯಕ. ಹರಿಜನರು ಗಿರಿಜನರು ಸಹ ಸಮಾಜದ ಒಂದು ಭಾಗವಾಗಿರುವ ಸಮಾಜದಲ್ಲಿ ಸಮಾಜದ ಒಳ ಕಕ್ಷೆಯಲ್ಲಿದ್ದೂ ಆ ಕಕ್ಷೆಯಿಂದ ಹೊರಗಿನವರಂತೆ ಬದುಕುವುದು ಸುಲಭವಲ್ಲ. ಕಕ್ಷೆಯ ಹೊರಗೆ ಏಕಾಂತ ಇದೆ, ವಿಶಾಲವಾದ ಜಗತ್ತು ಇದೆ. ಒಳಗೆ ಇಲ್ಲ. ವೈಶಾಲ್ಯರಹಿತ ಜಗತ್ತಿನಲ್ಲಿ `ಉದ್ಧಾರವಾಗಬೇಕು’ ಎನ್ನುವುದಕ್ಕಿಂತಲೂ `ಬದುಕಿ ಉಳಿದರೆ ಸಾಕು’ ಎನ್ನುವುದು ಬದುಕಿನ ಬೀಜಮಂತ್ರವಾಗುತ್ತದೆ. ಅದರಲ್ಲಿ ಅನಾಮಧೇಯನಾಗಿರುವವನಿಗೆ ಇರುವ ಒಂದೇ ಒಂದು ಸಮಾಧಾನ, ಜೀವಂತ ಮನುಷ್ಯನಿಗೆ ದೊರೆಯಬಹುದಾದ ಅತ್ಯಂತ ದೊಡ್ಡ ಸಮಾಧಾನ ಎಂದರೆ, `ನನಗೆ ನಾನೇ ದೊರೆ, ನನಗೆ ನಾನೇ ಗುಲಾಮ’ ಎನ್ನುವುದು ಮಾತ್ರ. ಹಾಗಾಗಿ, ಜಾತಿ ಸಂಬಂಧವಾದ ಯಾವ ಮಾನವೂ ನಮಗೆ ಇಲ್ಲ. ಮಾನ ಇಲ್ಲವೆಂದಾದರೆ ಅವಮಾನವೂ ಇಲ್ಲವೆಂಬುದು ನಮ್ಮ ನಂಬಿಕೆಯಾಗಿತ್ತು. ತಾನು ಇಂಥ ಧರ್ಮದವನು ಎಂದುಕೊಳ್ಳದೆ, ಒಬ್ಬರನ್ನೊಬ್ಬರು ಕೊಲ್ಲದೆ, ತಾನು ಕೇವಲ ಮನುಷ್ಯ ಎಂಬ ಖುಷಿಯಲ್ಲಿ, ಕನಿಷ್ಠ ಇತರ ಮೃಗಗಳಂತೆಯಾದರೂ ಬದುಕಲು ಮನುಷ್ಯನಿಂದ ಸಾಧ್ಯವಿಲ್ಲವೆ ಎಂಬ ಪ್ರಶ್ನೆ ನನ್ನೊಳಗೆ ಯಾವಾಗಲೂ ಇರುತ್ತಿತ್ತು. ಆ ಪ್ರಶ್ನೆಗೆ ನಮ್ಮ ಬದುಕೇ ಉತ್ತರವಾಗಿತ್ತು.

    `ಮಾರ’ ಎಂಬ ನಾವು ನಮ್ಮ ಬದುಕುವ ಸಾಹಸದಲ್ಲಿ ಹುಲ್ಲು ಮತ್ತು ಹೂವಿನಂದಾರಂಭಿಸಿ ಏನೆಲ್ಲ ಮಾರಿದೆವು ಎಂದು ಈಗ ನೆನಪಿಸಿಕೊಳ್ಳಹೊರಟರೆ ಎಲ್ಲವೂ ನೆನಪಿಗೆ ಬರದಷ್ಟು ಆ ಪಟ್ಟಿ ದೊಡ್ಡದಿದೆ. ನಾವು ಹುಟ್ಟಿ ಬೆಳೆದ ನೆಲವನ್ನು ನಾವು ಮಾರಲಿಲ್ಲ. ಮಾರಕೂಡದು ಎಂಬುದು ನಮ್ಮ ದೃಢ ನಿರ್ಧಾರವಾಗಿತ್ತು. `ಏನು ಮಾರಿದರೂ ಮಾನ ಮಾರಬಾರದು’ ಎನ್ನುವ ನಮ್ಮ ಅಮ್ಮನ ವೇದವಾಕ್ಯವನ್ನು ಕೂಡ ನಾವು ಪಾಲಿಸಿಕೊಂಡು ಬಂದೆವು.

    ನಮ್ಮ ಜಾತಿಯವರು ಚೂರಿ ಎಂಬ ಊರಿನಲ್ಲಿ ಬೇರೆ ಯಾರಾದರೂ ಇದ್ದಾರೋ ಇಲ್ಲವೊ ನಮಗೆ ಗೊತ್ತಿಲ್ಲ. ನಮ್ಮ ಜಾತಿಯ ಹಾಗೆಯೇ ಬೇರೆ ಬೇರೆ ಊರುಗಳಲ್ಲಿ ಒಂದು ಅಥವಾ ಎರಡು ಕುಟುಂಬಗಳು ಇರುವಂಥ ದಾಸ, ಕೂಸ, ಕುಬರ, ಎಡಪ, ಕುಡುಪ, ಮುಕಾರಿ, ಪಕಾರಿ ಮುಂತಾದ ಹ¯ವಾರು ಜಾತಿಗಳು ಇವೆ. ಅವರ ಮನೆ ಭಾಷೆ ತುಳುವೋ, ಮಲೆಯಾಳವೋ, ಕೊಂಕಣಿಯೋ, ಮರಾಠಿಯೋ, ಅಂಥದೇ ಯಾವುದೋ ಒಂದು ಆಗಿರಬಹುದು. ಶುದ್ಧವೋ ಅರೆಶುದ್ಧವೋ ಎಂದು ಹೇಳಲಾಗದಂಥ ಅರೆಗನ್ನಡವೋ, ಅರೆ ತುಳುವೋ, ಅರೆ ಮಲೆಯಾಳವೋ, ಅರೆಮರಾಠಿಯೋ ಆಗಿರಬಹುದು. ಇಡೀ ಕಾಸರ ತಾಲೂಕಿನಲ್ಲಿ ಹೆಚ್ಚು ಜನರು ಇಂಥ ಬಾಷೆಗಳನ್ನಾಡುವವರೇ ಆಗಿದ್ದು, ಇಲ್ಲಿ ಬಹುಭಾಷಿಕರು ಯಾರು ಎನ್ನುವುದು ಭಾಷಾವಾರು ಪ್ರಾಂತ್ಯ ರಚನೆಯ ರೂವಾರಿ ನೆಹರುವಿಗೂ ಗೊತ್ತಿರಲಿಲ್ಲ. ಕಾಸರವನ್ನು ಕೇರಳಕ್ಕೆ ಸೇರಿಸುವಂತೆ ಶಿಫಾರಸು ಮಾಡಿದ ಪಣಿಕ್ಕರಿಗೂ ಗೊತ್ತಿರಲಿಲ್ಲ ಎನ್ನುವುದು ಈಗ ಮನುಷ್ಯರಿಗೆ ಮಾತ್ರವಲ್ಲ, ಇತಿಹಾಸಕ್ಕೆ ಕೂಡ ಮರೆತುಹೋಗಿರುವ ವಿಷಯ. ಈಗ ಅದೆಲ್ಲ ಮುಖ್ಯವಲ್ಲವೇ ಅಲ್ಲ, ಈಗ ಮುಖ್ಯ ಯಾರು ಹೇಗೆ ಜೀವಿಸುತ್ತಾರೆ ಎನ್ನುವುದು ಮಾತ್ರ. ಭಾಷೆಯ ಅಗತ್ಯ ಓದಿಗೂ ಇಲ್ಲ, ಬದುಕಿಗೂ ಇಲ್ಲ ಎನ್ನುವಂತೆ ಎಲ್ಲರೂ ಜೀವಿಸಲು ಕಲಿತುಕೊಂಡಿದ್ದಾರೆ. ಆದರೆ ನಾವು ಯಾಕೆ ಹೀಗಿದ್ದೇವೆ ಎಂದು ನಮ್ಮಿಂದ ಒಮ್ಮೊಮ್ಮೆಯಾದರೂ ಯೋಚಿಸದಿರಲಿಕ್ಕಾಗುವುದಿಲ್ಲ. ಹಾಗೆ ಯೋಚಿಸಿದಾಗ ಮಾತ್ರ ನಾವು ಹೇಗಿರಬೇಕು, ಹೇಗಿರಬಾರದು ಎಂದು ನಮಗೆ ತಿಳಿಯುತ್ತದೆ.

    ಮಹಾಭಾರತವನ್ನು ಮೊದಲು ಬರೆದಿಟ್ಟವನು, ಅನಂತರ ಬೇರೆ ಬೇರೆ ಕಾಲದಲ್ಲಿ ಅದನ್ನು ಕಲಕುತ್ತಾ ಅವರದೇ ಆದ ರೀತಿಯಲ್ಲಿ ಪರಿಷ್ಕರಿಸುತ್ತಾ ಹೋದವರೆಲ್ಲ ಮಹಾ ಜ್ಞಾನಿಗಳೇ ಆಗಿರಬೇಕು. ನಡೆದುದರ ಬಗ್ಗೆ ಯೋಚಿಸಿದಷ್ಟೂ ನಡೆಯುತ್ತಿರುವುದೆಲ್ಲ ಒಂದು ಬೊಂಬೆಯಟದಂತೆ, ಒಂದು ತಮಷೆಯಂತೆ ಅಥವಾ ಎಲ್ಲಾ ಬರಿ ಮಾಯೆ ಎನ್ನುವಂತೆ ಅವರಿಗೆ ಕಾಣಿಸಿತ್ತು. ಮನುಷ್ಯರು ಕೂಡ ಹುಲಿ ಸಿಂಹ ಜಾನುವಾರು ಹಿಂಡಿನಂತೆ, ಪಕ್ಷಿ ಸಂಕುಲದಂತೆ, ಇರುವೆ ಗೆದ್ದಲುಗಳ ಸಮೂಹದಂತೆ ಅವರಿಗೆ ಕಾಣಿಸಿದ್ದಾರೆ!  ಈ ಸತ್ಯವನ್ನು `ನಾನು ಕಂಡೆ' ಎನ್ನದೆ `ನಾನು ನಿನಗೆ ಕಾಣಿಸಿದೆ' ಎನ್ನುವ `ದೇವರ ಅವತಾರ' ಎಂಬುದನ್ನು ಕೂಡ ಕವಿ ಸೃಷ್ಟಿಸಿದ್ದಾನೆ. ಹಾಗೆ ಸೃಷ್ಟಿಸಲ್ಪಟ್ಟ ಶ್ರೀಕೃಷ್ಣನ ನಾಲಗೆಯಲ್ಲಿ ಭಗವದ್ಗೀತೆ ಎನ್ನುವುದನ್ನು ಬರೆದಿದ್ದಾನೆ. ಆ ಶ್ರೀಕೃಷ್ಣನ ಕಣ್ಣಿಗೆ ಜೀವನ ಒಂದು ಆಟ, ತಮಷೆ ಮತ್ರ! ಎಲ್ಲಾ ಮಾನವರಿಗೂ ಹಾಗೆಯೇ ಕಾಣಿಸಬೇಕು ಎನ್ನುವುದು ಎಲ್ಲಾ ಜ್ಞಾನಿಗಳ ಉದ್ದೇಶವಲ್ಲದೆ ಇನ್ನೇನು?

    ಜೀವನ ಹಾಗೆ ಕಾಣಿಸದೆ, ಬೇರೆಯಾಗಿ, ಬಹಳ ಮಹತ್ವದ್ದಾಗಿ ಕಾಣಿಸುವುದು ಅಹಂಕಾರದ ಕಣ್ಣಿಗೆ ಮಾತ್ರ. ನಾನೇ ದೇವರು ಅಥವಾ ನಾನೇ ಅರಸ ಅಥವಾ ನಾನೇ ಸರಕಾರ ಎನ್ನುವ ಆ ಅಹಂಕಾರ ಎಲ್ಲರೂ ತನ್ನ ಕಾಲಿಗೆ ಬೀಳಬೇಕು ಎಂದು ಬಯಸುತ್ತದೆ. ಅದು ದೇವರನ್ನು ಕೂಡ ತನ್ನ ಜೇಬಿನಲ್ಲಿಟ್ಟುಕೊಳ್ಳುತ್ತದೆ. ಏನೂ ಆಗಲಾಗದ `ಮಾರ’ನ ಬಳಿ ಅಹಂಕಾರ ಯಾವತ್ತೂ ಸುಳಿಯುವುದಿಲ್ಲ. `ಮಾರ’ರವನಾಗಿರುವವನಿಗೆ, ಒಂದು ಪಕ್ಷಿಯಂತೆ ಬದುಕಲು ಸಾಧ್ಯವಿದೆ ಎನ್ನುವುದಕ್ಕಿಂತ ದೊಡ್ಡ ಆನಂದ ಬೇರೆ ಇಲ್ಲ.

    2

    ಚಿಕ್ಕಂದಿನಲ್ಲಿ ನಮಗೆ ಅತ್ಯಂತ ಪ್ರಿಯವಾದ ಹವ್ಯಾಸವೆಂದರೆ, ನಮ್ಮ ಮನೆಯ ಸುತ್ತಮುತ್ತ ಇದ್ದ ನೂರಾರು ಎಕರೆ ಸರಕಾರಿ ಭೂಮಿಯಾದ ಕಾಡು ಗುಡ್ಡಗಳಲ್ಲಿ ಸ್ವಚ್ಛಂದವಾಗಿ ಓಡಾಡುವುದು. ಹಾಗೆ ಓಡಾಡುವಾಗ ವರ್ಷದ ಬೇರೆ ಬೇರೆ ಕಾಲಗಳಲ್ಲಿ ಗಿಡಗಳಲ್ಲಿ, ಮರಗಳಲ್ಲಿ, ಪೊದೆ ಪೊದರುಗಳಲ್ಲಿ ಬೆಳೆಯುವ ಹಲವು ಬಗೆಯ ಹಣ್ಣುಗಳಲ್ಲಿ ತಿನ್ನಬಹುದಾದುದನ್ನು ಕೊಯ್ದು ತಿನ್ನುವುದು. ಪ್ರತಿಯೊಂದು ಹಣ್ಣನ್ನೂ ಕೊಯ್ದು ತಂದು ಅಮ್ಮನಿಗೆ ತೋರಿಸಿ ಯಾವ ಹಣ್ಣನ್ನು ತಿನ್ನಬಾರದು, ಯಾವ ಹಣ್ಣನ್ನು ತಿನ್ನಬಹುದು ಎಂದು ಖಚಿತ ಪಡಿಸಿಕೊಂಡಿರುತ್ತಿದ್ದೆವು. ರೆಂಜೆ ಮತ್ತು ನೇರಳೆ ನಮ್ಮ ನೆಚ್ಚಿನ ಮರಗಳು. ಕಾರಣ, ಕಾಲ ಕಾಲಕ್ಕೆ ಅವುಗಳು ದಂಡಿಯಾಗಿ ಹಣ್ಣುಗಳನ್ನು ಕೊಡುತ್ತಿದ್ದವು. ಮರ ಹತ್ತಿ ಹೊಟ್ಟೆ ತುಂಬುವಷ್ಟು ಆ ಹಣ್ಣುಗಳನ್ನು ತಿನ್ನುತ್ತಿದ್ದೆವು. ಅಷ್ಟೆಲ್ಲ ತಿನ್ನಬೇಡಿ; ಹೊಟ್ಟೆನೋವು ಬರುತ್ತದೆ' ಎಂಬ ಅಮ್ಮನ ಮಾತಿಗೆ ಜೂಜ ಮತ್ತು ಬೂದ ಸ್ವಲ್ಪ ಹೆದರುತ್ತಿದ್ದರು. ನಾನಂತೂ ಹೆದರುತ್ತಿರಲಿಲ್ಲ. ಯಾಕೆಂದರೆ, ನನ್ನ ಹೊಟ್ಟೆಯಲ್ಲಿ ಹಸಿವು ಎಂಬುದು ನಿರಂತರವಾಗಿರುತ್ತಿತ್ತು. ವಿರಾಮವೇ ಇಲ್ಲ ಎಂಬಂತೆ ಕಾಡುವ ಹಸಿವೆಯ ಬಗ್ಗೆ ನನಗೆ ಯಾವಾಗಲೂ ವಿಸ್ಮಯ. ಬದುಕುವುದು ಎಂದರೆ ಬೇರೇನಲ್ಲ, ಹಸಿವೆಯೊಂದಿಗೆ ಅವಿರತವಾಗಿ ಸೆಣಸುವುದು ಎಂದು ನನಗೆ ಎಷ್ಟೋ ಬಾರಿ ಅನಿಸುತ್ತದೆ. `ವಿಷವಲ್ಲ' ಎಂಬ ಅಮ್ಮನ ಆಶ್ವಾಸನೆ ಸಿಕ್ಕಿದ್ದರಿಂದ ಇನ್ನೂ ಏನೇನೋ ಕಾಡಿನ ಪೊದೆ ಪೊದೆಪೊದರುಗಳು ನೀಡುವ ಅರೆಯರೆ ಸಿಹಿ, ಹುಳಿ, ಒಗರು ಹಣ್ಣುಗಳನ್ನು ಕೂಡ ನಾನು ತಿನ್ನುತ್ತಿದ್ದೆ.

    ನಮ್ಮ ಹೊಲದ ಬಳಿಯಲ್ಲಿ ಒಂದು ದೊಡ್ಡ ಅತ್ತಿ ಮರವಿತ್ತು. ಅದು ಗೊಂಚಲು ಗೊಂಚಲು ಹಣ್ಣು ಬಿಡುತ್ತಿತ್ತು. ಹಣ್ಣುಗಳೊಳಗೆ ಇರುವೆ ಇರುತ್ತಿತ್ತು. ಇರುವೆಯನ್ನು ತೆಗೆದೆಸೆದು ಹಣ್ಣು ತಿನ್ನುತ್ತಿದ್ದೆವು. ಯಾವಾಗಲಾದರೊಮ್ಮೆ ಅಮ್ಮ ಹುರುಳಿ ಬೆರಸಿ ಅತ್ತಿಕಾಯಿಯ ಪಲ್ಯ ಮಾಡುತ್ತಿದ್ದರು. ಅದೇನೂ ತುಂಬಾ ರುಚಿಯಾಗಿರುವುದಿಲ್ಲ. ಆದರೂ ಬಾಳೆಯ ದಿಂಡು, ಕುಂಡಿಕೆ, ಕಣಿಲೆ, ಕೆಸುವಿನ ಎಲೆ, ಚಗಟೆ ಸೊಪ್ಪು ಮುಂತಾದವುಗಳಂತೆ, ವರ್ಷದಲ್ಲಿ ಕನಿಷ್ಠ ಒಂದು ಅಥವಾ ಎರಡು ಬಾರಿಯಾದರೂ ತಿನ್ನಲೇಬೇಕೆಂಬ ಆಸೆ ಹುಟ್ಟಿಸುವಂಥ ವಿಶಿಷ್ಠವಾದ ರುಚಿ ಅದಕ್ಕೆ ಇತ್ತು. ನಾವು ಬಹಳ ಸಲ ತಿನ್ನುತ್ತಿದ್ದೆವು. ಸೊಪ್ಪುಗಳಲ್ಲಂತೂ ನಾವು ತಿನ್ನುವ ಸೊಪ್ಪುಗಳನ್ನೆಲ್ಲ ಹೆಸರಿಸಿದರೆ, ನಿಜವಾಗಿಯೂ ನಾವು ಮನುಷ್ಯರೋ ಆಡುಗಳೋ ಎಂದು ಯಾರಿಗಾದರೂ ಆಶ್ಚರ್ಯವಾದೀತು. ಹೆಚ್ಚಿನ ತರಕಾರಿಗಳನ್ನು ಮಾತ್ರವಲ್ಲ, ಅವುಗಳ ಸೊಪ್ಪನ್ನು ಕೂಡ ಅಮ್ಮ ರುಚಿಕಟ್ಟಾದ ಪಲ್ಯ ಮಾಡುತ್ತಿದ್ದಳು. ಅನ್ನವಿಲ್ಲದ್ದರಿಂದ ನಾವು ಅದನ್ನೆಲ್ಲ ತಿನ್ನಬೇಕಾಗಿತ್ತೋ ಅಥವಾ ಅಮ್ಮನ ಕಾಡಿನ ಊರಿನಲ್ಲಿ ಮಾರರು ಅದನ್ನೆಲ್ಲ ತಿನ್ನುತ್ತಿದ್ದರೊ ಎಂಬ ಪ್ರಶ್ನೆ ನನ್ನಲ್ಲಿತ್ತು. ಯಾಕೋ ಅಮ್ಮನ ಬಳಿ ನಾನು ಆ ಪ್ರಶ್ನೆಯನ್ನು ಕೇಳಲಿಲ್ಲ. ಉತ್ತರಿಸುವವರಿಗೆ ಉತ್ತರಿಸುವಾಗ ಬೇಸರವಾಗಬಹುದು ಎಂಬ ಸಂದೇಹ ನನಗಾದರೆ ನಾನು ಆ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ. 

    ತಿನ್ನುವ ಹಣ್ಣುಗಳನ್ನು ಹುಡುಕುವಾಗ ಅವುಗಳನ್ನು ತಿನ್ನುವ ಪಕ್ಷಿಗಳ ದರ್ಶನ ನಮಗೆ ಆಗುತ್ತಿತ್ತು. ನಾವು ಕೂಡ ಈ ಪಕ್ಷಿಗಳಂತೆಯೇ ಎಂದನಿಸುತ್ತಿತ್ತು. ಆದರೆ ಪಕ್ಷಿಗಳು ಹಾಡುತ್ತಾ ಹಾರುತ್ತಾ ಸದಾ ಸಂತೋಷವಾಗಿರುವಂತೆ ತೋರುತ್ತಿತ್ತು. ಯಾವಾಗಲೂ ಬೆಳಗ್ಗೆ ಮತ್ತು ಸಾಯಂಕಾಲ ಬೇರೆ ಬೇರೆ ಕಡೆಗಳಿಂದ ಕೇಳಿಸುವ ಕೆಲವು ಪಕ್ಷಿಗಳ ದನಿ ಮಾತ್ರ ಭಿನ್ನವಾಗಿರುತ್ತಿತ್ತು. ಅದು ಯಾವುದೋ ದುಃಖದ ದನಿಯಂತೆ ತೋರುತ್ತಿತ್ತು. ಸಾಮಾನ್ಯವಾಗಿ ಕಣ್ಣಿಗೆ ಕಾಣಿಸದ ಪಕ್ಷಿ ಅದು. ಅದರ ದುಃಖದ ಕಾರಣ ಏನಾಗಿರಬಹುದು ಎಂಬ ಕುತೂಹಲ ನನಗೆ. ಅಥವಾ ಅದು ದುಃಖದ ದನಿಯ ಸಂತೋಷವಾಗಿರಬಹುದೆ?

    ಮಳೆಗಾಲದ ದಿನಗಳಾದರೆ ತೋಡುಗಳಲ್ಲಿ, ಹಳ್ಳಕೊಳ್ಳಗಳಲ್ಲಿ ಈಜುತ್ತಿದ್ದೆವು. ಒಮ್ಮೊಮ್ಮೆ ಆಟಕ್ಕಾಗಿ ಮೀನು ಹಿಡಿಯುತ್ತಿದ್ದೆವು. ದೆಂಜಿ ಹಿಡಿಯಲು ಹೋಗಿ ದೆಂಜಿಯಿಂದ ಕಚ್ಚಿಸಿಕೊಂಡು ದೊಡ್ಡ ಸಾಹಸ ಮಾಡಿದವರಂತೆ ಉರಿಯುವ ರಕ್ತಸಿಕ್ತವಾದ ಕೈಬೆರಳನ್ನು ಚೀಪಿ ನಮ್ಮ ರಕ್ತವನ್ನು ನಾವೇ ನುಂಗುತ್ತಿದ್ದೆವು. ಶಾಲೆಗೆ ರಜೆಯಿದ್ದ ಬೇಸಗೆಯ ದಿನಗಳಲ್ಲಿ, ಗುಡ್ಡ ಬೆಟ್ಟಗಳ ಬುಡದಲ್ಲಿದ್ದ ಗುಹೆಗಳ ಒಳಗೆ ಒಳಗೇನಿದೆಯೆಂದು ನೋಡಲು ಹೋಗುತ್ತಿದ್ದೆವು. ಗುಹೆಯ ಒಳ ಹೊಕ್ಕಾಗ ಬಾವಲಿಗಳು ನಮ್ಮ ಮೈಗೆ ತಾಗದೆ ನಮ್ಮ ತಲೆಯ ಮೇಲಿಂದ ಹಾರಿ ಹೋಗುತ್ತಿದ್ದವು. ಒಳಗೆ ಜುಳು ಜುಳು ಎಂದು ನೀರೊರತೆ ಜಿನುಗಿ ಕೆಳಬೀಳುವ ಶಬ್ದ ಕೇಳಿಸುತ್ತಿತ್ತು. ಒಳಗೆ ಕಗ್ಗತ್ತಲು. ಆ ಕತ್ತಲಲ್ಲೇ ನಾವು ಹತ್ತಾರು ಅಡಿ ಉದ್ದದ ಸುರಂಗಗಳ ಒಳಗೆ ಹೋಗುತ್ತಿದ್ದೆವು. ಹಾವಿರಬಹುದೊ, ಹುಲಿಯಿರಬಹುದೊ ಎಂದು ಮಾತಾಡುತ್ತಾ ಹೋಗುತ್ತಿದ್ದೆವು. `ಹುಲಿ ಜೇಡಿ ಮಣ್ಣು ತಿನ್ನುತ್ತದೆ. ಹುಲಿ ವಾಸಿಸುವ ಗುಹೆಯ ಬಾಗಿಲಲ್ಲಿ ಹುಲಿಯ ಬಿಳಿಯಾದ ಹೇಲು ಇರುತ್ತದೆ’ ಎಂದು ಅಮ್ಮ ಹೇಳುತ್ತಿದ್ದಳು. ಆದ್ದರಿಂದ ಗುಹೆಯ ಬಾಗಿಲಲ್ಲಿ ಹುಲಿಯ ಹೇಲು ಇಲ್ಲ ಎಂದು ನಾವು ಖಾತ್ರಿಪಡಿಸಿಕೊಳ್ಳುತ್ತಿದ್ದೆವು.

    ಒಂದು ಸಲ ಒಂದು ಗುಹೆಯ ಕೆಳಗಡೆ ದೊಡ್ಡ ದೊಡ್ಡ ಬಂಡೆಗಳ ಎಡೆಯಿಂದ ಹರಿಯುತ್ತಿದ್ದ ನೀರಿನಲ್ಲಿ ಬೂದ ಮತ್ತು ಜೂಜ ಏಳು ತಲೆಯ ಸರ್ಪವನ್ನು ಕಂಡರು. ನನಗೆ ಕಾಣಿಸಲಿಲ್ಲ. `ಏಳು ತಲೆಯ ಸರ್ಪ ಇರುವುದು ಕತೆಗಳಲ್ಲಿ ಮಾತ್ರ. ನಿಜವಾಗಿ ಇಲ್ಲ’ ಎಂದು ಅಮ್ಮ ಹೇಳಿದರೆ, ನಿಜವಾಗಿಯೂ ಏಳು ತಲೆಯ ಕಾಳಿಂಗ ಸರ್ಪವನ್ನು ಕಂಡ ಜೂಜ ಮತ್ತು ಬೂದ ಒಪ್ಪಲು ಸಿದ್ಧವಿರಲಿಲ್ಲ. ಬೆಟ್ಟದ ಕೆಳಗಡೆ ಒಂದು ಕೆರೆಯಿತ್ತು. ಕೆರೆಯ ಸುತ್ತ ದಟ್ಟವಾದ ಕಾಡಿತ್ತು. ಕೆಲವು ಕಡೆ ಗುಹೆಗಳು ಕೂಡ ಇದ್ದವು. ಆ ಗುಹೆಗಳಲ್ಲಿ ಕೆಲವೊಮ್ಮೆ ಹುಲಿಗಳಿರುತ್ತವೆ ಎಂದು ಅಮ್ಮ ಹೇಳುತ್ತಿದ್ದಳು. ಆ ಗುಹೆಯ ಬಾಗಿಲಲ್ಲಿ ಹುಲಿಯ ಹೇಲು ಕಾಣಿಸುವುದೆ ಎಂದು ನೋಡಲು ನಾವು ಹೋಗುತ್ತಿದ್ದೆವು. ಕೆರೆ ಹೆಚ್ಚು ಆಳವಿರಲಿಲ್ಲ. ಅದರಲ್ಲಿ ನಾವು ಈಜುತ್ತಿದ್ದೆವು. ಕೆಲವು ಬಾರಿ ನೀರಿನಲ್ಲಿ ನಿಂತಿದ್ದ ನಮ್ಮ ಕಾಲಿಗೆ ನೀರು ಹಾವು ಸುತ್ತಿಕೊಂಡು ನಾವು ಬೊಬ್ಬಿಟ್ಟು ಕಾಲು ಕೊಡವಿಕೊಂಡು ನೀರಿನಿಂದ ಮೇಲಕ್ಕೆ ಓಡಿ ಬಂದುದಿತ್ತು. ಆದರೂ ನಮಗೆ ಹಾವಿನ ಭಯವಿರಲಿಲ್ಲ. ಯಾಕೆಂದರೆ, ಅದು ವಿಷದ ಹಾವಲ್ಲ. ಜೂಜ ಮತ್ತು ಬೂದ ಏಳು ತಲೆಯ ಕಾಳಿಂಗ ಸರ್ಪವನ್ನು ನೋಡಿದ ಮೇಲೆ ಸ್ವಲ್ಪ ಕಾಲ ಮಾತ್ರ ನಮಗೆ ಅದರ ಭಯವಿತ್ತು. ಕ್ರಮೇಣ ಭಯ ತೊಲಗಿ ನಾವು ಪುನಃ ಕೆರೆಯಲ್ಲಿ ಈಜಲು ಹೋಗತೊಡಗಿದೆವು. ಹಾವಿನ ಭಯಕ್ಕಿಂತ ನೀರಿನ ಆಕರ್ಷಣೆ ಬಲವಾಗಿತ್ತು.

    ಗುಡ್ಡದಿಂದ ಕೆಳಗೆ ಬಯಲಿನ ಅಂಚಿನಲ್ಲಿ ಜುಮಾದಿ ಎಂಬ ಒಂದು ಭೂತದ ಗುಡಿಯಿತ್ತು. ಅದು ಗಂಡು ಭೂತವೋ ಹೆಣ್ಣು ಭೂತವೋ ಎಂದು ಅಮ್ಮನನ್ನು ಕೇಳಿದರೆ ಒಮ್ಮೆ ಗಂಡು ಎನ್ನುತ್ತಿದ್ದಳು. ಒಮ್ಮೆ ಹೆಣ್ಣು ಎನ್ನುತ್ತಿದ್ದಳು. ಯಾವ ದೇವರೆಂದು ನಮಗೆ ಗೊತ್ತಿಲ್ಲದ, ಹೆಸರು ಕೂಡ ಇಲ್ಲದ ಒಂದು ದೇವರನ್ನು ಅಮ್ಮ ನಂಬುತ್ತಾಳೆ ಎಂಬುದು ನಮ್ಮ ನಂಬಿಕೆಯಾಗಿತ್ತು. ಅವಳಿಗೆ ಭೂತಗಳ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದು ನಮಗೆ ಅನಿಸುತ್ತಿತ್ತು. ಭೂತದ ಮೇಲೆ ಅವಳಿಗೆ ನಂಬಿಕೆಯೂ ಇರಲಿಲ್ಲ. ಜುಮಾದಿ ಭೂತದ ಗುಡಿಯಲ್ಲಿ ವರ್ಷದಲ್ಲಿ ಎರಡು ಬಾರಿ ಯಾವುದೋ ಪೂಜೆ ನಡೆಯುತ್ತಿತ್ತು. ಅದು ಚೂರಿ ಊರಿನಲ್ಲಿ ಅತಿ ದೊಡ್ಡ ಶ್ರೀಮಂತ ಎನಿಸಿಕೊಳ್ಳುವ ಶಿವರಾಮಯ್ಯನಿಗೆ ಸೇರಿದ ಗುಡಿಯಾಗಿತ್ತು. ಹೇಗೆಂದರೆ, ಅದು ಅವನ ಜಮೀನಿನಲ್ಲಿತ್ತು. ಜುಮಾದಿ ಊರ ಜನರ ಆರೋಗ್ಯ, ಊರ ಜಾನುವಾರುಗಳ ಆರೋಗ್ಯವನ್ನು ನೋಡಿಕೊಳ್ಳುವ ಭೂತ ಎಂದು ತಿಳಿಯಲಾಗುತ್ತಿತ್ತು.   

    ನಮ್ಮ ಗ್ರಾಮದ ಹೆಸರು ಚೂರಿ ಎಂದು. ಚೂರಿಯಲ್ಲಿ ಪಂಚಾಂಗ ಪುಸ್ತಕ ನೋಡಿ, ದಿನದಲ್ಲಿ ರಾಹು ಕಾಲ ಯಾವಾಗ, ಗುಳಿಕ ಕಾಲ ಯಾವಾಗ, ಮಳೆ ಬರುವುದು ಯಾವಾಗ, ಯಾವ ದಿನ ಗದ್ದೆಯಲ್ಲಿ ಉಳಲು ಆರಂಭಿಸೇಕು, ಯಾವ ದಿನ ಭತ್ತದ ಬೀಜ ಹಾಕಬೇಕು ಇತ್ಯಾದಿ ವಿಚಾರಗಳಲ್ಲದೆ, ಜಲಶಿಲ್ಪಿ ಹಲ್ಲಿಶಕುನದ ಪ್ರಕಾರ ಹಲ್ಲಿ ದೇಹದ ಯಾವ ಭಾಗಕ್ಕೆ ಬಿದ್ದರೆ ಏನು ದೋಷ ಏನು ಪರಿಹಾರ ಕ್ರಮ ಕೈಕೊಳ್ಳಬೇಕು ಎಂದು ಹೇಳಬಲ್ಲವ ಒಬ್ಬನಿದ್ದ. ಚೂರಿ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಹುಟ್ಟಿದ ಮಕ್ಕಳಿಗೆ ಏನು ಹೆಸರಿಡಬೇಕೆಂದು ತಿಳಿದುಕೊಳ್ಳಲು ಅವನ ಬಳಿ ಹೋಗುತ್ತಿದ್ದರು. ಅವರ ಜಾತಿ ಯಾವುದೆಂದು ಕೇಳಿ, ಪಂಚಾಂಗ ಪುಸ್ತಕದಲ್ಲಿ ನಕ್ಷತ್ರಗಳ ಹೆಸರಿನ ಪ್ರಕಾರ ಇರುವ ಹೆಸರಿನ ಆದ್ಯಕ್ಷರ ಪಟ್ಟಿಯನ್ನು ನೋಡಿ ಆ ಪ್ರಕಾರ ಇಡಬೇಕಾದ ಹೆಸರುಗಳನ್ನು ಅವನು ಹೇಳುತ್ತಿದ್ದ. ಅವನ ಹೆಸರು `ಲ’ ದಿಂದ ಆರಂಭವಾಗುತ್ತಿತ್ತು. ಅದು ಲಕ್ಷ್ಮಿನಾರಾಯಣ ಮೇಲುಬೈಲೂರಾಯ ಎಂದಾಗಿತ್ತು.  ಚೂರಿ ಗ್ರಾಮದಲ್ಲಿ ಅತ್ಯಂತ ಉದ್ದದ ಹೆಸರೆಂದರೆ ಅದೇ. ನಮಗೆ ಮೂವರಿಗೆ ಮಾದ, ಜೂಜ, ಬೂದ ಎಂಬ ಹೆಸರುಗಳನ್ನು ಕೊಟ್ಟವನು ಅವನೇ. ಹೆಸರು ಕೇಳಲು ಎಷ್ಟು ಸೊಟ್ಟಗಿದ್ದರೇನು, ಒಳ್ಳೆಯ ಕೆಲಸ ಮಾಡಿ, ಒಳ್ಳೆಯವರಾಗಿರಲು ಏನಡ್ಡಿ ಎಂದು ಭಾವಿಸಿಕೊಂಡವರಾಗಿದ್ದುದರಿಂದಲೂ, ಜಾತ್ಯತೀತರೆನಿಸಿಕೊಂಡಿದ್ದುದರಿಂದಲೂ ನಮಗೆ ನಮ್ಮ ಹೆಸರುಗಳ ಬಗ್ಗೆ ಯೋಚನೆ ಇರಲಿಲ್ಲ.

    ಲಕ್ಷ್ಮಿನಾರಾಯಣ ಮೇಲುಬೈಲೂರಾಯನ ಮನೆಯ ಅಂಗಳದಲ್ಲಿ ಹೆಚ್ಚಾಗಿ ಬೆಳಗ್ಗಿನ ಹೊತ್ತು ಹಲವು ಚೂರಿ ಗ್ರಾಮಸ್ಥರನ್ನು ಕಾಣಬಹುದಾಗಿತ್ತು. ಅವರಲ್ಲಿ ಮಗುವಿಗೆ ಏನು ಹೆಸರಿಡಬೇಕು ಎಂದು ಕೇಳಲು ಬಂದವರ ಮತ್ತು ತಮ್ಮ ತಲೆ, ಕೈ, ಬೆರಳು, ಹೊಟ್ಟೆ, ಬೆನ್ನು ಮುಂತಾದ ದೇಹದ ವಿವಿಧ ಭಾಗಗಳಲ್ಲಿ ಯಾವದಾದರೊಂದರ ಮೇಲೆ ಹಲ್ಲಿ ಬಿದ್ದಿದೆ, ಆ ದೋಷಕ್ಕೆ ಏನು ಪರಿಹಾರ ಎಂದು ಕೇಳಲು ಬಂದವರ ಒಂದು ಹಿಂಡು ಇರುತ್ತಿತ್ತು. ಅವರಲ್ಲಿ ಮುಕ್ಕಾಲು ಪಾಲು ಮಂದಿ ಲಕ್ಷ್ಮಿನಾರಾಯಣ ಮೇಲುಬೈಲೂರಾಯನ ಮನೆಯ ಅಂಗಳದಲ್ಲಿ ನಿಂತೇ ಇರುತ್ತಿದ್ದರು. ಬಹಳ ಸಲ ಮಗುವಿಗೆ ಏನು ಹೆಸರಿಡಬೇಕೆಂದು ಕೇಳಲು ಬಂದವರ ಸಂಖ್ಯೆಗಿಂತ ಹಲ್ಲಿ ಬಿದ್ದು ಗಾಬರಿಗೊಳಗಾದವರ ಸಂಖ್ಯೆ ದೊಡ್ಡದಿರುತ್ತಿತ್ತು. ನಾವೆಲ್ಲ ಚಿಕ್ಕವರಿರುವಾಗಲೇ ಲಕ್ಷ್ಮಿನಾರಾಯಣ ಮೇಲುಬೈಲೂರಾಯ ತೊಂಬತ್ತು ವರ್ಷದ ಮುದುಕ. ಆದರೂ ಅವನು ಕನ್ನಡಕವಿಲ್ಲದೆ ಪಂಚಾಂಗ ನೋಡುತ್ತಿದ್ದ. ಅವನು ಸತ್ತ ಮೇಲೆ ಅವನ ಮಗ ಶ್ಯಾಮಸುಂದರ ಮೇಲುಬೈಲೂರಾಯ ಪಂಚಾಂಗ ನೋಡಿ ಹೆಸರು ಹೇಳುವ ಮತ್ತು ಹಲ್ಲಿ ಶಕುನ ಪರಿಹಾರ ಸೂಚಿಸುವ ಅಪ್ಪನ ಕೆಲಸವನ್ನು ಮುಂದುವರಿಸಿದ್ದ. ಅಪ್ಪನ ಹೆಸರೇ ಉದ್ದ ಎಂದರೆ ಮಗನ ಹೆಸರು ಅದಕ್ಕಿಂತಲೂ ಉದ್ದ. ಅಷ್ಟೇ ಅಲ್ಲದೆ, ಒಂದು ದಿನ ಆತ ತನ್ನ ಮನೆಗೊಂದು ಭಾರೀ ಗಾತ್ರದ ಕಬ್ಬಿಣದ ಗೇಟು ಮಾಡಿಸಿ ಅದರಲ್ಲಿ ಇಂಗ್ಲಿಷಿನಲ್ಲಿ ತನ್ನ ಹೆಸರನ್ನು ಕಬ್ಬಿಣದಲ್ಲಿಯೇ ಮಾಡಿಸಿ ಜೋಡಿಸಿಕೊಂಡಿದ್ದ. ಅದರಲ್ಲಿ ಅವನ ಹೆಸರಿನ ಮುಂದೆ ಬಿ.ಎ.ಎಲ್‍ಎಲ್.ಬಿ. ಎಂದು ಕೂಡ ಇತ್ತು. ಆ ಐದು ಬಿಡಿ ಅಕ್ಷರಗಳು ಏನು ಮತ್ತು ಪ್ರತಿ ಅಕ್ಷರದ ನಂತರವೂ ಚುಕ್ಕಿ ಯಾಕೆ ಎಂದು ನಮಗೆ ತಿಳಿಯಲಿಲ್ಲ.   

    ಒಂದು ಬಾರಿ ಜೂಜನ ಬಲಗೈಯ ತೋರುಬೆರಳಿನ ಉಗುರಿನ ಮೇಲೆ ಹಲ್ಲಿ ಬಿತ್ತು. ತನ್ನ ಬೆರಳಿಗೆ ಏನಾದರೂ ಸಂಭವಿಸಿದರೆ ಎಂದು ಬೆದರಿದ ಜೂಜ ಅಮ್ಮನ ಬಳಿ ಹೇಳಿದಾಗ ಅಮ್ಮ, `ಹಲ್ಲಿ ಮಾಡಿನ ಮೇಲೆ, ಗೋಡೆಯ ಮೇಲೆ ಓಡುವಾಗ ಕೆಲವು ಸಲ ಕಾಲು ಜಾರಿ ಕೆಳಗೆ ಬೀಳುತ್ತದೆ. ಅದರಿಂದ ಒಳ್ಳೆಯದೂ ಇಲ್ಲ ಕೆಟ್ಟದೂ ಇಲ್ಲ’ ಎಂದಳು.

    `ತಲೆಯ ಮೇಲೆ ಬಿದ್ದರೆ ಸಾವು, ಚಾಪೆಯ ಮೇಲೆ ಬಿದ್ದರೆ ಸಾವು ಅಂತೆಲ್ಲ ನಮ್ಮ ಕ್ಲಾಸಿನ ಹುಡುಗರು ಹೇಳ್ತಾರೆ’ ಎಂದ ಜೂಜ. ಶಾಲೆಗೆ ಹೋಗುವ ಹುಡುಗರು ಶಾಲೆಯಲ್ಲಿ ಕಲಿಯುವುದಕ್ಕಿಂತಲೂ ಹೆಚ್ಚು ಶಕುನಗಳ ಬಗ್ಗೆ, ಭೂತ ಪ್ರೇತಗಳ ಬಗ್ಗೆ ಮಾತಾಡುತ್ತಿದ್ದರಾದ್ದರಿಂದ ಎಲ್ಲರೂ ಸಮಾನವಾಗಿ ಬುದ್ಧಿವಂತರಾಗಿದ್ದರು.

    `ಹೌದು. ಸಾವು ಎಲ್ಲರಿಗೂ ಉಂಟು. ಅದನ್ನು ಹೇಳಲು ಹಲ್ಲಿ ಬೇಕಾ?’ ಎಂದಳು ಅಮ್ಮ.

    ಆದರೂ ಜೂಜನಿಗೆ ಸಮಾಧಾನವಿಲ್ಲ. ಮರುದಿನ ಶಾಲೆಯಿಂದ ಬರುವಾಗ ಜೂಜ ಮತ್ತು ನಾನು ಶ್ಯಾಮಸುಂದರ ಮೇಲುಬೈಲೂರಾಯ ಬಿ.ಎ.ಎಲ್‍ಎಲ್.ಬಿ.ಯ ಮನೆಯ ದಾರಿಯಾಗಿ ಬಂದೆವು. ಆತ ಆಗಷ್ಟೇ ಮನೆಗೆ ಮರಳಿದ್ದ. ತೊಟ್ಟಿದ್ದ ಕಪ್ಪು ಕೋಟನ್ನು ಇನ್ನೂ ಕಳಚಿರಲಿಲ್ಲ. ನಮ್ಮನ್ನು ನೋಡಿ, `ಏನು?’ ಎಂದ.

    ಜೂಜ ಹೆದರುತ್ತಾ, `ನನ್ನ ಬಲಕೈಯ ತೋರುಬೆರಳಿನ ಉಗುರಿನ ಮೇಲೆ ನಿನ್ನೆ ಹಲ್ಲಿ ಬಿತ್ತು’ ಎಂದ.

    ಮೇಲುಬೈಲೂರಾಯ ಒಳ ಹೋಗಿ ಪಂಚಾಂಗ ಪುಸ್ತಕ ಹೊರ ತಂದು ಓದಿ, `ಉಗುರಿನ ಮೇಲೆ ಹಲ್ಲಿ ಬಿದ್ದರೆ ಪಾಯಸ ತಿನ್ನುವ ಯೋಗ’ ಎಂದ.

    ಅದನ್ನು ಕೇಳಿ ಜೂಜನಿಗೆ ಖುಷಿಯಾಯಿತು.

    ಮನೆಗೆ ಬಂದು ಹಲ್ಲಿ ಶಕುನದ ವಿಚಾರ ಹೇಳಿದಾಗ ಅಮ್ಮ, `ಅದು ಸತ್ಯ. ಆದರೆ ಯಾವಾಗ ಅಂತ ಬೈಲೂರಾಯ ಹೇಳಿದ್ನ?’ ಎಂದು ಕೇಳಿ ನಕ್ಕಳು.

    ಛೆ ತಾನು ಆ ಪ್ರಶ್ನೆ ಕೇಳಲಿಲ್ಲವಲ್ಲಾ ಎಂದು ಜೂಜ ಪೆಚ್ಚಾದ. ಅವನ ಮುಖ ನೋಡಿದ ಅಮ್ಮ, `ಆಯ್ತು ನಾಡಿದ್ದು ಗಣಪತಿ ಹಬ್ಬಕ್ಕೆ ನಿನಗೆ ಇಷ್ಟದ ಹೆಸರು ಬೇಳೆ ಪಾಯಸ ಮಾಡೋಣ’ ಎಂದಳು.

    3

    ಇಲ್ಲಿ ನಮ್ಮ ಪೂರ್ತಿ ಕತೆಯನ್ನು ಹೇಳಲು ಸಾಧ್ಯವಿಲ್ಲ. ಇದರಲ್ಲಿರುವುದು ನಮ್ಮ ಬದುಕಿನ ಅರ್ಧ ಕತೆ ಮಾತ್ರ, ಅಂದರೆ ನಮ್ಮ ಸುಮಾರು ಅರ್ಧ ವಯಸ್ಸಿನ ವರೆಗಿನ ಕತೆ. ಒಂದು ಮದುವೆ ಅಥವಾ ಸಾವಿನಲ್ಲಿ ಒಂದು ಕತೆಯನ್ನು ಮುಗಿಯಿತು ಎಂಬಂತೆ ಕೊನೆಗೊಳಿಸುವುದು ಒಂದು ರೂಢಿ ಅಷ್ಟೆ. ಆ ರೂಢಿಯನ್ನು ಪಾಲಿಸಲೇ ಬೇಕೆಂದು ಇಲ್ಲ ಮತ್ತು ಪಾಲಿಸಲು ಸಾಧ್ಯವೂ ಇಲ್ಲ ಎಂಬುದು ಈ ಕಥಾನಕವನ್ನು ಆರಂಭಿಸುವಾಗಲೇ ನಮಗೆ ಅರಿವಿಗೆ ಬಂದಿದೆ.

    ಚೂರಿ ಎಂಬ ಗ್ರಾಮವನ್ನು ನಮ್ಮ ಹಳ್ಳಿಯೆಂದರೂ ಸರಿ ನಮ್ಮ ಊರು ಎಂದರೂ ಸರಿ. ಈ ಊರಿನಲ್ಲಿ ನಮ್ಮ ಮನೆ ಎಂದರೆ ಒಂದು ಹುಲ್ಲು ಹೊದಿಸಿದ ಮಾಡಿನ ಗುಡಿಸಲು ಎನ್ನಬಹುದು. ಅದನ್ನು `ಮನೆ’ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ. `ಮನೆ’ ಅಥವಾ `ಗೃಹ’ ಎಂದರೆ `ವಾಸಸ್ಥಾನ’ ಎಂದು ಅರ್ಥವಾದುದರಿಂದ ನಾನು ಆ ಅರ್ಥದಲ್ಲಿ `ಮನೆ’ ಎನ್ನುತ್ತಿದ್ದೇನೆ. ನಮ್ಮ ಮನೆಗೆ ನಾವು ನಮ್ಮ ಸ್ನೇಹಿತರನ್ನು, ಶಾಲೆಯ ಸಹಪಾಠಿಗಳನ್ನು ಆಮಂತ್ರಿಸುತ್ತಿರಲಿಲ್ಲ. ಅವರ್ಯಾರನ್ನೂ ಸ್ವೀಕರಿಸುವ ಯೋಗ್ಯತೆ ನಮ್ಮ ಮನೆಗೆ ಇಲ್ಲ ಎನ್ನುವುದು ನಮ್ಮ ನಂಬಿಕೆಯಾಗಿತ್ತು. ಆದರೆ ನಮ್ಮ ಮನೆ ಅಥವಾ ಗುಡಿಸಲು ಸಾಮಾನ್ಯ ಮನೆಯಲ್ಲ, ಮಹಡಿಯಿರುವ ಅಪರೂಪದ ಮನೆ ಎಂಬ ಒಂದು ಗುಪ್ತವಾದ ಹೆಮ್ಮೆ ನಮಗಿತ್ತು. ಆ ಗುಪ್ತತೆಗೆ ಹಲವು ಗೋಚರಾಗೋಚರ ಆಯಾಮಗಳಿದ್ದವು.

    ನಮ್ಮ ಮನೆ ಹಳ್ಳಿಯ ಇತರ ಸಾಮಾನ್ಯ ಗುಡಿಸಲುಗಳಂತೆ ಅಲ್ಲ. ಅದರ ವಿನ್ಯಾಸ ಆ ಕಾಲದ ದೊಡ್ಡ ಮನೆಗಳ ವಿನ್ಯಾಸದಂತೆಯೇ ಇತ್ತು. ಆದರೆ ಮನೆಯ ಸುತ್ತಲಿನ ನಾಲ್ಕು ಗೋಡೆಗಳ ಎತ್ತರ ಕೇವಲ ಐದು ಅಡಿ. ಎಲ್ಲಾ ಒಂದು ಅಡಿ ದಪ್ಪದ ಮಣ್ಣಿನ ಗೋಡೆಗಳು.

    ಮನೆಯನ್ನು ಪ್ರವೇಶಿಸಿದಾಗ ಸಿಗುವ ಹಜಾರ ಎಂಬ ಕೋಣೆಯ ಉದ್ದ ಹನ್ನೆರಡು ಅಡಿ. ಅಗಲ ಐದೂಮುಕ್ಕಾಲು ಅಡಿ. ಅಪ್ಪ ಅಮ್ಮ ನಾನು ಜೂಜ ಮತ್ತು ಬೂದ ಐದು ಮಂದಿಯೂ ಸಾಲಾಗಿ ಚಾಪೆ ಹಾಸಿ ಮಲಗುತ್ತಿದ್ದುದು ಈ ಕೋಣೆಯಲ್ಲಿಯೇ. ನಮ್ಮ ಅಪ್ಪ ಮತ್ತು ಅಮ್ಮನಿಗೆ ಮಲಗಲು ಈ ಅಗಲ ಸಾಕಾಗುತ್ತಿತ್ತು. ಚಿಕ್ಕವರಿರುವಾಗ ನಮಗೂ ಸಾಕಾಗುತ್ತಿತ್ತು. ದೊಡ್ಡವರಾದ ಮೇಲೆ ನಮಗೆ ಮೂವರಿಗೂ ಆ ಅಗಲ ಸಾಕಾಗುತ್ತಿರಲಿಲ್ಲ. ಮೊದಲು ಐದೂಮುಕ್ಕಾಲು ಅಡಿ ಎತ್ತರ ತಲಪಿದ ನಾನು ಒಂದೋ ತಲೆದಿಂಬು ಇಡದೆ ಅಥವಾ ಸ್ವಲ್ಪ ಓರೆಯಾಗಿ ಮಲಗುತ್ತಿದ್ದೆ. ಹಜಾರದ ಉದ್ದಕ್ಕೆ ಉತ್ತರ ದಕ್ಷಿಣವಾಗಿ ಮಲಗುವುದಕ್ಕೆ ಅಮ್ಮನ ಆಕ್ಷೇಪ ಇತ್ತು. `ಮಲಗುವುದು ಎಲ್ಲಿಯೂ ಮೂಡು ಪಡು ಆಗಿರಬೇಕು’ ಎನುವುದು ಅಮ್ಮನ ಸಿದ್ಧಾಂತವಾಗಿತ್ತು.

    ಹಜಾರದ ಬಲಗಡೆಗೆ ಮತ್ತು ಎಡಗಡೆಗೆ ಹಜಾರದಷ್ಟೇ ಉದ್ದ ಮತ್ತು ಅಗಲದ ಎರಡು ಕೋಣೆಗಳು. ಒಳಗೋಡೆಯ ಎತ್ತರ ನಾಲ್ಕೂ ಕಡೆ ಹದಿನಾರು ಅಡಿ. ಮನೆಯ ಸುತ್ತಿನ ಗೋಡೆಗಳ ಬಗ್ಗೆ ಸರಳವಾಗಿ ಹೇಳುವುದಾದರೆ ಐದು ಅಡಿ ಎತ್ತರದ ಗೋಡೆಗಳ ಒಂದು ಚೌಕದ ಒಳಗೆ ಹದಿನಾರು ಅಡಿ ಎತ್ತರದ ಗೋಡೆಗಳ ಇನ್ನೊಂದು ಚೌಕ. 

    ಹಜಾರದ ಬಲಗಡೆಗೆ ಇರುವ ಕೋಣೆಗೆ ಒಂದು ದಾರವಂದ ಇದೆ. ಇದು ಅಡಿಗೆ ಮನೆ. ಹಜಾರದ ಬಲಗಡೆಯ ಕೋಣೆಗೆ ಕೂಡ ಒಂದು ದಾರವಂದ ಇದೆ. ಇದು ಮಳೆಗಾಲದಲ್ಲಿ ಭತ್ತ ದಾಸ್ತಾನಿಡುವ ಮತ್ತು ಅಮ್ಮ ಭತ್ತ ಕುಟ್ಟಿ ಅಕ್ಕಿ ಮಾಡುವ ಒರಳೊನಕೆಗಳಿರುವ ಕೋಣೆ. ಅದಕ್ಕೆ ಅಮ್ಮ ಇಟ್ಟ ಹೆಸರು `ಭತ್ತ ಕುಟ್ಟುವ ಕೋಣೆ’. ಇದು ಅಮ್ಮ ನಮ್ಮೆಲ್ಲರನ್ನು ಹೆತ್ತ ಕೋಣೆಯೂ ಹೌದು. ಭತ್ತ ಕುಟ್ಟುವ ಕೋಣೆಯನ್ನು `ಹೆರಿಗೆ ಕೋಣೆ’ ಎಂದು ಬದಲಾಯಿಸಲು ಒಮ್ಮೆ ಬೂದ ಸಲಹೆ ಮಾಡಿದಾಗ ಅಮ್ಮ ತೀವ್ರವಾಗಿ ಆಕ್ಷೇಪಿಸಿದಳು. `ನಮ್ಮನ್ನು ಹೆರುವಾಗ ಭತ್ತದ ದಾಸ್ತಾನು ಇರಲಿಲ್ವ?’ ಎಂದು ನಾನು ಒಮ್ಮೆ ಅಮ್ಮನನ್ನು ಕೇಳಿದ್ದೆ. ಅದಕ್ಕೆ ಅಮ್ಮ, `ನೀವು ಮೂವರನ್ನು ಹೆತ್ತಾಗಲೂ ಮನೆಯಲ್ಲಿ ಭತ್ತ ಇರಲಿಲ್ಲ’ ಎಂದಿದ್ದಳು. ಅದರ ಅರ್ಥ ನಾವು ಮೂವರೂ ಹುಟ್ಟಿದ್ದು ಮಾರ್ಚ್ ತಿಂಗಳು ಮತ್ತು ಅಕ್ಟೋಬರ ತಿಂಗಳುಗಳ ನಡುವೆ, ಮನೆಯಲ್ಲಿ ಅಕ್ಕಿಗೆ ತತ್ವಾರವಿದ್ದ ಕಾಲದಲ್ಲಿ ಎಂದು ಅನಿಸಿತು. 

    ಹಜಾರಕ್ಕೆ ನೇರ ವಿರುದ್ಧವಾಗಿ ಹಿಂದುಗಡೆ, ಭತ್ತ ಕುಟ್ಟುವ ಕೋಣೆ ಮತ್ತು ಅಡಿಗೆ ಕೋಣೆಯ ನಡುವೆ, ಎರಡು ಗೋಡೆಗಳ ನಡುವಿನ ಕೋಣೆಯ ಅಗಲ ಎಲ್ಲಾ ಕೋಣೆಗಳಂತೆ ಐದೂಮುಕ್ಕಾಲು ಅಡಿ. ಆದರೆ ಉದ್ದ ಮಾತ್ರ ಎಂಟು ಅಡಿ. ಈ ಕೋಣೆಯನ್ನು ಮಳೆಗಾಲದಲ್ಲಿ ಸೌತೆಕಾಯಿ, ಕುಂಬಳಕಾಯಿ, ಸಿಹಿಕುಂಬಳ ಮುಂತಾದ್ದನ್ನು ದಾಸ್ತಾನಿಡಲು ಬಳಸಲಾಗುತ್ತದೆ. ಈ ಕೋಣೆಗೆ ನಾವಿಟ್ಟ ಹೆಸರು `ಕುಂಬಳಕಾಯಿ ಕೋಣೆ’. ಈ ಕೋಣೆಯ ಗೋಡೆಯ ಹೊರಗಿನ ನಾಲ್ಕು ಅಡಿಯನ್ನು ಅಡಿಗೆ ಕೋಣೆಯ ಮುಂದರಿದ ಭಾಗವನ್ನಾಗಿ ಮಾಡಿಕೊಳ್ಳಲಾಗಿದೆ. ಅಡಿಗೆ ಕೋಣೆಯ ಪಾತ್ರೆಪರಡಿಯಲ್ಲದೆ ಅಡಿಗೆಗೆ ಅಗತ್ಯವಿರುವ ಇತರ ಪರಿಕರಗಳನ್ನು ಇರಿಸಲು ಈ ಜಾಗವನ್ನು ಬಳಸಲಾಗುತ್ತದೆ. ಅಡಿಗೆ ಕೋಣೆಯಲ್ಲಿ ಎರಡು ಸೌದೆ ಒಲೆಗಳಿವೆ. ಸಾಮಾನ್ಯವಾಗಿ ಬಳಕೆಯಲ್ಲಿರುವುದು ಒಂದೇ ಒಲೆ. ಒಲೆಗಳ ಮೇಲೆ ತುಸು ಎತ್ತರದಲ್ಲಿ ಗೋಡೆಯಲ್ಲಿ ಹೊಗೆ ಹಲಗೆ ಎಂಬ ಒಂದು ಹಲಗೆಯನ್ನು ಕುಳ್ಳಿರಿಸಲಾಗಿದೆ. ಬೀಜದ ಭತ್ತ, ತರಕಾರಿ ಬೀಜ ಮುಂತಾದ್ದು ಹುಳಬಿದ್ದು ಕೆಡದಂತಿರಿಸಿಲು ಈ ಹಲಿಗೆಯ ಮೇಲೆ ಇಡಲಾಗುತ್ತಿತ್ತು.

    ಎಲ್ಲಾ ಕೋಣೆಗಳ ನಡುವಿನ ಐದೂಮುಕ್ಕಾಲು ಅಡಿ ಅಗಲದ ಒಟ್ಟು ನಾಲ್ಕು ಗೋಡೆಗಳಲ್ಲಿ ಇರುವುದು ಕೇವಲ ಐದೂವರೆ ಅಡಿ ಎತ್ತರದ ದಾರವಂದ ಮಾತ್ರ. ಬಾಗಿಲು ಇಲ್ಲ. ಬಾಗಿಲಿಲ್ಲದಿರಲು ಕಾರಣ, ಅದಕ್ಕೆ ಬೇಕಾದ ಹಲಗೆ ಕೊಂಡುಕೊಳ್ಳಲು ಹಣವಿಲ್ಲದುದೇ ಆಗಿತ್ತು. ಪಶ್ಚಿಮಾಭಿಮುಖವಾದ ಮನೆಯ ಪ್ರವೇಶದ ದ್ವಾರಕ್ಕೆ ಭದ್ರವಾದ ಬಾಗಿಲು ಇದೆ. ಅಡಿಗೆ ಕೋಣೆಯ ಬಡಗು ಗೋಡೆಯಲ್ಲಿ ಒಂದು ದ್ವಾರವಿದೆ. ಇದರ ಎತ್ತರ ಕೇವಲ ಐದೂಕಾಲು ಅಡಿ. ಇದು ಮನೆಯ ಹಿಂಬಾಗಿಲು. ಇದಕ್ಕೆ ಮುಚ್ಚುಬಾಗಿಲಿದೆ. 

    ಅಡಿಗೆ ಕೋಣೆ ಎಂಬುದು ನಮ್ಮ ಊಟದ ಕೋಣೆ ಕೂಡ ಆಗಿದೆ. ಈ ಕೋಣೆಯಲ್ಲಿ ಅಪ್ಪ ಇರುವಾಗ ನಾವು ಐದು ಮಂದಿ, ಅಪ್ಪ ತೀರಿದ ಮೇಲೆ ನಾವು ನಾಲ್ಕು ಮಂದಿ ಮಣೆಗಳ ಮೇಲೆ ಒಂದೇ ಹೊತ್ತಿನಲ್ಲಿ ಸಾಲಾಗಿ ಕುಳಿತುಕೊಂಡು ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಮಾಡುತ್ತೇವೆ. ಅಮ್ಮ ತಟ್ಟೆಗಳಿಗೆ ಅನ್ನ ಹಾಕುತ್ತಿದ್ದುದು ಎಲ್ಲರೂ ಬಂದು ಕುಳಿತ ಮೇಲೆಯೇ. ಇರುವುದನ್ನು ಹಂಚಿ ತಿನ್ನಲು ಈ ರೀತಿ ಒಟ್ಟಿಗೆ ಊಟ ಮಾಡುವುದು ಅನಿವಾರ್ಯವಾಗಿತ್ತು ಎನ್ನುವುದು ನಮಗೆ ಅರಿವಾದುದು ನಾವು ಸಾಕಷ್ಟು ದೊಡ್ಡವರಾದ ಮೇಲೆ.

    ಕಿಟಕಿಗಳ ವಿಚಾರ ಹೇಳುವುದಾದರೆ, ಹಜಾರಕ್ಕೆ ಎರಡು ಕಿಟಕಿಗಳು; ಅಡಿಗೆ ಮನೆಗೆ ಪಡುಗಡೆಯ ಗೋಡೆಯಲ್ಲಿ ಒಂದು ಕಿಟಕಿ, ಬಡಗು ಗೋಡೆಯಲ್ಲಿ ಒಲೆಗೆ ಹತ್ತಿರ ಇನ್ನೊಂದು ಕಿಟಕಿ; ಹಜಾರದ ಎಡಗಡೆಯ ಕೋಣೆಯ ಗೋಡೆಯಲ್ಲಿ ಒಂದು ಕಿಟಕಿ ಮತ್ತು ಹಜಾರದ ಹಿಂಬದಿಯ ಎಂಟು ಅಡಿ ಉದ್ದದ ಗೋಡೆಯಲ್ಲಿ ಒಂದು ಕಿಟಕಿ. ಅಡಿಗೆ ಕೋಣೆಯ ಬಡಗು ಕಿಟಕಿಗೆ ಮಾತ್ರ ಮುಚ್ಚುಬಾಗಿಲಿತ್ತು. ಬೇರೆ ಯಾವ ಕಿಟಕಿಗೂ ಮುಚ್ಚುಬಾಗಿಲಿಲ್ಲ. ಇಡೀ ಮನೆಯ ಹೊರಗೋಡೆಗಳಲ್ಲಿದ್ದ ಒಟ್ಟು ಆರು ಕಿಟಕಿಗಳ ಪೈಕಿ ಮುಚ್ಚುಬಾಗಿಲಿದ್ದುದು ಅಡಿಗೆ ಕೋಣೆಯ ಈ ಕಿಟಕಿಗೆ ಮಾತ್ರ.

    ನಮ್ಮ ಮನೆಯೆಂಬ ಬಡ ಗುಡಿಸಲಿನ ವಿವರ ಇಲ್ಲಿಗೆ ಮುಗಿಯುವುದಿಲ್ಲ. ಹಜಾರದ ಹದಿನಾರು ಅಡಿ ಎತ್ತರದ ಒಳಗೋಡೆಗಳ ನಡುವೆ ಉಂಟಾಗುವ ಹನ್ನೆರಡು ಅಡಿ ಉದ್ದ ಮತ್ತು ಅಷ್ಟೇ ಅಗಲದ, ಅಂದರೆ ನೂರನಲ್ವತ್ತನಾಲ್ಕು ಚದರ ಅಡಿ ವಿಸ್ತಾರದ, ಚೌಕದಲ್ಲಿ ಒಂದು ಕೋಣೆಯಿದೆ. ಇದಕ್ಕೆ ಒಳಹೋಗಲು ಹಜಾರದಿಂದ ಒಂದು ಬಾಗಿಲಿದೆ. ಇದಕ್ಕೆ ಭದ್ರವಾದ ಮುಚ್ಚುಬಾಗಿಲಿದೆ. ಈ ಕತ್ತಲೆ ಕೋಣೆಗೆ ನಾವಿಟ್ಟ ಹೆಸರು `ಗರ್ಭಗುಡಿ’ ಎಂದು. ಈ ಗರ್ಭಗುಡಿಗೆ ಬಹಳ ಚಿಕ್ಕದಾದ ಒಂದು ಕಿಟಕಿಯಿದೆ. ಇದಕ್ಕೆ ಮುಚ್ಚುಬಾಗಿಲಿದೆ. ಇದನ್ನು ತೆರೆದರೆ ಗರ್ಭಗುಡಿಗೆ ಈ ಕಿಟಕಿಯ ಮೂಲಕ ಬೆಳಕು ಬರಬೇಕಾದ್ದು ಮೂಡುಗಡೆಯಿಂದ ಕುಂಬಳಕಾಯಿ ಕೋಣೆಯ ಗೋಡೆಯಲ್ಲಿರುವ ಕಿಟಕಿಯ ಮೂಲಕ. ಈ ಕಿಟಕಿ ಮುಚ್ಚಿದರೆ ಗರ್ಭಗುಡಿಯಲ್ಲಿ ಹಂಡ್ರಡ್ ಪರ್ಸೆಂಟ್ ಕತ್ತಲೆ. ಬೆಳಕು ಒಳಗೆ ಬರಬೇಕಾದರೆ ಕಿಟಕಿಯಲ್ಲಿರುವ ಮುಚ್ಚುಬಾಗಿಲನ್ನು ತೆರೆಯಬೇಕು. ಅದನ್ನು ತೆರೆಯುತ್ತಲೇ ಇರಲಿಲ್ಲವಾದುದರಿಂದ ಹಜಾರದಿಂದ ಗರ್ಭಗುಡಿಗಿರುವ ಬಾಗಿಲನ್ನು ತೆರೆದಾಗ ಮಾತ್ರ ಗರ್ಭಗುಡಿಯ ಒಳಗೆ ಬೆಳಕು. ಬೆಳಕೆಂದರೆ ಎಷ್ಟು, ಕೇವಲ ಹತ್ತು ಪರ್ಸೆಂಟ್! ಗೋಡೆಯಲ್ಲಿರುವ ಕಿಟಕಿ ತೆರೆದರೆ ಇಪ್ಪತ್ತೈದು ಪರ್ಸೆಂಟ್. ಆದ್ದರಿಂದ ಹಗಲಲ್ಲಿ ಕೂಡ ಅದರೊಳಗೆ ಹೋಗಬೇಕಾದರೆ ದೀಪ ಉರಿಸಲೇ ಬೇಕು. ಅದಕ್ಕೆಂದೇ ಗರ್ಭಗುಡಿಯೊಳಗೆ ಒಂದ ಕಂಚಿನ ಕಾಲುದೀಪವಿತ್ತು. ಅದರಲ್ಲಿ ಯಾವಾಗಲೂ ಎಣ್ಣೆ ಬತ್ತಿ ಇರುತ್ತಿತ್ತು. ಕೆಲವೊಮ್ಮೆ ಯಾವುದೋ ಹಬ್ಬದ ಅಮ್ಮ ರಾತ್ರಿ ಕಾಲುದೀಪವನ್ನು ಉರಿಸುತ್ತಿದ್ದರು. ದೊಡ್ಡವರಾದ ಮೇಲೆ ಗೊತ್ತಾಯಿತು, ಆ ಹಬ್ಬಗಳು ದಸರೆ, ಚೌತಿ, ದೀಪಾವಳಿ ಇತ್ಯಾದಿ ಕೆಲವು ಎಂದು. 

    ಗರ್ಭಗುಡಿಯ ಮೇಲೆ ದಪ್ಪನೆಯ ತೊಲೆಗಳ ಮೇಲೆ ಮರದ ಹಲಗೆ ಹಾಸಿದ ಅಟ್ಟವಿತ್ತು.  ಅದಕ್ಕೆ ಹೋಗಲು ಗರ್ಭಗುಡಿಯಿಂದ ಒಂದು ಅಡ್ಡ ಹಲಗೆಯ ದ್ವಾರವಿತ್ತು. ಅಟ್ಟಕ್ಕೆ ಹೋಗಲು ಬಿಜಾಗರಿ ಜೋಡಿಸಿರುವ ಆ ಹಲಗೆಯನ್ನು ಎತ್ತಿ ಅಟ್ಟದ ಗೋಡೆಗೆ ಒರಗಿಸಿ ಇಡಬೇಕು. ಅಟ್ಟ ಹತ್ತಲು ಅಲ್ಲೇ ಗೋಡೆಗೆ ಆನಿಸಿರಿಸಿ ಒಂದು ಮರದ ಏಣಿಯಿತ್ತು.

    ಅಟ್ಟದ ಮೇಲೆ ನುಣ್ಣಗೆ ಅರೆದ ಮಣ್ಣಿನ ಕೆಂಪು ಕಾವಿಯ ನೆಲವಿತ್ತು. ಅದು ಸಿಮೆಂಟಿನ ನೆಲದಂತೆಯೇ ಇತ್ತು.  ನಾವು ಆ ಅಟ್ಟದ ಕಿಟಕಿ ಬಾಗಿಲು ಇಲ್ಲದ ಒಂಟಿ ಕೋಣೆಯನ್ನು ಅಟ್ಟ ಎನ್ನದೆ `ಮಾಳಿಗೆ’ ಎನ್ನುತ್ತಿದ್ದುದು ಅದರ ನೆಲದ ಸೌಂದರ್ಯದ ಕಾರಣದಿಂದ. ಆ ಸೌಂದರ್ಯದ ಹಿಂದೆ ಇದ್ದುದು ನಮ್ಮ ಅಜ್ಜಿಯ, ಅಂದರೆ ಅಪ್ಪನ ಅಮ್ಮನ ಕೈ ಎಂದು ನಮ್ಮ ಅಮ್ಮ ಹೇಳುತ್ತಿದ್ದಳು. ಏನಿದ್ದರೂ ಆ ಸೌಂದರ್ಯವನ್ನು ಕಾಣಲು ಹಗಲಲ್ಲಿ ಕೂಡ ಸೀಮೆಯೆಣ್ಣೆಯ ಬುಡ್ಡಿದೀಪದ ಅಗತ್ಯವಿತ್ತು. ಆ ದೀಪದ ಬೆಳಕಿನ ಜೊತೆ ಅದು ಉಗುಳುವ ಹೊಗೆಯ ವಾಸನೆಯನ್ನು ಸಹಿಸಿಕೊಳ್ಳಬೇಕಾಗಿತ್ತು. ಆ ಮನೆಯೊಳಗೆ ಬದುಕಿದ ಜೀವಿಗಳ ಹೊರತು ಬೇರೆ ಯಾರೂ ಆ ಮಾಳಿಗೆಯ ಸೌಂದರ್ಯವನ್ನು ಕಂಡವರಲ್ಲ. ಆದರೆ ಆ `ಮಾಳಿಗೆ ಕೋಣೆ’ಯಲ್ಲಿ ಅದರ ಅಡಿಯಲ್ಲಿದ್ದ `ಗರ್ಭಗುಡಿ’ಯಲ್ಲಿದ್ದಂಥ ಕತ್ತಲು ಇರಲಿಲ್ಲ. ಮಾಡಿನಡಿಯ ಅಷ್ಟಬಂಧದ ತೊಲೆಗಳ ಅಡಿಯಿಂದ ಒಳಗೆ ಸೂರ್ಯ ಕಳಿಸುವ ಬೆಳಕಿನ ಒಂದು ಚಿಕ್ಕ ಅಂಶ ತೂರಿಬರುತ್ತಿತ್ತು. 

    ಈ ಅಟ್ಟಕ್ಕೆ ಯಾವುದೇ ಕಿಟಕಿ ಇಲ್ಲ. ಅದರ ಗೋಡೆ ಮತ್ತು ನೆಲವನ್ನು ದೀಪದ ಬೇಳಕಿನಲ್ಲಿ ಮಾತ್ರವೇ ಕಾಣಲು ಸಾಧ್ಯ. ಅಟ್ಟವನ್ನು ಮುಖ್ಯವಾಗಿ, ಮಳೆಗಾಲದಲ್ಲಿ ಬೇಯಿಸಿದ ಭತ್ತ ಒಣಗಿಸಲು ಬಳಸುತ್ತಿದ್ದೆವು. ಯಾರಾದರೂ ಅಟ್ಟದಲ್ಲಿರುವಷ್ಟು ಹೊತ್ತು ಅಡಿಗೆ ಕೋಣೆಯಲ್ಲಿ ಒಲೆ ಉರಿಯಬಾರದೆಂದು ನಿಯಮವಿತ್ತು. ಒಲೆಯಲ್ಲಿ ಏನಾದರೂ ಬೇಯುತ್ತಿದ್ದರೆ, ಅಟ್ಟ ಹತ್ತಿದವರು ಉರಿಯುವ ಸೌದೆಯ ಹೊಗೆಯನ್ನು ಕಣ್ಣು ಬಾಯಿ ಮೂಗುಗಳಿಂದ ನುಂಗಬೇಕಾಗುತ್ತಿತ್ತು.

    ಗರ್ಭಗುಡಿಯಲ್ಲಿ ಐದು ಅಡಿ ಎತ್ತರದಲ್ಲಿ ಸೆಗಣಿ ಸಾರಿಸಿದ ನುಣ್ಣಗಿನ ಗೋಡೆಯ ಮೇಲೆ ಎರಡು ಸಾಲು ಬಿಳಿ ಬಣ್ಣದ ಹಸ್ತದ ಗುರುತುಗಳು ಇದ್ದವು. `ಅದು ನಿಮ್ಮ ಅಜ್ಜಿಯ ಬಲ ಕೈ’ ಎಂದು ಅಮ್ಮ ಹೇಳುತ್ತಿದ್ದಳು. `ಜೇಡಿ ಮಣ್ಣು ಕಲಸಿ ಅದರಲ್ಲಿ ಕೈ ಅದ್ದಿ ಗೋಡೆಯ ಮೇಲೆ ಒತ್ತಿದ್ದು. ಅತ್ತೆ ಬಹಳ ಒಳ್ಳೆಯ ಮನಸ್ಸಿನ ಹೆಂಗಸು. ರಾತ್ರಿ ಹಗಲೆನ್ನದೆ ಇಡೀ ದಿನ ಕೆಲಸ ಮಾಡುತ್ತಿದ್ದರು. ಅವರೊಬ್ಬರೇ ಮನೆಯ ಎಲ್ಲಾ ಗೋಡೆಗಳನ್ನು ಅರೆದು ತಿಕ್ಕಿ ನುಣ್ಣಗೆ ಮಾಡಿರುವುದು. ಅಟ್ಟದ ಸುತ್ತಿನ ನಾಲ್ಕು ಗೋಡೆಗಳನ್ನು ಮಾತ್ರ ಕೆಲಸದವರಿಂದ ಅರೆಸಿದ್ದು.’

    ಕಂಚಿನ ಕಾಲುದೀಪವಲ್ಲದೆ ಸಾಮಾನ್ಯವಾಗಿ ಗರ್ಭಗುಡಿಯಲ್ಲಿರುವುದು ಒಂದೆರಡು ಅಕ್ಕಿ ಮುಡಿಗಳು. ದಿನಬಳಕೆಯ ಊಟದ ಅಕ್ಕಿ ಹಾಕಿಡಲು ಒಂದು ತಾಮ್ರದ ಹಂಡೆ, ಒಂದೆರಡು ಹಳೆಯ ಕಬ್ಬಿಣದ ಟ್ರಂಕುಗಳು. ಅವುಗಳಲ್ಲಿ ಹಿಂದಿನ ಕಾಲದ ಒಂದೆರಡು ಬೆಳ್ಳಿ ನಾಣ್ಯಗಳು, ಅಮ್ಮ ತನ್ನ ಮದುವೆಯಲ್ಲಿ ಉಟ್ಟ `ಧಾರೆ ಸೀರೆ’ ಮತ್ತು ಇನ್ನೊಂದು ಒಳ್ಳೆಯ ಸೀರೆ.

    ಕಂಚಿನ ಕಾಲು ದೀಪದ ಬುಡದಲ್ಲಿ ಒಂದು ಮಣೆ. ಮಣೆಯ ಮೇಲೆ ನಮ್ಮ ಕೆಲವು ಹಳೆಯ ಪಠ್ಯ ಪುಸ್ತಕಗಳು. ನಾವು ಮೂವರೂ ದೊಡ್ಡವರಾಗಿ `ಶಾಲಾ ವಿದ್ಯಾರ್ಥಿ’ಗಳಾದ ಮೇಲೆ ಗರ್ಭಗುಡಿಯಲ್ಲಿ ದಸರೆ, ದೀಪಾವಳಿ ಮತ್ತು ಬೇರೆ ಹಬ್ಬದ ದಿನಗಳಲ್ಲಿ ನಾವು ಮೂವರೂ ಸಾಯಂಕಾಲ ಆ ದೀಪ ಉರಿಸಿ ಭಜನೆ ಹಾಡುಗಳನ್ನು ಹಾಡುತ್ತಿದ್ದೆವು. ಪುಸ್ತಕಗಳನ್ನು ಕಾಣುವಾಗ ನಮಗೆ ಸರಸ್ವತಿಯ ನೆನಪಾಗುತ್ತಿತ್ತು. ದೀಪವುರಿಸಿದಾಗಲೆಲ್ಲ ಇದು ದೇವರ ಕೋಣೆ ಎಂದನಿಸುತ್ತಿತ್ತು. 

    `ಭತ್ತ ಕುಟ್ಟುವ ಕೋಣೆ’ ನನ್ನ ಹೈಸ್ಕೂಲು ಓದಿನ ಕಾಲದಲ್ಲಿ ನನ್ನ ಓದುವ ಕೋಣೆಯಾಗಿತ್ತು. ಜೂಜ ಮತ್ತು ಮಾದ ಹಜಾರದ ಕೊನೆಯಲ್ಲಿ ಕುಳಿತುಕೊಂಡು ಓದುತ್ತಿದರು. ಹಗಲು ಹೆಚ್ಚಾಗಿ ನಮ್ಮ ಓದೆಲ್ಲ ಹೊರಗೆ ಜಗಲಿಯಲ್ಲಿ ಅಥವಾ ಮನೆಯಂಗಳದ ಪಕ್ಕದ ಹಲಸಿನ ಮರಗಳ ಬುಡದ ತಂಪು ನೆರಳಿನಲ್ಲಿ.

    ವಿವರದಲ್ಲಿ ನಮ್ಮ ಮನೆ ಹಳೆಯ ಕಾಲದ ಅರಸರ ಮನೆಯಂತೆ ತೋರಬಹುದು. ಆದರೆ ಈ ನಿಜದ ಒಳಗಿನ ನಿಜ ಏನೆಂದರೆ, ಇದು ಒಂದು ಬರೀ ಹುಲ್ಲು ಮಾಡಿನ ಗುಡಿಸಲು. ಪ್ರತಿ ವರ್ಷ ಹೊಸ ಹುಲ್ಲು ಹೊದಿಸಲು ಸಹ ನಾವು ಹಣಕ್ಕಾಗಿ ಒದ್ದಾಡಬೇಕು. ಹುಲ್ಲಿನ ಅಡಿಯಲ್ಲಿರುವುದು ಹೆಣೆದ ತೆಂಗಿನ ಮಡಲು. ಅದನ್ನು ಕೂಡ ಎರಡು ಮೂರು ವರ್ಷಗಳಿಗೊಮ್ಮೆ ಬದಲಾಯಿಸಿ ಹೊಸದು ಹಾಕಬೇಕು. ಮಡಲಿನಡಿಯಲ್ಲಿರುವುದು ಬಿದಿರಿನ ಪಕ್ಕಾಸು ಮತ್ತು ಸಲಿಕೆಗಳು. ಅವು ಕೂಡ ನೂರಾರು ವರ್ಷ ಬಾಳುವುದಿಲ್ಲ.

    ಮನೆಯ ಮಣ್ಣಿನ ನೆಲ ಸಿಮೆಂಟಿನ ನೆಲದಂತೆ ಕಾಣಿಸುತ್ತಿತ್ತು. ಎಲ್ಲೆಲ್ಲಿಂದಲೋ ಕಾವಿ ಬಣ್ಣದ ಕಲ್ಲುಗಳನ್ನು ಸಂಗ್ರಹಿಸಿ ಗುದ್ದಿ ಪುಡಿಮಾಡಿ ಕಲಸಿ, ಅರೆ ಹಸಿ ನೆಲವನ್ನು ಅರೆಯುವಾಗ ಮಣ್ಣಿಗೆ ಸೇರಿಸಿ ದಿನಗಟ್ಟಲೆ ಅರೆದು ತಿಕ್ಕಿ ಹೊಳೆಯುವಂತೆ ಮಾಡುವುದು ಸಣ್ಣ ಶ್ರಮದ

    Enjoying the preview?
    Page 1 of 1