Discover millions of ebooks, audiobooks, and so much more with a free trial

Only $11.99/month after trial. Cancel anytime.

Kshameyirali Taayi Tunge...
Kshameyirali Taayi Tunge...
Kshameyirali Taayi Tunge...
Ebook542 pages2 hours

Kshameyirali Taayi Tunge...

Rating: 0 out of 5 stars

()

Read preview

About this ebook

ನಮ್ಮ ಬದುಕಿನ ಕಾಲಘಟ್ಟದಲ್ಲಿ ಅದೆಷ್ಟು ಬಾರಿ ನಾವು ಸಂಕ್ರಮಣ ಕಾಲ ಎನ್ನುವ ಮಾತನ್ನು ಕೇಳುತ್ತೇವೆ . ಹಳ್ಳಿಯ ಸುಸಂಸ್ಕೃತ ಮನಸ್ಸೊಂದು ತನ್ನ ಮಣ್ಣಿನ ಮೌಲ್ಯಗಳ ಉಳಿವಿಗಾಗಿ, ಮಗಳಿಗೆ ಸಮಾಜದಲ್ಲಿ ಸುರಕ್ಷಿತ, ಮೌಲ್ಯಯುತ ಬಾಳು ಕಟ್ಟಿಕೊಡುವ ನಿಟ್ಟಿನಲ್ಲಿ ನಡೆಸುವ ಹೋರಾಟದ ಕತೆಯೇ "ಕ್ಷಮೆಯಿರಲಿ ತಾಯಿ ತುಂಗೆ".
LanguageKannada
Release dateApr 2, 2021
ISBN6580241306740
Kshameyirali Taayi Tunge...

Read more from Vijayalakshmi S.P.

Related authors

Related to Kshameyirali Taayi Tunge...

Related ebooks

Reviews for Kshameyirali Taayi Tunge...

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kshameyirali Taayi Tunge... - Vijayalakshmi S.P.

    https://www.pustaka.co.in

    ಕ್ಷಮೆಯಿರಲಿತಾಯಿತುಂಗೆ...

    Kshameyirali Taayi Tunge…

    Author:

    ವಿಜಯಲಕ್ಷ್ಮಿ ಎಸ್. ಪಿ

    Vijayalakshmi S.P

    For more books

    https://www.pustaka.co.in/home/author/vijayalakshmi-sp

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    ಅಧ್ಯಾಯ 1

    ಅಧ್ಯಾಯ 2

    ಅಧ್ಯಾಯ 3

    ಅಧ್ಯಾಯ 4

    ಅಧ್ಯಾಯ 5

    ಅಧ್ಯಾಯ 6

    ಅಧ್ಯಾಯ 7

    ಅಧ್ಯಾಯ 8

    ಅಧ್ಯಾಯ 9

    ಅಧ್ಯಾಯ 10

    ಅಧ್ಯಾಯ 11

    ಅಧ್ಯಾಯ 12

    ಅಧ್ಯಾಯ 14

    ಅಧ್ಯಾಯ 15

    ಅಧ್ಯಾಯ 16

    ಅಧ್ಯಾಯ 17

    ಅಧ್ಯಾಯ 18

    ಅಧ್ಯಾಯ 19

    ಅಧ್ಯಾಯ 20

    ಅಧ್ಯಾಯ 21

    ಅಧ್ಯಾಯ 22

    ಅಧ್ಯಾಯ 23

    ಅಧ್ಯಾಯ 24

    ಅಧ್ಯಾಯ 1

    ದೇವಸ್ಥಾನದ ಜಗುಲಿಯ ಎಡಮೂಲೆಯಲ್ಲಿ ಚಪ್ಪಲಿ ಕಳಚಿ, ಅಲ್ಲಿದ್ದ ಸರ್ಕಾರೀನಳದ ಪಂಪು ಒತ್ತಿದ ಶಂಕರ. ಹೆಬ್ಬೆರಳ ಗಾತ್ರದಲ್ಲಿ ಬೀಳುವ ನೀರಿಗೆ ಕಾಲುಗಳೊಡ್ಡಿ ತೊಳೆದುಕೊಂಡ. ದೇವಸ್ಥಾನದ ಹೆಬ್ಬಾಗಿಲ ಹತ್ತಿರ ಬಂದು ಬಗ್ಗಿ ಎರಡೂ ಕೈಗಳಿಂದ  ಹೊಸ್ತಿಲಿಗೆ ನಮಸ್ಕರಿಸಿ ಒಳಗೆ ಕಾಲಿಟ್ಟ. ಎದುರಿನಲ್ಲಿ ಕಾಣುವ ಗರ್ಭಗುಡಿಯ ಶಿವನಿಗೆ ವೇದಸಹಿತ ಮಂತ್ರೋಚ್ಛಾರಣೆಯ ಸಾಂಗೋಪಾಂಗ ಪೂಜೆ ನಡೆಯುತ್ತಿತ್ತು.

    ಇದು ಮುಂಜಾವದಲ್ಲಿ ನಡೆಯುವ ಧನುರ್ಮಾಸದ ವಿಶೇಷಪೂಜೆ. ತಿಂಗಳುಪೂರ್ತಿ ನಡೆಯುವ ಈ ದೇವರಸೇವೆಯನ್ನು ಶಂಕರ ಎಂದೂ ತಪ್ಪಿಸಿಕೊಳ್ಳುವುದಿಲ್ಲ. ಮುಂಜಾವದ ನಾಲ್ಕುಗಂಟೆಗೇ ಎದ್ದು, ಸ್ನಾನ, ಸಂಧ್ಯಾವಂದನೆಗಳನ್ನು ಮುಗಿಸುತ್ತಾನೆ. ಮನೆದೇವರಿಗೆ ಒಂದು ಗಂಟೆ ಶಾಸ್ತ್ರೋಕ್ತವಾಗಿ ಪೂಜೆ ಮಾಡುವುದು ಅವನ ನಿತ್ಯರೂಢಿಯಾದರೂ, ಈ ಧನುರ್ಮಾಸದಲ್ಲಿ ಮಾತ್ರ ಅದಕ್ಕೆ ಒಂಚೂರು ವಿನಾಯಿತಿ ಕೊಟ್ಟುಕೊಂಡಿದ್ದಾನೆ. ಕಾರಣ, ಈಶ್ವರ ದೇವಸ್ಥಾನದಲ್ಲಿ ನಡೆಯುವ ಈ ಸಾಂಗೋಪಾಂಗ ಪೂಜೆಯಲ್ಲಿ ಪಾಲ್ಗೊಳ್ಳುವುದು ಅವನಿಗೆ ಇನ್ನಿಲ್ಲದಷ್ಟು ಆನಂದ, ಮನಃಶಾಂತಿಯನ್ನು ಕೊಡುತ್ತದೆ. ಹಾಗಾಗಿ ಈ ಒಂದುಮಾಸ ಮಾತ್ರ ಸ್ವಲ್ಪ ಚುಟುಕಾಗಿ ಮನೆದೇವರ ಪೂಜೆಮಾಡಿ ದೇವಸ್ಥಾನಕ್ಕೆ ಹೊರಟುಬಿಡುತ್ತಾನೆ. ಗರ್ಭಗುಡಿಯಲ್ಲಿ ಅರ್ಚಕ ರಾಮಭಟ್ಟರ ಗಂಟೆಯಂಥ ದನಿಯ ಮಂತ್ರೋಚ್ಚಾರಣೆ ನಡೆದಿದ್ದು, ಭಕ್ತರ ಮೈಯ್ಯಲ್ಲಿ ಭಕ್ತಿ ಉಕ್ಕಿಸುವಂತಿತ್ತು.

    ಪ್ರವೇಶದ್ವಾರದಲ್ಲಿದ್ದ ಬೃಹದ್ ಗಂಟೆಯನ್ನು ಶಬ್ದಿಸಿದ ಶಂಕರ. 'ಢಣ್, ಢಣ್' ಶಬ್ದದಲ್ಲಿ ಹೊರಟ ಗಂಟಾನಾದದ ಅನುರಣನ ಒಂದೆರಡು ನಿಮಿಷಗಳವರೆಗೂ ಕೇಳಿಸಿತು. ಮೊದಲಿಗೆ, ಮಂಡಿಯೂರಿ ಕುಳಿತಿದ್ದ ಬಸವನಮೂರ್ತಿಯ ಹತ್ತಿರಕ್ಕೆ ಹೋದನು. ಮೂರ್ತಿಯನ್ನು ಅಂಗೈಗಳಿಂದ ಮುಟ್ಟಿ ನಮಸ್ಕರಿಸಿ, ಅದರ ಕೋಡುಗಳ ಮೇಲೆ ತನ್ನ ತೋರುಬೆರಳು, ಹೆಬ್ಬೆರಳನ್ನು ಇಟ್ಟು ಮಧ್ಯೆ ಉಂಟಾದ ಕಿಂಡಿಯಲ್ಲಿ ಬಗ್ಗಿ ಶಿವನಮೂರ್ತಿಯನ್ನು ದರ್ಶನ ಮಾಡಿದ. ಶಿವಭಕ್ತ ನಂದಿಯ ಮೂಲಕವೇ ಮೊದಲು ಪರಶಿವನನ್ನು ಕಾಣುವುದು ಇಲ್ಲಿಯ ಪದ್ಧತಿ.

    "ಓಂ ನಮೋ ಶೂಲಹಸ್ತಾಯ ದಂಡಹಸ್ರಾಯ ಧೂರ್ಜಟೇ

    ನಮಸ್ತಸೈ ಲೋಕನಾಥಾಯ ಭೂತಗ್ರಾಮ ಶರೀರಿಣೇ......."

    ಕೈಮುಗಿದು, ಕಣ್ಣುಮುಚ್ಚಿ, ಸ್ತೋತ್ರಗಳನ್ನು ಹೇಳತೊಡಗಿದ. ನಂದಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಈಗ ಪ್ರಾಕಾರದ ಸುತ್ತ ಪ್ರದಕ್ಷಿಣಾ ನಮಸ್ಕಾರವನ್ನು ಆರಂಭಿಸಿದ. ಸ್ತೋತ್ರಗಳನ್ನು ಒಂದಿಷ್ಟು ಜೋರಾಗಿಯೇ ಹೇಳಲಾರಂಭಿಸಿದ.

    ಆದರೇನು, ಎಲ್ಲೆಲ್ಲಿಯೋ ಸುತ್ತುವ ಮನದ ಹಳವಂಡವನ್ನು ನಿಲ್ಲಿಸಲಾಗಲಿಲ್ಲ..!!

    ತೀರಾ ಅನ್ಯಮನಸ್ಕತೆ ಕಾಡಿತು...!!

    ನಾಲಿಗೆ ಕ್ಷಣಕಾಲ ಮಂತ್ರೋಚ್ಛಾರಣೆಯನ್ನು ನಿಲ್ಲಿಸಿಯೂ ಬಿಟ್ಟಿತು...!!

    ಆಗಲೇ ಹಿಂದಿನಿಂದ ಭುಜದ ಮೇಲೆ ಕೈಯ್ಯೊಂದು ಬಿದ್ದಿತು.

    ಚಿತ್ತಸ್ವಾಸ್ಥ್ಯವಿಲ್ಲದಂತಿದ್ದ ಶರೀರ ಬೆಚ್ಚಿ ಹಿಂದೆ ತಿರುಗಿತು.

    ಏನೋ ಮಾರಾಯ, ಎಲ್ಲಿ ಕಳ್ದುಹೋಗಿದ್ಯೋ....ಮೂರ್‍ಸಲ ಕೂಗಿದ್ನಪ್ಪ. ಗೆಳೆಯ ಸೂರಿ ಕಂಡನು.

    ಆಂ, ಹಾಂ, ಏನೆಂದೆ..?

    ಈಗ ಸೂರಿಗೆ ನಿಜಕ್ಕೂ ಆಶ್ಚರ್ಯವಾಯ್ತು. ಶಂಕರ ಯಾಕೋ ಬಳಲಿದ್ದಾನೆ ಎನ್ನಿಸಿತು. ಪಕ್ಕಕ್ಕೆ ಬಂದ. ಹೆಗಲೊತ್ತಿ ಹೇಳಿದ.

    ಏಯ್, ಏನಾಯ್ತೋ, ಹುಷಾರಿದ್ದೀಯಾ..? ಮನೇಲಿ ಎಲ್ಲ ಸೌಖ್ಯಾನಾ...?

    ತೀರಾ ಕಾಳಜಿಯಿಂದ ಪ್ರಶ್ನಿಸಿದ ಸೂರಿಯನ್ನೇ ನೋಡಿದ ಶಂಕರ. ಒಂದಿಷ್ಟು ಗಲಿಬಿಲಿಯಾಯ್ತು. ಆದರೂ ತೋರಿಸಿಕೊಳ್ಳದೆ,

    'ಅಯ್ಯೋ, ನಂಗೇನಾಗಿದ್ಯೋ ಧಾಡಿ. ಗುಂಡ್ಕಲ್ ಇದ್‍ಹಾಗೇ ಇದೀನಿ. ಮನೇಲೂ ಎಲ್ಲ ಆರಾಮ್ ಕಣೋ. ಹೀಗೇ... ಮಾತು ಮುಗಿಯುವುದರೊಳಗೇ ಸೂರಿ ಬಾಯಿಹಾಕಿದ.

    ಅಲ್ಲಪ್ಪ. ಹುಷಾರಿದೀನಿ ಅಂತೀಯಾ. ಆದ್ರೆ, ನಿನ್ನೆ ಸಂಘಕ್ಕೆ ಯಾಕ್ ಬರ್ಲಿಲ್ಲ. ರಂಗಣ್ಣನ್ನ ಮನೇಗೂ ಕಳ್ಸಿದ್ದೆ. ನೀನ್ ಅಲ್ಲೂ ಇರ್ಲಿಲ್ಲ ಅಂತ ವಾಪಸ್ ಬಂದ. ಸೂರಿಯ ದನಿಯಲ್ಲಿ ಆತಂಕವೇ ತುಂಬಿತ್ತು. ಅದನ್ನು ಶಂಕರ ಗಮನಿಸಿದ. ಒಂದುಕ್ಷಣ ಸುಮ್ಮನಿದ್ದ.

    ಸೂರಿ, ಆತಂಕ ಪಡೋ ಅಂಥದ್ದು ಏನಿಲ್ಲ ಕಣೋ. ಹೀಗೇ ಸಂಸಾರ ಅಂದ್ಮೇಲೆ ಏನಾದ್ರೂ ಸಣ್ಣಪುಟ್ಟ ತಾಪತ್ರಯ ಇರುತ್ತೆ ಅಲ್ವಾ..? ಅಷ್ಟೆ. ಇರ್ಲಿ ಬಿಡು. ಗುರುವಾರದ್ ಮೀಟಿಂಗ್ ತಪ್ಸಲ್ಲಪ್ಪ. ಸಾಧ್ಯವಾದ್ರೆ ನಾಳೆ ಸಿಕ್ತೀನಿ. ಬಾ ಈಗ ಪ್ರದಕ್ಷಿಣೆ ಹಾಕಣ. ಹೇಳುತ್ತ, ಮುಂದೆ ನಡೆದಾಗ, ಸೂರಿಗೆ ಮತ್ತೇನನ್ನೂ ಕೇಳಲು ಸಾಧ್ಯವಾಗಲಿಲ್ಲ.

    ಸೂರಿಗೆ ತಿಳಿದಿದೆ, ಶಂಕರ ತನ್ನಿಂದ ಏನನ್ನೂ ಮುಚ್ಚಿಡುವುದಿಲ್ಲ ಎನ್ನುವ ಸಂಗತಿ. `ಈ ದಿನ ಅವನ ಮನಃಸ್ಥಿತಿಯನ್ನು ನೋಡಿದ್ರೆ ಅವನನ್ನು ಏನೋ ಸಮಸ್ಯೆ ಕಾಡ್ತಾ ಇರೋದಂತೂ ಸತ್ಯ. ಆದ್ರೆ, ಈಗವನು ಹೇಳಲು ತಯ್ಯಾರೂ ಇಲ್ಲ' ಸೂರಿ ಹೀಗೆಂದುಕೊಳ್ಳುತ್ತ ಅವನೊಂದಿಗೆ ಹೆಜ್ಜೆಹಾಕಿದ. ಮೂರಾವರ್ತಿ ಪ್ರದಕ್ಷಿಣೆ ಮುಗಿಯಿತು. ಮಹಾಮಂಗಳಾರತಿಯ ಸಮಯವೂ ಬಂದಿತು. ಈಗ ರಾಮಭಟ್ಟರ ದನಿಯಲ್ಲಿ 'ಸಂಗೀತ ಸೇವಾಂಬುಧಾರಯಾ....'ಎನ್ನುವ ಪೂಜಾಮಂತ್ರ ಕೇಳಿದಾಗ ಅಲ್ಲಿದ್ದವರು ನೋಡಿದ್ದು ಶಂಕರನ ಕಡೆಗೇ.

    ಶಂಕರ ಚಂದವಾಗಿ ಹಾಡುತ್ತಾನೆ. ಅವನೇನೂ ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ. ಚಿಕ್ಕಂದಿನಿಂದ ಸುಸಂಸ್ಕøತಮನೆಯಲ್ಲಿ ಹುಟ್ಟಿಬೆಳೆದವನು. ಎಲ್ಲರೂ  ದೇವರನಾಮಗಳನ್ನು, ಸ್ತೋತ್ರಗಳನ್ನು ಹೇಳುವ ಪರಿಪಾಠವಿದ್ದುದರಿಂದ  ಸಹಜವಾಗಿಯೇ ಅವನಿಗೆ ಕಂಠಪಾಠವಾಗಿದೆ. ಜೊತೆಗೆ ಶಾರೀರ ಸೊಗಸಾಗಿದೆ. ದೇವರ ಕುರಿತು ಭಯಭಕ್ತಿಯಿದೆ. ಅಪಾರ ನಂಬಿಕೆಯಿದೆ. ಸಾಧಾರಣವಾಗಿ ಪೂಜೆಯ ಸಮಯದಲ್ಲಿ ಇವನಿದ್ದರೆ ಯಾರಿಂದಲೂ ಹೇಳಿಸಿಕೊಳ್ಳದೆ ತಾನೇ ಮೈಮರೆತು ಹಾಡಿಬಿಡುತ್ತಾನೆ. ಸೇರಿದ ಮಂದಿಗೂ ಶಂಕರನ ಹಾಡು ಕೇಳುವುದು ಬಲು ಪ್ರೀತಿಯ ಸಂಗತಿ. ಅದಕ್ಕೇ ಅಲ್ಲ್ಲಿದ್ದವರು,  ಶಾಸ್ತ್ರಿಗಳು ಸಂಗೀತಸೇವೆ ಎಂದಾಗ  ಇವನ ಕಡೆಗೇ ನೋಡಿದರು. ಆದರೆ ಶಂಕರ ಈಗಲೂ ಅನ್ಯಮನಸ್ಕನಾಗಿದ್ದ. ಇದನ್ನು ಕಂಡ ಸೂರಿಗೆ ದಿಗಿಲಾಯಿತು. ಮೊಳಕೈಯಿಂದ ಮೆಲ್ಲಗೆ ತಿವಿದು,

    ಲೋ ಶಂಕರ, ಮತ್ತೇನೋ. ಎಲ್ರೂ ನಿನ್ನನ್ನೇ ನೋಡ್ತಿದಾರೆ. ಹಾಡು ಶುರುಮಾಡು. ಎಂದಾಗ ಬೆಚ್ಚಿದ ಶಂಕರ ಸುತ್ತಲೊಮ್ಮೆ ನೋಡಿದ. `ಛೇ ಹಾಳು ಮನಸ್ಸು. ತೊಳಲಾಟ ನಿಲ್ಲಿಸಲೆಂದು ಇಲ್ಲಿ ಬಂದರೆ ಇಲ್ಲೂ ಕಾಡುತ್ತಿದೆ' ಒಳಗೇ ತನ್ನ ಅನ್ಯಮನಸ್ಕತೆಗೆ ತಾನೇ ಬೇಸರ ಪಟ್ಟುಕೊಂಡ.

    ಪೆಚ್ಚುಪೆಚ್ಚಾಗಿ ನಕ್ಕ. ಮತ್ತೆ ಹೇಳಿಸಿಕೊಳ್ಳಲಿಲ್ಲ.

    "ಕರುಣಾಳು ಶಂಕರನೇ ಕಾಪಾಡು ಕೈಹಿಡಿದು

    ಕಡಲಾಳ ಎಳೆಯುತಿದೆ ಭವದ ಕುದಿಯೊಳಗೇ..."

    ಭಕ್ತಿರಸದಲ್ಲಿ ಅದ್ದಿತೆಗೆದಂತೆ ಬಿಚ್ಚಿಕೊಳ್ಳುತ್ತಿರುವ ಅವನ ಕಂಠಮಾಧುರ್ಯಕ್ಕೆ  ಅಲ್ಲಿದ್ದವರಲ್ಲೂ ಭಕ್ತಿ ಹೆಚ್ಚಾಗಿಯೇ ಬಿಟ್ಟಿತು. ಎಲ್ಲರೂ ಕಣ್ಮುಚ್ಚಿ, ಕೈಮುಗಿದರು. ಮುಗಿದ ಕೈಯ್ಯಲ್ಲೇ ತಾಳಹಾಕುವಂತೆ ಕರಗಳೆರಡನ್ನೂ ತಟ್ಟುವಾಗ ಇಡೀ ವಾತಾವರಣ ಮಂಗಳಕರವಾಗಿ ಕಂಡುಬಂದಿತು. ಆದರೆ, ಶಂಕರನ ಮನಸ್ಸು ಮಾತ್ರ ಭಕ್ತಿಯ ಜೊತೆಜೊತೆಯೇ ಚಡಪಡಿಸುತ್ತಿತ್ತ್ತು. ಹಾಡಿನ ಕೊನೆಯವರೆಗೂ ಮೈಮರೆತಂತೇ ಹಾಡಿದರೂ, ಮುಕ್ತಾಯದ ಚರಣದಲ್ಲಿ, 'ಭವದ ಕುದಿಯೊಳಗೇ....' ಎನ್ನುವಾಗ ಒಳಗಿನ ಕುದಿ ಹೆಚ್ಚಾಗಿ ಅಲ್ಲಿರಲಾರೆನೆಂಬಂತೆ ಎರಡುಹನಿ ಕಣ್ಣೀರಾಗಿ ಕಣ್ರೆಪ್ಪೆಯ ಅಂಚಿಗೇ ಬಂದು ತಗುಲಿಕೊಂಡಿತು.

    ಕಣ್ಣು ಒದ್ದೆಯಾದುದರ ಅರಿವು ಸುತ್ತಲಿನ ಮಂದಿಗೆ ತಿಳಿಯಬಾರದೆಂದು, ಹನಿ ಕೆಳಗುದುರದಂತೆ ಹೆಗಲಮೇಲಿದ್ದ ಶಲ್ಯವನ್ನು ಕಣ್ಣ ಹತ್ತಿರಕ್ಕೆ ತಂದು ಒತ್ತಿಕೊಂಡ. ಆದರೂ, ಅವನ ಕಂಠ ಬಿಗಿದಿದ್ದು ಒಂದಿಷ್ಟು ಜನಕ್ಕೆ ಗೊತ್ತಾಯಿತು.  ಅಲ್ಲಿ ಸಂಕಟದ ಎಳೆಯೊಂದಿತ್ತು.

    ಅನೇಕರಿಗೆ ಹೀಗೆನ್ನಿಸಿತು.... ಕಣ್ಣೀರನ್ನೇನೋ ಕಾಣಿಸದಂತೆ ಶಂಕರ ತಡೆಹಿಡಿದ. ಆದರೂ, ಕಂಠ ಸಡಿಲಿದ್ದು ಅವನಿಗೂ ಗೊತ್ತಾಯ್ತು. ತಕ್ಷಣವೇ ಎಚ್ಚೆತ್ತುಕೊಂಡ. ಹಿಡಿತಕ್ಕೆ ಸಿಗದ ಮನಸ್ಸನ್ನು ಸಂಭಾಳಿಸಿಕೊಂಡು ಸ್ಥಿಮಿತಕ್ಕೆ ತಂದುಕೊಂಡ. ಹಾಡು ಮುಗಿಯಿತು. ಇಂಥ ಯಾತನೆ ಎಂದೂ ಅನುಭವಕ್ಕೆ ಬಂದಿರಲಿಲ್ಲ ಎನ್ನಿಸಿಬಿಟ್ಟಿತು.

    `ಪರಮೇಶ್ವರ, ಇದಕ್ಕೊಂದು ಪರಿಹಾರ ಸೂಚಿಸು ತಂದೆ' ಎಂದು ಪ್ರಾರ್ಥಿಸುತ್ತಲೇ, ಮಹಾಮಂಗಳಾರತಿಗೆ ಮತ್ತಷ್ಟು ಭಕ್ತಿಯ ಕಳೆ ತುಂಬಲು ಮೇಲಿನ ಗಂಟೆಯನ್ನು ಬಾರಿಸತೊಡಗಿದ. ಮಂಗಳಾರತಿ ತಟ್ಟೆಯನ್ನು ಹಿಡಿದ ರಾಮಭಟ್ಟರು ಮಂತ್ರ ಹೇಳುತ್ತಲೇ ಎಲ್ಲರೆದುರು ಆರತಿ ಹಿಡಿದಾಗ, ಆ ಜ್ವಾಲೆಯನ್ನೇ ದಿಟ್ಟಿಸಿದ ಶಂಕರ. ಧಾರಾಳವಾಗಿ ಕರ್ಪೂರ, ಉದ್ದದಬತ್ತಿಗಳನ್ನು ಜೋಡಿಸಿದ್ದ ಕಾರಣ ಆರತಿ ಧಗಧಗನೆಂದು ಉರಿಯುತ್ತಿತ್ತು. ಹಾಳು ಮನಸ್ಸು, ಮತ್ತೆ, ತನ್ನೆದೆಯ ನೋವೂ ಹೀಗೇ ಧಗಧಗಿಸುತ್ತಿದೆ ಎಂದು ಮುದುಡಿತು.

    ಯಾಂತ್ರಿಕವಾಗಿ ತೀರ್ಥ ಪ್ರಸಾದ ತೆಗೆದುಕೊಂಡ ಶಂಕರ ಮತ್ತೊಮ್ಮೆ ಶಿವನಿಗೆ ಉದ್ದಂಡ ನಮಸ್ಕಾರ ಮಾಡಿದ. ಸೂರಿಗೆ ಮತ್ತೆ ಸಿಗುತ್ತೇನೆ ಎನ್ನುತ್ತ ದೇವಸ್ಥಾನದ ಹೆಬ್ಬಾಗಿಲು ದಾಟಿ ಹೊರಬಂದನು. ಕಾಲು ಮನೆಯ ದಿಕ್ಕಿಗೆ ಹೊರಳಿತು. ಆದರೆ, ತಕ್ಷಣವೇ ಕಟ್ಟಿಹಾಕಿದಂತೆ ನಿಂತುಬಿಟ್ಟ. ಹೆಜ್ಜೆ ಮುಂದೆ ಸರಿಯಲಿಲ್ಲ.

    `ಎಲ್ಲಾನೂ ನಿಮ್ ಮೂಗಿನ್ ನೇರಕ್ಕೇ ಯೋಚ್ಸಿದ್ರೆ ನಡ್ಯಲ್ಲ. ಲಾವಣ್ಯ ನಿರ್ಧಾರ ಮಾಡಿದ್ದಾಗಿದೆ. ಈಗ ನೀವ್ ಒಪ್ಪದೊಂದೇ ಬಾಕಿ....' ಹೆಂಡತಿ ಸೌಮ್ಯ ಎದೆಗೊದ್ದಂತೆ ಹೇಳಿದ್ದಳು ನಾಲ್ಕು ದಿನದ ಹಿಂದೆ.

    `ಅಪ್ಪಾ, ನಂಗಿಲ್ಲಿ ಓದಕ್ಕೆ ಇಷ್ಟ ಇಲ್ಲ. ಕಾಲೇಜು ಓದದೇ ಅಂತಾದ್ರೆ ಅದು ಬೆಂಗ್ಳೂರಲ್ಲೇ...' ಅಪ್ಪನ ಹೃದಯತೋಟದ ಚಂದದ ಮಲ್ಲಿಗೆಯಂತೆ ಇಷ್ಟುಕಾಲ ಹದವಾಗಿ, ನಯವಾಗಿ ಬೆಳೆದಿದ್ದ ಮಗಳು ಲಾವಣ್ಯ ಇಂದು ವ್ಯತಿರಿಕ್ತವಾಗಿ ಎದುರು ವಾದಿಸಿದ್ದಳು.

    ಶಾಲಾಶಿಕ್ಷಕನಾಗಿ ಹಳ್ಳಿಯ ಮಕ್ಕಳನ್ನು ವಿವೇಕಿಗಳಾಗುವಂತೆ, ಒಳ್ಳೆಯ ನೈತಿಕ ಶಿಕ್ಷಣದಲ್ಲೂ ಅರಳುವಂತೆ, ವಿದ್ಯಾವಂತರಾಗುವಂತೆ ತಿಳಿಹೇಳಿ, ಪಾಠಮಾಡಿ ಬೆಳೆಸಿ ಒಳ್ಳೆಯ ಹೆಸರು ಗಳಿಸಿದ್ದ ಶಂಕರನೀಗ ಮನೆಯಲ್ಲೇ ಸೋತು ಕೈ ಚೆಲ್ಲಿಬಿಡುವಂಥ ದೈನ್ಯ ಪರಿಸ್ಥಿತಿ.

    `ಹ್ಞೂಂ ಎನ್ನಬೇಕಾ...ಉಹ್ಞೂಂ ಎನ್ನಬೇಕಾ... '

    ಎಲ್ಲರ ಸಮಸ್ಯೆಗಳಿಗೂ ಏನಾದರೊಂದು ಪರಿಹಾರ ಹೇಳುತ್ತಿದ್ದ ತನ್ನ ಸಮಸ್ಯೆಗೆ ಯಾರಲ್ಲಿ ಪರಿಹಾರ ಕೇಳಲಿ...?ಮಂಕುಕವಿದ ಮನದಲ್ಲಿ ಅಲ್ಲಿಯೇ ಜಗುಲಿಯ ಮೇಲೆ ಒಂದೈದು ನಿಮಿಷ ಕುಳಿತುಬಿಟ್ಟ. ನಿಧಾನಿಸಿದ ಮನಸ್ಸಿಗೀಗ ಎಲ್ಲಿ ಹೋಗಬೇಕೆನ್ನುವುದು ನಿಶ್ಚಿತವಾಯ್ತು. ಹೆಜ್ಜೆಗಳು ನೇರಸಾಗಿದವು ಅವನ ಪ್ರೀತಿಯ ತುಂಗೆಯ ಹಾದಿಯ ಕಡೆಗೇ. ಅಗ್ರಹಾರದ ಹಾದಿಯಿಂದ, ನರಸಿಂಹನಾಯ್ಕರ ಮನೆಯನ್ನು ದಾಟಿ, ನೂರುಹೆಜ್ಜೆಯ ಅಂತರದಲ್ಲಿ ಎಡಕ್ಕೆ ಹೊರಳಿದಾಗ ಹನುಮನ ಪುಟ್ಟಗುಡಿ ಸಿಕ್ಕಿತು......

    ಈ ಹನುಮ ಅಂತಿಂಥವನಲ್ಲ. ಊರು ಕಾಯುವ ದೈವ. ಈ ಊರು ತುಂಬೇಹಳ್ಳಿ. ಇದರಾಚೆ ಊರು ಬೆಳೆಯುವುದಿಲ್ಲವೆಂದೇ, ಈ ಊರು ನಿನ್ನ ರಕ್ಷೆಯಲ್ಲಿರಲಿ ಎಂದು ತೀರಾ ಪುರಾತನರು ಇಲ್ಲಿ ಪ್ರತಿಷ್ಠಾಪಿಸಿದ ರಾಮಭಕ್ತ. ಹೌದು, ಈ ಊರಿನಲ್ಲಿ ಯಾರಿಗೆ ಏನೇ ಸಂಕಟ ಒದಗಲಿ ಮೊದಲು, 'ನಮ್ಮಪ್ಪ ಹನುಮ, ನಿಂಗೆ ಜೋಡುಕಾಯಿ ಒಡೆಸ್ತೀನಿ ಕಣೋ. ಇದರಿಂದ ಪಾರುಮಾಡೋ ತಂದೆ' ಎಂದು ಕೈಮುಗಿದು ನಿಂತು ಕೇಳಿಕೊಳ್ಳುತ್ತಾರೆ. ಎಲ್ಲರ ದೃಷ್ಟಿಯಲ್ಲಿ, ಮೃತ್ಯುವನ್ನು ಗೆದ್ದು ಚಿರಂಜೀವಿಯಾಗಿರುವ ಹನುಮನೇ ಇಲ್ಲಿ ನಿಂತಿದ್ದಾನೆಂದೇ ಗಟ್ಟಿನಂಬಿಕೆ. ಅವನು ಇವರಿಗೆ ದೈವ, ಮಿತ್ರ, ಬಂಧು ಮತ್ತೆ ಇದಕ್ಕಿಂತ ಹೆಚ್ಚೂ ಹೌದು. ಕೋರಿಕೆ ಈಡೇರಿದರೆ ಅದು ಹನುಮನ ದಯವೇ. ಈಡೇರದಿದ್ದರೆ ಅದು ಪೂರ್ವಾರ್ಜಿತಕರ್ಮ ಎಂದು ಭಾವಿಸುವ ಸಜ್ಜನರೇ ಇರುವ ಈ ಊರಿನಲ್ಲಿ ಹನುಮ ಒಂದುರೀತಿಯಲ್ಲಿ ನಿರಾಳನಾಗಿದ್ದಾನೆ....!

    ಬದುಕಿಗೆ ನಂಬಿಕೆಯೇ ಪರಮಗುರು. ಮುನ್ನಡೆಸುವ ಶಕ್ತಿ. ಆ ಶಕ್ತಿ, ನಂಬಿಕೆಯ ರೂಪದಲ್ಲಿ ನಿಂತಿರುವನೇ ಈ ಹನುಮ.ಅವನು ಒಂದುರೀತಿ ಈ ಊರಿನ ಉಸಿರು....!ಹೀಗೆಂದ ಮಾತ್ರಕ್ಕೆ ಜನ ಇಲ್ಲಿಗೆ ದಿನವೂ ಬರುವುದಿಲ್ಲ. ಮನೆಯಲ್ಲಿ ಅವನನ್ನು ನೆನೆಸಿಕೊಳ್ಳುವವರೇ ಹೆಚ್ಚು. ಸಂಕಟದಲ್ಲಿ ಮಾತ್ರ ತಪ್ಪದೆ ಬಂದು ಕೋರಿಕೊಳ್ಳುವುದುಂಟು. ಹೆಂಗಸರಿಗೆ ಮನೆಕೆಲಸದಲ್ಲಿಯೇ ಹೊತ್ತು ಕಳೆದುಬಿಡುತ್ತದೆ. ಸಿಟಿಯಂತೆ ಸುಮ್ಮನೆ ಸುತ್ತಾಡಲು ಹೊರಹೋಗುವುದೂ ಇಲ್ಲ. ಹೊಳೆಗೆ ಬಂದರೆ ಮಾತ್ರ ತುಸುಹೊತ್ತು ನಿಂತು ಕೈಮುಗಿದು, ಕ್ಷಣಕೂತು ಹೋಗುತ್ತಾರೆ. ಎಲ್ಲರ ಮನೆಗಳಲ್ಲೂ ಭಾವಿ ಇರುವುದರಿಂದ ದಿನನಿತ್ಯಕ್ಕೆ ಹೊಳೆನೀರಿನ ಅವಶ್ಯಕತೆಯಿಲ್ಲ. ಹಾಗಾಗಿ ಹೊಳೆಗೆ ಹೋಗುವ ಹೆಂಗಳೆಯರು ಕಮ್ಮಿ. ಹಬ್ಬಹರಿದಿನಗಳಲ್ಲಿ, ಎಳ್ಳಮಾಸೆಯಂಥ ಜಾತ್ರೆಗಳಲ್ಲಿ ತಾಯಿ ಗಂಗಾಮಾತೆಯ ದರ್ಶನಕ್ಕೆ, ಪೂಜೆಗೆ ಮಾತ್ರ ತಪ್ಪದೆ ಹೋಗುತ್ತಾರೆ. ಆ ದಡದಾಚೆ ಇರುವ ಮಾರಿಗುಡಿಗೆ, ವರ್ಷಕ್ಕೊಮ್ಮೆ  ಬರುವ ಮಾರಿಹಬ್ಬದಲ್ಲಿ ಮನೆಮಗಳು ಮಾರಮ್ಮಂಗೆ ಪೂಜೆಮಾಡಿ ಉಡಿತುಂಬಿ ಕಳುಹಿಸಲು ತೆಪ್ಪದಲ್ಲಿ ಕೂತು ಹೋಗುತ್ತಾರೆ. ಇಷ್ಟು ಬಿಟ್ಟರೆ ಬಹುಪಾಲು ಮಂದಿ ಹೊಳೆಯೆಡೆಗೆ ಮುಖಮಾಡುವುದೇ ಇಲ್ಲ.

    ಜೊತೆಗೆ ಇವರ್ಯಾರೂ ಪ್ರಕೃತಿಯನ್ನು ಆಸ್ವಾದಿಸುವ ಮನಃಸ್ಥಿತಿಯವರೂ ಅಲ್ಲ. ಕಾರಣ, ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಅಲ್ಲಿಯೇ ಸೇರಿದವರೂ ಇರುವುದರಿಂದ ಅವರಿಗೆ ಹೊಳೆ, ಕಾಡು, ಹಸಿರು ಇವುಗಳು ಅಪರೂಪವೂ ಅಲ್ಲ ವಿಶೇಷವೂ ಅಲ್ಲವೆಂದೇ ಭಾವಿಸುವ ಸರಳಬದುಕು. ಅದೂ ನಮ್ಮೊಂದಿಗೆ ನಮ್ಮ ತರಹವೇ ಎಂಬ ಗಾಢನಂಬಿಕೆ. ಪ್ರಕೃತಿಯನ್ನು ನಾಶಮಾಡುವುದೂ ಇಲ್ಲ, ಹಾಹಾಕಾರದಲ್ಲಿ ಸವಿಯುವುದೂ ಇಲ್ಲ ಪೇಟೆಯವರಂತೆ.  ಬೇರೆಡೆಯ ಹೆಣ್ಣುಮಕ್ಕಳು ಮದುವೆಯಾಗಿ ಇಲ್ಲಿಗೆ ಬಂದವರಿದ್ದರೆ ಮಾತ್ರ, ಹೊಸದರಲ್ಲಿ ಕಾರಣ ಹುಡುಕಿ ಹೊಳೆಕಡೆಗೆ ಓಡುವವರೇ ಸರಿ. ಮತ್ತೆ ಎಲ್ಲವೂ ಹಳತು.

    ಗಂಡಸರಲ್ಲಿ ಮಾತ್ರ ಕೆಲಮಂದಿ ಆಗಾಗ ಬರುವುದುಂಟು. ಸ್ನಾನಕ್ಕೋ, ತರ್ಪಣಕ್ಕೋ, ಆ ದಡದಾಚೆಯ ಹಳ್ಳಿಗೆ ಹೋಗುವುದಕ್ಕೋ ಕಾರಣಗಳು ಹಲವಾರು. ಹೀಗೆ ಬಂದ ಮಂದಿ ಮಾತ್ರ ಹನುಮನಗುಡಿಯ ಬಳಿ ನಿಮಿಷ ನಿಂತು ಕೈಮುಗಿದು ಹೋಗುತ್ತಾರೆ.....

    ಆದರೆ ಶಂಕರ ಮಾತ್ರ ತುಂಗೆಯ ಉಪಾಸಕ. ದಿನವೂ ತುಂಗೆಯ ದರ್ಶನ ಮಾಡಲೇಬೇಕು ಎನ್ನುವ ಹಪಹಪಿ..ತುಂಗೆಯ ಬಳಿ ಹೋಗಲು ಹನುಮನ ಮುಂದೆಯೇ ಹೋಗಬೇಕು.

    ಹಾಗಾಗಿ ಇವನಿಗೆ ಹನುಮ ನಿತ್ಯದ ಪ್ರಾಣದೇವರು...!......ಇಂತಹ ರಕ್ಷಕ ಹನುಮನಗುಡಿಯ ಬಳಿ ಸಾರಿದ ಶಂಕರ ಇಲ್ಲಿ ನಿಂತ. ಗುಡಿ ತೀರಾ ಪುಟ್ಟದು. ಪ್ರವೇಶದಲ್ಲಿ ಪುಟ್ಟದೊಂದು ಅಂಕಣ. ಇಲ್ಲಿ ಏಳೆಂಟುಮಂದಿ ನಿಂತೋ, ಕೂತೋ ಮಾಡಬಹುದು. ಇಲ್ಲಿಂದ ಮುಂದಕ್ಕೆ ಗರ್ಭಗುಡಿ.  ಹನುಮ ನಿಲ್ಲುವಷ್ಟು,  ಮುಂದೆ ಅರ್ಚಕರು ಕೂತು ಪೂಜೆಮಾಡುವಷ್ಟು ಮಾತ್ರದ ಗರ್ಭಗುಡಿ. ಈ ಎರಡಂಕಣಗಳ ಮಧ್ಯೆ ಕಬ್ಬಿಣದ ಸರಳಿನ ಬಾಗಿಲು.  ಮಂಗಳಾರತಿ ಸಮಯಕ್ಕೆ ಬರುವವರು ಕಡಿಮೆ. ಬಹುಮಂದಿಯೂ ಬರುವುದಿಲ್ಲ. ಅಹವಾಲು ಹೇಳಲು ಬರುವ ಮಂದಿ ಆಗೊಮ್ಮೆ ಈಗೊಮ್ಮೆ ಬರುತ್ತಾರೆ. ಗುಡಿಯ ಅರ್ಚಕರು ಎಂಟೂವರೆಗೆ ಪೂಜೆಮುಗಿಸಿ ಹೊಟ್ಟೆಪಾಡಿನ ಕೆಲಸಕ್ಕೆ ಹೊರಹೋಗುವುದರಿಂದ ಮಂಗಳಾರತಿಯಾದ ಮೇಲೆ ಗರ್ಭಗುಡಿಯ ಬಾಗಿಲೆಳೆದು ಬೀಗಹಾಕಿ ಹೋಗುತ್ತಾರೆ. ಕುಂಕುಮಪ್ರಸಾದ, ಹೂವ್ವಿನಪ್ರಸಾದವನ್ನು ಸರಳಿನಹಿಂದೆ ಇಟ್ಟಿರುತ್ತಾರೆ. ಮುಂದಿನ ಪುಟ್ಟ ಅಂಕಣದ ಮುಂಬಾಗಿಲು ಹಾರ್ಹೊಡೆದೇ ಇರುತ್ತದೆ. ರಾತ್ರಿ ಗುಡಿ ಮುಚ್ಚುವವರೆಗೂ ಯಾರು ಬೇಕಾದರೂ ಬಂದು, ಈ ಅಂಕಣದಲ್ಲೇ ನಮಸ್ಕಾರಮಾಡಿ, ಬೇಕಾದರೆ ಅರೆಘಳಿಗೆ ಕೂತು, ಸರಳಿನೊಳಕ್ಕೆ ಕೈತೂರಿಸಿ ಪ್ರಸಾದ ತೆಗೆದುಕೊಂಡು ಹೋಗಬಹುದು.

    ಇತ್ತಕಡೆ ಬಂದವರು ಮಾತ್ರ ಒಳಗೆ ಬಂದು, ನಮಸ್ಕರಿಸಿ ಚೂರು ಸಮಯ ಕೂತು ಹೋಗುತ್ತಾರೆ, ಸಮಯವಿಲ್ಲವೆಂದರೆ, ನಿಂತು ಕೈಮುಗಿದಾದರೂ  ಮುಂದೆ ಹೋಗುತ್ತಾರೆ.

    ಶಂಕರ ಗುಡಿಯೊಳಗೆ ಕಾಲಿರಿಸಿದ. ಯಾರೂ ಇರಲಿಲ್ಲ.

    ಅರ್ಚಕರು ಪೂಜೆಗಾಗಿ ಸಿದ್ಧತೆ ಮಾಡಿಕೊಂಡು ಹೊಳೆಯಿಂದ ಮಡಿನೀರು ತರಲು ಹೋಗಿದ್ದಾರೆ. ಶಂಕರ ಮೇಲಿಂದ ಇಳಿಬಿದ್ದ ಗಂಟೆಯನ್ನು  ಇಪ್ಪತ್ತೊಂದು ಬಾರಿ ಮೆಲ್ಲಗೆ ಹೊಡೆದ. ಅಷ್ಟೇ ಸರ್ತಿ ಪ್ರದಕ್ಷಿಣೆ ತಿರುಗಿ ಉದ್ದಂಡ ನಮಸ್ಕಾರ ಹಾಕಿದ. ಆ ಭಂಗಿಯಲ್ಲಿಯೇ ತನ್ನ ಮನದಳಲನ್ನು ನಿವೇದಿಸಿಕೊಳ್ಳುತ್ತ 'ಇದಕ್ಕೆ ಪರಿಹಾರ ಏನು ತಂದೆ' ಎಂದು ಕಣ್ತುಂಬಿ ಕೇಳಿದ. ಗದೆ ಹಿಡಿದು, ಹಾರುವ ಭಂಗಿಯಲ್ಲಿ, ಬಲಕ್ಕೆ ಮೊಗಮಾಡಿದ ಮೂರ್ತಿ ಹನುಮ ಅದೇನು ಅಭಯವಿತ್ತನೋ ಶಂಕರನಿಗೆ ತಿಳಿಯದು. ಅಥವಾ ಹಾಗೆಲ್ಲ ಹನುಮ ಪ್ರತ್ಯಕ್ಷನಾಗಿ ಅಭಯ ನೀಡುವುದಿಲ್ಲ ಎನ್ನುವ ವಿವೇಕವಿದ್ದುದರಿಂದಲೋ ಏನೋ ಮೇಲೆದ್ದ.

    ಗರ್ಭಗುಡಿಯ ಹೊಸ್ತಿಲ ಬಳಿಯಿದ್ದ  ಪ್ರಸಾದದ ಹೂವನ್ನು ಕಣ್ಗೊತ್ತಿಕೊಂಡು ಕಿವಿಗೆ ಸಿಗಿಸಿಕೊಳ್ಳುತ್ತ, ಹೊರಬಂದನು.

    ಈ ಗುಡಿಯಿಂದ ಹತ್ತುಮಾರು ಮುಂದೆಹೋದರೆ ದೊಡ್ಡದೊಂದು ಆಲದಮರವಿದೆ. ಬಹುಷಃ ಇದೂ ಹನುಮನಷ್ಟೇ ಪುರಾತನವಿರಬಹುದು. ಅಗಾಧವಾಗಿ ಬೇರುಬಿಟ್ಟು, ದಪ್ಪದಪ್ಪದ ಬಿಳಿಲುಗಳನ್ನು ಚಾಚಿಕೊಂಡು ಭದ್ರವಾಗಿ ನಿಂತುಬಿಟ್ಟಿದೆ.  ಬಿಸಿಲಿದ್ದಾಗ ಹೊಳೆದಾಟುವ ಮಂದಿ ಇಲ್ಲಿ ಕೂತು ವಿಶ್ರಮಿಸಿ ಹೋಗುತ್ತಾರೆ. ಇಲ್ಲಿಂದ ಹತ್ತುಅಡಿ  ಮುಂದೆ ಈ ಊರಿನ ಜೀವನಾಡಿಯಾಗಿ, ಸುತ್ತಮುತ್ತಲ ಹತ್ತೂರುಗಳ ಹೆತ್ತಮ್ಮನಂತೆ ಹರಿಯುತ್ತಾಳೆ ತುಂಗೆ. ಸುತ್ತಲ ಪರಿಸರದಲ್ಲಿ ಹಸಿರೇ ತುಂಬಿದೆ. ಗಿಡಮರಗಳು, ಬಳ್ಳಿಹೊದರುಗಳು, ಅದರ ತುಂಬಾ ಹಕ್ಕಿಪಕ್ಷಿಗಳು ಒಟ್ಟಿನಲ್ಲಿ ಪ್ರಕೃತಿ ಇಲ್ಲಿ ಸಮೃದ್ಧಿಯಾಗಿದೆ.

    ಈ ಆಲದಮರದಿಂದ ಮುಂದಕ್ಕೆ ಹೊಳೆಯಮಡಿಲವರೆಗೂ ಇಳಿಯಲು ಇಪ್ಪತ್ತೊಂದು ಮೆಟ್ಟಿಲುಗಳಿವೆ. ಶಂಕರನಿಗೆ ಇಪ್ಪತ್ತೊಂದು ಸಂಖ್ಯೆ ಬಹಳ ಪ್ರಿಯವಾದದ್ದು. ಪುಟ್ಟ ಹುಡುಗನಾಗಿದ್ದಾಗ, ತಂದೆ ಹೇಳಿಕೊಟ್ಟ `ಬೆನಕ ಬೆನಕ ಏಕದಂತ' ದಲ್ಲಿ ಬರುವ  `ಸಿದ್ಧಿವಿನಾಯಕ ಸ್ವಾಮಿಗೆ ಇಪ್ಪತ್ತೊಂದು ನಮಸ್ಕಾರಗಳು'  ಎನ್ನುವ ಸಾಲಿನ ಅರ್ಥ ಕೇಳಿದ್ದ.

    `ಇಪ್ಪತ್ತೊಂದು ಯಾಕಪ್ಪ, ಎರಡು ಸಾಲದಾ ?'ಎಂದು. ಆಗ ತಂದೆ ಹೇಳಿದ್ದು,

    ಹಾಗಲ್ಲ ಶಂಕ್ರ. ಇದಕ್ಕೆ ವಿಶೇಷ ಅರ್ಥ ಇದ್ಯಪ್ಪಾ. ಏನು ಗೊತ್ತಾ, ಈ ನಿಂಗೆ ಈ ಶ್ಲೋಕ ಬರಲ್ಲ. ಆದ್ರೆ ನಾ ಹೇಳ್ಕೊಡ್ತೀನಿ. ಒಂದಿನಕ್ಕೆ ಬರುತ್ತಾ, ಇಲ್ಲ. ಎರಡು ದಿನಕ್ಕೆ ಊಹ್ಞೂಂ....ಹಾಗಾದ್ರೆ ಏನ್ ಮಾಡದು...? ದಿನಕ್ಕೊಮ್ಮೆ,  ಇಪ್ಪತ್ತೊಂದು ದಿನ ಬಿಡದೇ ಹೇಳಿದ್ರೆ ಇಪ್ಪತ್ತೆರಡನೇ ದಿನಕ್ಕೆ ಕಂಠಪಾಠ ಆಗಿರುತ್ತೆ. ಹಾಗೇ ಇದೊಂದೇ ಅಲ್ಲ, ಯಾವ್ದನ್ನೇ ಆಗ್ಲಿ ಇಪ್ಪತ್ತೊಂದು ದಿನ ಬಿಡದೇ ಪಾಲಿಸಿದ್ರೆ ಅದು ಅಭ್ಯಾಸವಾಗತ್ತೆ. ಒಳ್ಳೆದೇ ಇರಬೌದು, ಕೆಟ್ಟದ್ದೇ ಇರಬೌದು. ಅದಕ್ಕೇ ಕೆಟ್ಟದ್ದನ್ನ ಅಲ್ಲಲ್ಲೇ ಬಿಟ್ಟು ಮರೀತಾ ಇರ್ಬೇಕು, ಒಳ್ಳೇದನ್ನ ತಲೇಲಿಟ್ಕಂಡು ಹೀಗೇ ನಿತ್ಯ ಅಭ್ಯಾಸಮಾಡ್ತಾ ಬಂದ್ರೆ ನೀನು ಒಳ್ಳೇ ವ್ಯಕ್ತಿನೇ ಆಗ್ತಿ...

    ಶಂಕರನ ಪುಟ್ಟತಲೆಯಲ್ಲಿ ಇದು ನೆಟ್ಟಿತು. ಮಗ್ಗಿಯನ್ನು ಇಪ್ಪತ್ತೊಂದು ಬಾರಿ ಪುನರಾವರ್ತಿಸಿ ನೋಡಿದ. ಅಪ್ಪ ಹೇಳಿದ್ದು ನಿಜವಾಯ್ತು. ಅಮ್ಮ ಹೇಳುತ್ತಿದ್ದ ಪುಟ್ಟಪುಟ್ಟ ದೇವರಭಜನೆ, ಅಪ್ಪ ಗುಣುಗುಣಿಸುವ ಶ್ಲೋಕಗಳನ್ನು ಇಪ್ಪತ್ತೊಂದು ದಿನ ಬಿಡದೇ ದೇವರ ಮುಂದೆ ಕೂತು ಹಾಡಿದ. ನಿಜವೆನ್ನಿಸಿತು. ಮುಂದೆ ಇಪ್ಪತ್ತೊಂದು ಅವನ ಮೆಚ್ಚಿನ ಸಂಖ್ಯೆಯಾಯಿತು. ಬೆಳೆಯುತ್ತ ಹೋದಂತೆ ಇದೊಂಥರಾ ಅಭ್ಯಾಸವಾಗುತ್ತ ಹೋಯಿತು. ದೇವರಿಗೆ ಇಪ್ಪತ್ತೊಂದು ದಾಸವಾಳ, ಗುಲಾಬಿ, ಸಂಪಿಗೆ, ತುಂಬೆ ಹೂಗಳ ಕೊಂಡೊಯ್ದು ಅರ್ಪಿಸುವುದು, ಇಪ್ಪತ್ತೊಂದು ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುವುದು, ಇಪ್ಪತ್ತೊಂದು ಬಾರಿ ನಾಮಸ್ಮರಣೆ ಮಾಡೋದು ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಇಪ್ಪತ್ತೊಂದನ್ನು ಬಳಸುತ್ತಾ ಹೋದ. ಇದರಿಂದ ಒಳ್ಳೆಯದಾಗಿದೆಯೆಂದೇ ಅವನ ನಂಬಿಕೊಂಡ.

    ಇಲ್ಲಿ ತನ್ನ ಆರಾಧ್ಯದೈವ ತುಂಗೆಯ ಬಳಿ ಹೋಗಲು ಇಪ್ಪತ್ತೊಂದು ಮೆಟ್ಟಿಲಿರುವುದು ಕಾಕತಾಳೀಯವಾದರೂ, ಈ ಕಾರಣಕ್ಕೇ ತನಗೆ ತುಂಗೆ ಅಷ್ಟು ಪ್ರಿಯಳಾದಳೆಂದೇ ಭಾವಿಸಿದ.

    ಇನ್ನು ಈ ಹಳ್ಳಿ ತನ್ನ ಹೆಸರಿಗೆ ತಕ್ಕಂತೆ ತನ್ನೊಡಲ ತುಂಬಾ ತುಂಬೇಗಿಡಗಳನ್ನು ತುಂಬಿಕೊಂಡಿದೆ. ಬಿಳಿ, ಕೆಂಪು, ನಸುಹಳದಿ, ನಸುಗುಲಾಬಿಯ ತೀರಾ ಪುಟ್ಟದು, ಒಂದಿಷ್ಟು ದೊಡ್ಡ ಆಕಾರದ ಹೂಗಳಿಂದ ಬೀಗುವ ಗಿಡಗಳನ್ನು ಕಂಡರೆ ಶಂಕರನಿಗೆ ಅದೇನೋ ಖುಷಿ. ಒಮ್ಮೊಮ್ಮೆ ಆ ಗಿಡಗಳ ಬುಡದಲ್ಲಿ ಕೂತು ಆ 'ಶಿವಪ್ರಿಯೆಯ' ಜೊತೆ ಮೌನ ಸಂಭಾಷಣೆ ನಡೆಸುತ್ತಿದ್ದ. ಅಲ್ಲಿಯೇ 'ಓಂ ನಮಃಶ್ಶಿವಾಯ' ಎಂದು ಹೇಳುತ್ತ ಅವುಗಳನ್ನು ಪ್ರೀತಿಯಿಂದ ನೇವರಿಸುತ್ತಿದ್ದ........

    ಆಲದಮರ ಸಿಕ್ಕಿತು. ಅಲ್ಲೇ ಕೆಳಗಿದ್ದ ಚಿಕ್ಕದೊಂದು ಕಲ್ಲಿನ ಮೇಲೆ ಕೂತ ಶಂಕರ. ಮನುಷ್ಯನ ಬಾಳಿಗೆ 'ಮರವೇ' ಅಂದರೆ 'ಹಸಿರೇ ಉಸಿರು' ಎಂದು ಹೇಳುವ ಆದರ್ಶ ಶಿಕ್ಷಕ ಶಂಕರ. ಇವನಿಗೆ ಪ್ರಕೃತಿಯಲ್ಲಿರುವ ಎಲ್ಲ ಮರಗಳೂ ಪೂಜನೀಯವೇ. ಈ ಹಳ್ಳಿಯಲ್ಲಿ ಅರಳೀಮರಕ್ಕೆ ಸುತ್ತುಹಾಕಿ ಬರುವ ಹೆಂಗಳೆಯರು, ಗಂಡಸರು ಬಹುಮಂದಿ. ಆದರೆ ಆಲದಮರಕ್ಕೆ ಅಷ್ಟು ಭಾಗ್ಯವಿಲ್ಲ. ಬಹುಷಃ ಹೊಳೆಗೆ ಬರುವ ಹೆಂಗಳೆಯರ ಸಂಖ್ಯೆ ಕಮ್ಮಿಯಿದ್ದುದರಿಂದ ಇರಬಹುದು.ಆದರೆ, ಶಂಕರ ಹಾಗಲ್ಲ. ಆಲದಮರಕ್ಕೂ ಇಪ್ಪತ್ತೊಂದು ಸುತ್ತು ಬಂದು ಕೈಮುಗಿಯುತ್ತಾನೆ.

    ಅಯ್ಯೋ ಶಂಕ್ರ, ಆಲಕ್ಕೂ ಇಪ್ಪತ್ತೊಂದು ಸುತ್ತು ಬರ್ತೀಯಲ್ಲ, ಈಪಾಟಿ ಹರಡ್ಕಂಡಿದೆ. ಆಲ ಶ್ರೇಷ್ಠ ಅಂತೇನೋ ಗೊತ್ತು, ಆದ್ರೆ, ಇಷ್ಟೊಂದು ಭಯಭಕ್ತಿ ಯಾಕೆ...? ಇಷ್ಟು ಸುತ್ತು ಹಾಕದು ಅಂದ್ರೆ ಸುಮ್ನೆ ಆಯ್ತಾ...? ಯಾರಾದರೂ ಹೀಗೆ ಛೇಡಿಸುವುದುಂಟು. ಆಗ,

    ಯಾಕೆ ಹಾಕ್ಬಾರ್ದು. ಆಲ ಅರಳೀಮರದ ಅಕ್ಕನೋ, ತಂಗಿನೋ ಅನ್ನೋದು ನಿಜ. ನೀವ್ಯಾಕೆ ಅರಳೀಮರಕ್ಕೆ ಮಾತ್ರ ಸುತ್ತು ಹಾಕದು, ಪೂಜೆಮಾಡದು...?  ಅದು ಶ್ರೇಷ್ಠ ಅನ್ನೋಕಿಂತ ಅದ್ರಲ್ಲಿ ಬ್ರಹ್ಮರಾಕ್ಷಸ ಇರ್ತಾನಲ್ಲ, ಅವ್ನು ರಾತ್ರಿ ಬಂದು ಎಲ್ಲಿ ಕಾಡ್ತಾನೋ ಎನ್ನುವ ಹೆದ್ರಿಕೆ, ಅಲ್ವಾ, ನೀವೊಂಥರಾ ಪುಕ್ಕಲುಮಂದಿ. ಎಂದು ನಗೆಚಾಟಿಕೆ ಮಾಡಿಬಿಡುತ್ತಿದ್ದ.

    ಏಯ್ ನೀ ಬಿಡೋ ಮಾರಾಯ. ಅರಳೀಮರ್ದಲ್ಲಿ ವಿಷ್ಣು , ಶಿವ ಇರ್ತಾರೆ. ಅದಕ್ಕೆ ಅದು ಶ್ರೇಷ್ಠ.

    ಆಯ್ತು. ಪ್ರಳಯ ಆದ್ಮೇಲೆ ಕೃಷ್ಣ ಒಬ್ನೇ ಉಳಿದ. ಅವ್ನು ಇದ್ದಿದ್ದು ಎಲ್ಲಿ...? ಆಲದೆಲೆ ಮೇಲಲ್ವಾ....? ಸೃಷ್ಟಿಯನ್ನು ತೂಗಿಸಿಕೊಂಡ್ಹೋಗೋ ಕೃಷ್ಣನನ್ನು ತಾಯಿಥರ ತನ್ನ ಮಡಿಲಲ್ಲಿಟ್ಟು ರಕ್ಷಿಸಿದ್ದು ಆಲ. ಅಲ್ಲದೆ ಕೃಷ್ಣನೇ ಹೇಳಿದ್ದಾನೆ, `ಆಲದಮರ ಊಧ್ರ್ವಕ್ಕೆ ಎತ್ತರಿಸುತ್ತ ಹೋದರೂ ಬಿಳಿಲುಗಳನ್ನು ಕೆಳಚಾಚಿ ಮತ್ತೆ ನೆಲಕ್ಕೇ ಬೇರು ಹರಿಸಿ ಕೆಳಮುಖನಾಗಿಯೂ ಬೆಳೆಯುವುದು. ಇದಕ್ಕೆ ಆದಿ ಅಂತ್ಯವಿಲ್ಲ. ಇದರರ್ಥ ನಾವು ಬೆಳೆಯುತ್ತ ಹೋದಂತೆ ನಮ್ಮನ್ನು ನಾವು ಅರಿತುಕೊಳ್ಳುತ್ತ, ಜ್ಞಾನಿಗಳಾದಾಗ ನಾವು ಮತ್ತೆ ಕೆಳಬಾಗಿ ವಿನೀತರಾಗುತ್ತೇವೆ, ಆಗಬೇಕು' ಎಂದು. ಅದಕ್ಕೇ ಇದನ್ನು 'ಬಹುಪಾದ' ಅಂತಲೂ ಕರೀತಾರೆ. ನಾವು ಮಣ್ಣಲ್ಲಿ ಹೆಜ್ಜೆಗಳ ಊರಿದಷ್ಟೂ ಮಣ್ಣಿನಸಾರವನ್ನು ಒಳಗೂಡಿಸಿಕೊಳ್ಳುತ್ತೇವೆ. ಬಿಳಿಲುಗಳಂಥ ಜ್ಞಾನಚಕ್ಷುಗಳನ್ನು ಎಲ್ಲ ಕಡೆಗೂ ಇಳಿಸುತ್ತ,  ಅಕ್ಕಪಕ್ಕದ ಜ್ಞಾನವನ್ನು  ಒಳಗೆಳೆದುಕೊಳ್ಳುತ್ತೇವೆ. ಜ್ಷಾನ ಹೆಚ್ಚಾದಷ್ಟೂ ಅಹಂಭಾವ ತಗ್ಗಿ ವಿನೀತರಾಗುತ್ತೇವೆ, ಆಗಬೇಕು. ಹಾಗಾಗಿ 'ಆಲ' ಜ್ಞಾನದ, ವಿನಯದ ಸಂಕೇತ. ಬೇರಿನಲ್ಲಿ ಬ್ರಹ್ಮ, ಕಾಂಡಭಾಗದಲ್ಲಿ ವಿಷ್ಣು, ಚಾಚುವ ರೆಂಬೆಕೊಂಬೆಗಳಲ್ಲಿ ಶಿವ, ಹೀಗೆ ತ್ರಿಮೂರ್ತಿಗಳೂ ಇದ್ದು ಜೊತೆಗೆ ಇದು ಸರಸ್ವತಿಯ ಆವಾಸವೂ ಹೌದು ಎನ್ನುವುದು ನಮ್ಮ ಪುಣ್ಯಗ್ರಂಥಗಳಲ್ಲಿ ಕಂಡುಬರೋ ವಿಚಾರ. ಜೊತೆಗೆ ಇವೆರಡೂ ಒಂದೇ ಜಾತಿಯ ಮರಗಳು. ಹಾಗಾಗಿ ಆಲವೂ ಶ್ರೇಷ್ಠ ಕಣ್ರಪ್ಪಾ...?

    ಇವನ ಮಾತಿನ ವೈಖರಿಗೆ ಇಲ್ಲ ಅಂತ ಹೇಳೋದು ಯಾರಿಗೂ ಆಗ್ತಿರಲಿಲ್ಲ. ಆದರೂ ಅದೇನೋ ಹಿಂದಿನಿಂದ ಬಂದ ಪದ್ಧತಿ, ಹೆಚ್ಚು ಜನ ಇಲ್ಲಿ ಸುತ್ತುಹಾಕುತ್ತಿರಲಿಲ್ಲ್ಲ ಅನ್ನೋದು ಇಲ್ಲಿಯ ಸತ್ಯ.

    ಶಂಕರನಿಗೂ ಗೊತ್ತಿತ್ತು, ತಾನು ಅಲ್ಲಿ ಇಲ್ಲಿ ಕಲೆಹಾಕಿ ತನಗೆ ನಂಬಿಕೆಯೆನ್ನಿಸಿದ ಸಂಗತಿಗಳನ್ನು ಕೇಳುಗರಿಗೆ ವರದಿ ಒಪ್ಪಿಸಿದಾಗ ನಂಬುವವರೂ ಉಂಟು, ನಂಬದವರೂ ಉಂಟು ಎಂದು. ಆದರೂ ಒಳಿತನ್ನು ಯಾರೇ ಆಗಲಿ ಪಾಲಿಸಲಿ ಎನ್ನುವ ಹಿರಿದಾಸೆ. ಅವನಿಗೆ ತನ್ನ ಸುತ್ತಮುತ್ತಲೂ ಶಾಂತಿ, ಸಮಾಧಾನ, ಶುಭಗಳೇ ತುಂಬಿರಬೇಕು,  ಮನುಷ್ಯಂಗೆ  ಬಾಳು ಸಹನೀಯವಾಗಿರಲಿ ಎನ್ನುವ ಒಳ್ಳೆಯ ಮನಸ್ಸು.. ಅದಕ್ಕೆ ಮತ್ತೂ ಹೇಳುತ್ತಿದ್ದ,

    ನೋಡಿ, ನನ್ನ ದೃಷ್ಟಿಯಲ್ಲಿ ಈ ಪ್ರಕೃತಿಯ ಎಲ್ಲ ಮರಗಳೂ ಪೂಜನೀಯವಾದದ್ದು. ಅವು ಇದ್ದರೆ ನಾವು. ನಮ್ಮ ತಾಯಿಯಂತೆ ನಮ್ಮನ್ನು ರಕ್ಷಿಸುವ ಈ ಯಾವುದೇ ಮರಗಳನ್ನು ಪೂಜಿಸಿ ನಮಸ್ಕರಿಸುವುದು ತಪ್ಪಲ್ಲ. ಪೂಜಿಸದಿದ್ದರೂ ತೊಂದರೆಯಿಲ್ಲ. ಆದರೆ, ಕೊಡಲಿ ಹಾಕಿ ಕಡಿಯದಿದ್ದರೆ ಸಾಕು....

    ಹೀಗೇ ಬದುಕಿನ ಸತ್ಯಗಳನ್ನು, ಒಂದಿಷ್ಟು ವೈಚಾರಿಕ ಚಿಂತನೆಯಲ್ಲಿ ಸರಳವಾಗಿ ತಿಳಿಹೇಳುವ ಶಂಕರಮಾಸ್ತರನನ್ನು ನಂಬುವ, ಅವನ ಮಾತುಗಳನ್ನು ತಿರಸ್ಕರಿಸದೇ ಗೌರವಿಸುವ ಮಂದಿಯೇ ಈ ಊರಿನಲ್ಲಿ ಹೆಚ್ಚಿದ್ದರು.  ಸಣ್ಣ ಊರಿನಲ್ಲಿ ಮಾಧ್ಯಮಿಕಶಾಲೆಯ ಉಪಾಧ್ಯಾಯನಾಗಿ ಬಂದು, ಇತ್ತೀಚೆಗಷ್ಟೇ ಪ್ರೌಢಶಾಲೆಯೂ ಬಂದ ಮೇಲೆ ಅಲ್ಲಿ ಉಪಾಧ್ಯಾಯವೃತ್ತಿ ಮಾಡುತ್ತಿರುವ ಶಂಕರ, ಸಾಕಷ್ಟು, ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಂಡಿದ್ದ. ಹೆಚ್ಚುಹೆಚ್ಚು ತಿಳಿಯುವ ಹಪಹಪಿಯೂ ಇದೆ. ಆದರೆ ಎಲ್ಲವೂ ಅವನಿಗೆ ದೊರೆವ ಮಿತಿಯಲ್ಲಿ ಇರದಿರುವುದರಿಂದ  ಸಿಕ್ಕಷ್ಟನ್ನು ಅದರ ಗುಣಾವಗುಣಗಳೊಂದಿಗೆ ಹೋಲಿಸಿ, ಒಳಿತಿದ್ದರೆ ತನ್ನವರಿಗೆ ಹಂಚುತ್ತಿದ್ದ.

    'ಗ್ಲೋಬಲ್ ವಾರ್ಮಿಂಗ್' ಬಗ್ಗೆ ವಿಶ್ವದಲ್ಲೆದ್ದಿರುವ ಆತಂಕವನ್ನು ಕೇಳಿ, ಓದಿ  ತನ್ನೂರಲ್ಲೂ  ಈ ಒಂದು ಅರಿವನ್ನು ಜನರಲ್ಲಿ ಮೂಡಿಸಬೇಕು, ಹೆಚ್ಚೆಚ್ಚು ಹಸಿರನ್ನು ಪ್ರೀತಿಸಿ, ಉಳಿಸಿ, ಬೆಳೆಸಬೇಕೆಂದೇ, ಹೀಗೆಲ್ಲ ಹೇಳುತ್ತ  ಅಳಿಲಸೇವೆಯ ಅರಿವನ್ನು ಹರಡುತ್ತಿದ್ದ......

    ಆಲದಮರವನ್ನೇ ನೋಡುತ್ತ, ಅದರ ಕೆಳಗೆ ಕುಳಿತಿದ್ದ  ಶಂಕರ ಈಗ ಅಲ್ಲಿಂದೆದ್ದ.

    ಮರಕ್ಕೆ ನಮಸ್ಕಾರ ಮಾಡಿದ. ಅಗಾಧವಾಗಿ ಹಬ್ಬಿ, ಬಿಳಿಲು ಬಿಟ್ಟ ಆ ಮರವನ್ನೇ ಒಂದುಕ್ಷಣ ದಿಟ್ಟಿಸಿನೋಡಿದ. `ಪರಂಪರೆ ಎಂದರೆ ಹೀಗೆ ದೃಢವಾಗಿ ಅಲುಗಾಡದೇ ನಿಲ್ಲಬೇಕು. ಗಾಳಿಮಳೆಗೆ ಜಗ್ಗಬಾರದು. ಪೊಳ್ಳುಬೆದರಿಕೆಗಳಿಗೆ ಬಾಗಬಾರದು. ನನ್ನ ನೆರಳಿನ ಕೆಳಗೆ ಎಲ್ಲ ಒಳಿತಾಗುವುದೆಂಬ ಭರವಸೆಯಿರಬೇಕು. ಮುಖ್ಯವಾಗಿ ಅದು ಶಕ್ತವಾದ ತತ್ವಗಳಲ್ಲಿ ರೂಪಿತವಾಗಿರಬೇಕು. ಮೇಲೇರಿದರೂ ಮಣ್ಣಲ್ಲಿ ಮಣ್ಣಾಗುವ ಸತ್ಯವರಿತು ಬಾಗುವ ಗುಣವನ್ನು ಸಾರುವ ಈ ಆಲದಂತಿರಬೇಕು' ಮನಸಿನಲ್ಲಿ ಹೀಗೆಲ್ಲಾ ಯೋಚನೆ ಮೂಡಿತು.

    `ಆದರೆ, ನನ್ನ ಮನೆಯ ಪರಂಪರೆ, ಅಲುಗಾಡುತ್ತಿದೆಯೇ....?' ಮನಸ್ಸು ನಡುಗಿತು.

    ಅನ್ಯಮನಸ್ಕನಾಗೇ, ತನ್ನ ಪ್ರಿಯಳಾದ ತುಂಗೆಯ ಬಳಿ ಹೋಗಲು ಮೆಟ್ಟಿಲ ಬಳಿ ಸಾರಿದ.

    ತನಗೆ ಪ್ರಿಯವಾದ ಇಪ್ಪತ್ತೊಂದು ಮೆಟ್ಟಿಲು...!

    ಇಲ್ಲಿ ಇಳಿಯುವಾಗ ಪ್ರತಿಸಲವೂ, 'ಗಂಗೇಚ ಯಮುನೇಚೈವ ಗೋದಾವರೀ  ಸರಸ್ವತಿ...ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ' ಈ ಶ್ಲೋಕಪಠಣ ಮಾಡುತ್ತಲೇ ಇಳಿಯುತ್ತಾನೆ. ಆಗ ಕೆಳಗೆ ಜುಳುಜುಳು ಹರಿಯುತ್ತಿರುವ ಜೀವನದಿ ತುಂಗೆಯ ಕುರಿತೇ ಧ್ಯಾನ ನಡೆದಿರುತ್ತದೆ. ಕಣ್ಣಿನ ನೋಟದ ತುಂಬಾ ತಾಯಿತುಂಗೆಯೇ ತುಂಬಿರುತ್ತಾಳೆ. ಮತ್ತೊಂದು ಆಲೋಚನೆ ಅಲ್ಲಿ ಸುಳಿಯುವುದಿಲ್ಲ. ಆದರೆ, ಯಾಕೋ ಇಂದು ಮಧ್ಯೆಮಧ್ಯೆ ಶ್ಲೋಕವೂ ನಿಲ್ಲುತ್ತಿದೆ. ಕೆಳಗಿನ ಮೆಟ್ಟಿಲಿಗೆ ಸಾರಿ ಅಲ್ಲಿ ತುಂಬಿಕೊಂಡ ನೀರಲ್ಲಿ ಕಾಲಿಟ್ಟು ನಿಂತ ಶಂಕರ ಎದುರಿಗೆ ತುಂಬಿ ಹರಿಯುತ್ತಿರುವ ತುಂಗಾನದಿಯನ್ನೇ ದಿಟ್ಟಿಸಿದ.

    ಎಲ್ಲಿಂದ ಎಲ್ಲಿಗೋ ಸಾಗುವ ಧಾವಂತದ ನದಿಗೆ ಎಲ್ಲಿಯೂ ನಿಲ್ಲಲಾಗದಷ್ಟು ಉತ್ಸಾಹವಿದೆ. ಮಧ್ಯೆಮಧ್ಯೆ ತನಗಡ್ಡವಾಗಿ ನಿಂತುಕೊಂಡ ಬಂಡೆಕಲ್ಲುಗಳನ್ನು ಕಂಡವಳಿಗೆ ತುಸುಕೋಪವೇನೋ...! ಅವುಗಳನ್ನು ತಳ್ಳಿ ಎಸೆದುಬಿಡುವಂತೆ ಅಲ್ಲಿ ಭರಭರನೆ ಧಾವಿಸಿಬಂದು ಮೇಲೇರಲು ಹವಣಿಸುತ್ತಾಳೆ. ಆದರೆ, ಹೇಳಿಕೇಳಿ ಕಲ್ಲು. ಆದ್ರ್ರಗುಣವಿಲ್ಲ. ಅಲ್ಲಾಡದೆ ಅಚಲವಾಗಿ ನಿಂತೇ ಇದೆ. ತನ್ನ ಪ್ರಯತ್ನ ವಿಫಲವಾದದ್ದಕ್ಕೆ ಬೇಸರವಾಯಿತೇನೋ ತುಂಗೆಗೆ, ಮರುಕ್ಷಣವೇ ಭೋರ್ಗರೆದು ಅಲ್ಲಿಂದ ಜಾರಿ, ತುಸುಮುಂದೆ ಮತ್ತೆ ವಿನೀತಳಾಗಿ,  ನಮ್ರಳಾಗಿ ಸಾಗುತ್ತಿದ್ದಾಳೆ.

    ಶಂಕರನಿಗೆ ಇಂತಹ ನೋಟ ಹೊಸತೇನಲ್ಲ. ಹುಟ್ಟಿದಾಗಿನಿಂದ ತುಂಗೆಯನ್ನು ನೋಡುತ್ತಲೇ ಬಂದಿದ್ದಾನೆ. ಅವಳ ಸೌಮ್ಯಗುಣ, ಅಸೀಮಸೌಂದರ್ಯ, ಹುಚ್ಚುರಭಸದ ಮುಂಗೋಪ, ಆಟಾಟೋಪ, ಆರ್ಭಟ, ಬಳಲುವಿಕೆ ಈ ಎಲ್ಲ ರೂಪಗಳನ್ನೂ ಕಂಡಿದ್ದಾನೆ. ಅಚ್ಚರಿಯೆಂದರೆ ನೋಡಿದಷ್ಟೂ ಅವನಿಗೆ ಅವಳು ಬೇಸರ ತರುವುದೇ ಇಲ್ಲ. ದಿನದಿನವೂ ಹೊಚ್ಚಹೊಸತಾಗಿ ಕಾಣುತ್ತಾಳೆ.

    ಕಣ್ಣು ಹಾಯಿಸುವಷ್ಟು ದೂರಕ್ಕೂ ಹರಿಯುತ್ತಿರುವ ತುಂಗೆಯನ್ನು ನೆಟ್ಟನೋಟದಿಂದ ನೋಡಿದ. ಮನದೊಳಗಿನ ತಲ್ಲೀನತೆಯ ಪರಿಣಾಮವೇನೋ,  ಅವನ ಮನಸಿನಲ್ಲಿ ಒಂದಿಷ್ಟು ಉದ್ವಿಗ್ನತೆ ಕಡಿಮೆಯಾದಂತೆನ್ನಿಸಿತು. ನೀರಿನ ಸಮಕ್ಕೆ ಬಾಗಿ ಬೊಗಸೆನೀರನ್ನು ಕೈಗಳಲ್ಲಿ ತುಂಬಿಕೊಂಡು ಬೆನ್ನು ನೆಟ್ಟಗಾಗಿಸಿದ.

    ಮೂಡಣ ದಿಕ್ಕಿನಲ್ಲಿ ಸೂರ್ಯನೀಗ ಒಂದಿಷ್ಟು ಮೇಲೆ ಬಂದು ಇಣುಕುನೋಟ ಬೀರುತ್ತಿದ್ದ. ಕೆಂಪುಬಣ್ಣದಲ್ಲಿ ಸೌಮ್ಯವಾಗಿರುವ ಆ ಚಂದದ ಮೂರ್ತಿಯನ್ನೇ ದಿಟ್ಟಿಸಿದ ಶಂಕರನಿಗೆ ಮನಸ್ಸು ಅಲ್ಲಿಯೇ ಕ್ಷಣಕಾಲ ಲೀನವಾಗಿಬಿಟ್ಟಿತು. ಸುತ್ತಲೂ ಹರಡುತ್ತಿರುವ ತೆಳುಛಾಯೆಯ ಮೋಡಗಳು ಆಗಸಕ್ಕೆ ಅದೊಂದು ರೀತಿಯ ಶೋಭೆಯನ್ನು ತಂದುಕೊಟ್ಟಿದ್ದವು. ಬೆಳಗಿನ ತಂಪುಗಾಳಿ ಹೊಳೆಯ ನೀರನ್ನು ಆಲಂಗಿಸಿ ಬೀಸುತ್ತಿರುವುದರಿಂದ ಮತ್ತಷ್ಟು ತಂಪುತಂಪಾಗಿ ಶಂಕರನ ಮೈಮೇಲೆ ನವಿರು ಪತ್ತಲ ಹೊದಿಸಿದಂತೆ ಸ್ಪರ್ಶಿಸುತ್ತಾ ಹೋದಾಗ, ಶಂಕರ ನಿಜದಲ್ಲಿ ಇಹವನ್ನೇ ಮರೆತಂತೆ ಕಣ್ಣು ಮುಚ್ಚಿದ. ದಡದ ಮೇಲಿನ ಸುತ್ತಣ ಮರಗಳು ಗಾಳಿಗೆ ತಲೆದೂಗಿದಾಗ ಹೊರಟ ಮರ್ಮರ ಸದ್ದು ಮಾತ್ರ ಕಿವಿಯಲ್ಲಿ ಕೇಳಿಸಿದಾಗ, ಈ ಎಲ್ಲ ಸೃಷ್ಟಿ ಸೊಬಗನ್ನು ಎದೆಗೆ ಆಹ್ವಾನಿಸಿಕೊಂಡು ಕೇವಲ ಮೌನ ಧ್ಯಾನಸ್ಥನಾದನು.....

    ಶಂಕರನಿಗೆ ಭಗವಾನ್ ಸೂರ್ಯನ ಕುರಿತು ವಿಶೇಷ ಭಕ್ತಿ. ಮಕ್ಕಳಿಗೆ ಪಾಠಮಾಡುವಾಗ ಆಗಾಗ ಸೂರ್ಯನ ಕುರಿತು ಏನನ್ನಾದರೂ ಹೇಳುತ್ತಿರುತ್ತಾನೆ. ' ಕಣ್ಣಿಗೆ ಕಾಣುವ ದೇವರು ಈ ಸೂರ್ಯ. ಬ್ರಹ್ಮಸೃಷ್ಟಿಯ ಈ ಜೀವಜಂತುಗಳನ್ನು ಸಲಹುವ ವಿಷ್ಣು ತನ್ನ ಪ್ರತಿನಿಧಿಯನ್ನಾಗಿ ಸೂರ್ಯನನ್ನು ನಮಗೆ ಕೊಟ್ಟಿದ್ದಾನೆ. ಅದಕ್ಕೇ ಅವನನ್ನು ಸೂರ್ಯಭಗವಾನ್, ಸೂರ್ಯನಾರಾಯಣ ಎಂದೆಲ್ಲಾ ಹೇಳುತ್ತೇವೆ. ಅವನು ಕಣ್ಣು ಬಿಡುವುದು ನಮ್ಮನ್ನು ಎಚ್ಚರಿಸಲು. ಅವನಿಲ್ಲದೆ ಭೂಮಿಯಿಲ್ಲ. ಭೂಮಿಯಲ್ಲಿ ಮಳೆ,

    Enjoying the preview?
    Page 1 of 1