Discover millions of ebooks, audiobooks, and so much more with a free trial

Only $11.99/month after trial. Cancel anytime.

Taalikoteya Kadanadalli
Taalikoteya Kadanadalli
Taalikoteya Kadanadalli
Ebook318 pages1 hour

Taalikoteya Kadanadalli

Rating: 0 out of 5 stars

()

Read preview

About this ebook

ವೈಕು ಅಲಿಯಾಸ್ ವೈಕುಂಟರಾವ್ ಸ್ಕೂಲ್ನಲ್ಲಿ ಪಾಠಹೇಳೋ ಮೇಷ್ಟ್ರಾಗಿ, ತನ್ನ ಪ್ರಾಣ ಸ್ನೇಹಿತ ವಿಶ್ವನಾಥನನ್ನ ಆಗುಂಬೆ ಘಾಟಿಯ ಪ್ರಪಾತಕ್ಕೆ ತಳ್ಳಿ ಸಾಯ್ಸಿದ್ದಾನೆ‌. ವೈಕುಗೆ ಇರೋ ಇತಿಹಾಸದ ಹುಚ್ಚನ್ನ ಹೆಚ್ಚು ಮಾಡೋಕೇ, ತಾಳಿಕೋಟೆಯಲ್ಲಿಕದನದಲ್ಲಿ ಹೋರಾಡಿದ ಸೈನಿಕರಿಬ್ಬರು (ಮಲ್ಲಣ್ಣ, ತ್ರಿವಿಕ್ರಮ) ಮಾಯಾತಂತ್ರದಿಂದ ಇರುವೆಗಳಾಗಿದ್ದೋರು ಮತ್ತೆ ಮನುಷ್ಯರೂಪ ತಳೆದು ಬಂದಿದ್ದಾರೆ.

ವೈಕು ಹೆಂಡತಿ ದೇವಿಕಾಗೂ, ವಿಶ್ವನಾಥನಿಗೂ, ತಾಳಿಕೋಟೆಯ ಕದನಕ್ಕೂ, ಮಲ್ಲಣ್ಣ - ತ್ರಿವಿಕ್ರಮರಿಗೂ, ಪಾಕಿಸ್ತಾನದ ಭಯೋತ್ಪಾದಕರಿಗೂ ಒಂದಕ್ಕೊಂದು ಅದೇನೋ ಸಂಬಂಧವಿದ್ದಹಾಗಿದೆ!?

ಇದೊಂದು ಸಸ್ಪೆನ್ಸ್ ಸೈಕಲಾಜಿಕಲ್ ಥ್ರಿಲ್ಲರ್ ಕಾದಂಬರಿ!

LanguageKannada
Release dateApr 2, 2021
ISBN6580235806068
Taalikoteya Kadanadalli

Related to Taalikoteya Kadanadalli

Related ebooks

Related categories

Reviews for Taalikoteya Kadanadalli

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Taalikoteya Kadanadalli - Vittal Shenoy

    http://www.pustaka.co.in

    ತಾಳಿಕೋಟೆಯ ಕದನದಲ್ಲಿ

    Taalikoteya Kadanadalli

    Author:

    ವಿಠಲ್ ಶೆಣೈ

    Vittal Shenoy

    For more books

    http://www.pustaka.co.in/home/author/vittal-shenoy

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ
    ಒಂದು
    ಎರಡು
    ಮೂರು
    ನಾಲ್ಕು
    ಐದು
    ಆರು
    ಏಳು
    ಎಂಟು
    ಒಂಬತ್ತು
    ಹತ್ತು
    ಹನ್ನೊಂದು
    ಹನ್ನೆರಡು

    ತಾಳಿಕೋಟೆಯ

    ಕದನದಲ್ಲಿ

    ವಿಠಲ್ ಶೆಣೈ

    ಟೋಟಲ್ ಕನ್ನಡ

    ಈ ಕಥೆಯಲ್ಲಿರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಮತ್ತು ನಿದರ್ಶನಗಳು ಕಾಲ್ಪನಿಕ. ಯಾವುದೇ ತರಹದ ನಿಜಜೀವನದ ಹೋಲಿಕೆಗಳು ಇದ್ದಲ್ಲಿ, ಅದು ಕೇವಲ ಆಕಸ್ಮಿಕ. ಕಥೆಯಲ್ಲಿರುವ ಕೆಲವು ಚಾರಿತ್ರಿಕ ಅಂಶಗಳನ್ನು, ಕಥೆಗೆ ಅನುಗುಣವಾಗಿ ಮಾರ್ಪಡಿಸಲಾಗಿದೆ. ಇವುಗಳ ನಿಖರತೆಯನ್ನು ಈ ಪುಸ್ತಕವು ಖಂಡಿತವಾಗಿ ಸಾರುವುದಿಲ್ಲ

    *****

    ಮುನ್ನುಡಿ

    ಸಹೃದಯ ಓದುಗರಿಗೆ,

    ಸಪ್ರೇಮ ನಮಸ್ಕಾರಗಳು. ಸಹಸ್ರಾರು ವರ್ಷಗಳ ಹಿಂದೆಯೇ ಪ್ರಾಚೀನ ಮಾನವ ಈ ಭೂಮಿಯಲ್ಲಿ ಕಾಣಿಸಿದ್ದ. ಆ ನಂತರ ಎರಡು ಹಿಮಯುಗಗಳಾದವು. ಆ ಹಿಮಾವರಣ ಸರಿದು ಮತ್ತೆ ಮಾನವ, ಸಸ್ಯ, ಪ್ರಾಣಿಗಳು ಕಂಡಿದ್ದು ಇಂದಿಗೆ ಸರಿ ಸುಮಾರು ಹತ್ತು-ಹನ್ನೆರಡು ಸಾವಿರ ವರ್ಷಗಳಷ್ಟು ಹಿಂದೆ ಎಂದರೆ ನಮ್ಮ ಚರಿತ್ರೆಯ ಬೇರುಗಳೆಷ್ಟು ಪುರಾತನವಾದದ್ದೆಂಬ ಅಂದಾಜಾಗಬಹುದು. ಮನುಷ್ಯನ ಉಗಮದ ಮೂಲ ಮತ್ತು ಕಾಲಗಳನ್ನರಸುತ್ತ ಸಾಗಿದ ಪ್ರಾಕ್ತನತಜ್ಞರ ಅಭಿಪ್ರಾಯವಿದು. ನಮ್ಮ ಪೂರ್ವಜರ ಬದುಕು, ಬವಣೆ, ಬಯಕೆ ಇವನ್ನೆಲ್ಲ ತಿಳಿಯುವ ಕುತೂಹಲ ಹುಟ್ಟುವುದು ಸಹಜವೂ, ಸಾಧುವೂ ಆಗಿದೆ.

    ನಿನ್ನೆಗಳಿಲ್ಲದೇ ನಾಳೆಗಳಿಲ್ಲ. ನಿನ್ನೆಗಳನ್ನು ನಾವು ಕಂಡರಿಯೆವು, ಗೊಂದಲಮಯ ವರ್ತಮಾನ ಹಾಗೂ ಸುಖಮಯವಾದ ಭವಿಷ್ಯದ ನಾಳೆಯ ಕನಸುಗಳನ್ನು ಪೋಣಿಸುತ್ತಿರುವವರು ನಾವು. ನಮ್ಮ ಪೂರ್ವಜರು ನಡೆದು ಬಂದ ದಾರಿಯ ಪರಿಚಯವನ್ನು ನಾವು ಮಾಡಿಕೊಳ್ಳಲೇ ಬೇಕು. ಚರಿತ್ರೆ ನಮ್ಮ ಆಂತರ್ಯದ ಅಸ್ಮಿತೆಯ ವಿಕಾಸಕ್ಕೆ ಹಾಗೂ ಭವಿಷ್ಯದ ಅನುಸಂಧಾನಕ್ಕೆ ಅಗತ್ಯವಾಗಿ ಬೇಕಾದ ಪರಿಕರ.

    ಮನುಕುಲದ ಚರಿತ್ರೆಯಲ್ಲಿ ಲೋಹ, ಕೃಷಿ, ರಾಜ್ಯ-ಸಾಮ್ರಾಜ್ಯಗಳು, ಕದನ-ವಿಪ್ಲವ-ದಂಗೆಗಳು, ರಾಜ ವಂಶಗಳ ಆಳ್ವಿಕೆ ಇವೆಲ್ಲ ಜನಾಂಗಗಳು ಮತ್ತು ಸಂಸ್ಕೃತಿಗಳನ್ನು ರೂಪಿಸಿವೆ. ಇವುಗಳ ಅಧ್ಯಯನದಿಂದ, ಅರಿವಿಂದ ನಮ್ಮ ವರ್ತಮಾನ, ಭವಿಷ್ಯಗಳು ಬೆಳಗುವುದು ನಿಸ್ಸಂದೇಹ.

    ಮಾನವನ ಚರಿತ್ರೆಯಷ್ಟೇ ಅವನ ಮೆದುಳೂ ಮನಸ್ಸೂ ಸಂಕೀರ್ಣವಾದದ್ದು, ಕೌತುಕಮಯವಾದದ್ದು, ಸೂಕ್ಷ್ಮವಾದದ್ದು. ಮನಸ್ಸೇ ಮಾನವನನ್ನು ಆಳುವ ಚೈತನ್ಯ, ಶಕ್ತಿ. ಅವನು ಮನಸ್ಸಿನ ಅಧೀನ. ಅವನ ಅಂತರಂಗದ ಉತ್ತಮಿಕೆಯ ಸತ್ವದ ಅಭಿವ್ಯಕ್ತಿ ಹಾಗೂ ಅದರ ಸಮರ್ಥ ಬಳಕೆಯಾಗಬೇಕಾದಲ್ಲಿ ಅವನ ಮನಸ್ಸು ಆರೋಗ್ಯವಾಗಿರಲೇಬೇಕು. ಈ ಆಧುನಿಕ ಜಗತ್ತಿನಲ್ಲೂ ವಿಜ್ಞಾನ, ತಂತ್ರಜ್ಞಾನಗಳಷ್ಟು ಮಹತ್ವ ಕೊಡಬೇಕಾದ ಜ್ಞಾನದ ಶಾಖೆಗಳಾಗಿ ನಾವು ಚರಿತ್ರೆ ಹಾಗೂ ಮನಃಶಾಸ್ತ್ರಗಳನ್ನು ಪರಿಗಣಿಸಬೇಕಾಗುತ್ತದೆ. ಆಧುನಿಕ ಸಮಾಜ ನಾಗಾಲೋಟದಲ್ಲಿ ತಾನರಿಯದ ಗಮ್ಯದತ್ತ ಧಾವಿಸುತ್ತಿರುವ ಈ ಕಾಲಘಟ್ಟದಲ್ಲಿ ಚರಿತ್ರೆ, ಮನಃಶಾಸ್ತ್ರ, ಸಾಹಿತ್ಯ, ಕಥನಕಲೆ, ಸಂಗೀತ ಇವೆಲ್ಲ ನಮ್ಮನ್ನು ಸಂತೈಸಿ, ಬಲತುಂಬುವ ಚೈತನ್ಯಗಳಾಗಿವೆ.

    ಈ ಹಿನ್ನೆಲೆಯಲ್ಲಿ ಶ್ರೀ ವಿಠಲ್ ಶೆಣೈಯವರ ತಾಳಿಕೋಟೆಯ ಕದನದಲ್ಲಿ ಕಾದಂಬರಿಯನ್ನು ಓದಿದಾಗ, ಹಲವು ಕಾರಣಗಳಿಂದ ಈ ಕೃತಿ ಆಪ್ತವಾಯಿತು, ಭರವಸೆ ಹುಟ್ಟಿಸಿತು. ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಥೆ-ಕಾದಂಬರಿಗಳ ಬೆಳೆ ಹುಲುಸಾಗಿಯೇ ಆಗುತ್ತಿದ್ದರೂ, ಅದರಲ್ಲಿ ಹೆಚ್ಚಿನವು ಮಾನವ ಸಂಬಂಧಗಳ ವಸ್ತುವನ್ನೇ ಹೊಂದಿವೆ. ಮನುಷ್ಯರ ಹಂಬಲ, ತುಡಿತ, ಭಾವನೆಗಳ ತಾಕಲಾಟದ ಕೃತಿಗಳ ಮಹಾಪೂರದ ನಡುವೆ ಚಾರಿತ್ರಿಕ-ವೈಜ್ಞಾನಿಕ ಕೃತಿಗಳು ವಿರಳವೆಂದೇ ಹೇಳಬಹುದು. ಕನ್ನಡದ ಈಗಿನ ಸಾಹಿತ್ಯಿಕ ಸಂದರ್ಭದಲ್ಲಿ ಆಗಿಹೋದ ಚರಿತ್ರೆಯನ್ನು ಧ್ಯಾನಿಸುವ ಲೇಖಕರು ತೀರ ಕಡಿಮೆ. ವರ್ತಮಾನದ ಜಂಜಡ, ತಲ್ಲಣಗಳನ್ನು ಕಟ್ಟಿ ಕೊಡುತ್ತಿರುವ ಉತ್ತಮ ಲೇಖಕರಿದ್ದಾರಾದರೂ, ಮನಸ್ಸಿನ ಕಂಪನ, ತರಂಗ, ಲಯಗಳನ್ನು ಕೃತಿಗಿಳಿಸುವವರು ವಿರಳ. ಈ ಜಾಗತೀಕರಣದ ಪ್ರಚಂಡ ಪ್ರವಾಹದೆದುರು ಚರಿತ್ರೆಯಂತಹ ವಸ್ತುವಿಷಯಗಳು ಮಂಕಾಗುತ್ತಿವೆ.

    ವಿಶೇಷವಾಗಿ ನನ್ನ ಗಮನ ಸೆಳೆದಿದ್ದೆಂದರೆ ಶ್ರೀ ವಿಠಲ್ ಶೆಣೈಯವರ ಈ ಕೃತಿಯಲ್ಲಿ ಕಥಾನಾಯಕನಷ್ಟೇ ಸಶಕ್ತವಾದ ಪಾತ್ರವಾಗಿ ಚರಿತ್ರೆಯೂ ಇಲ್ಲಿ ವಿಜೃಂಭಿಸಿದೆ. ಇದೇ ಈ ಕೃತಿಯ ಹೆಗ್ಗಳಿಕೆ.

    ಈ ಕಥೆಯು ಚರಿತ್ರೆಯ ಹಿಮ್ಮೇಳದೊಂದಿಗೆ ವೈದ್ಯಕೀಯ ವಿಜ್ಞಾನದ ಕೆಲವೊಂದು ಅಂಶಗಳನ್ನು ಪರಿಚಯಿಸಿ, ಅದಕ್ಕೆ ತನ್ನದೇ ಆದ ಉಪಾಯಗಳನ್ನು ಸೂಚಿಸುತ್ತದೆ. ಆ ಕಾಲ್ಪನಿಕ ಉಪಾಯಗಳು ವಿಶಿಷ್ಟತೆ ಮತ್ತು ಲವಲವಿಕೆಯಿಂದ ಕೂಡಿದ್ದು, ಇದು ಕನ್ನಡಕ್ಕೆ ಹೊಸದೆಂದೇ ನನ್ನ ಅಭಿಪ್ರಾಯ.

    ಈ ಕೃತಿ ನಮ್ಮನ್ನು ಮರೆತು ಹೋದ ಸಾಮ್ರಾಜ್ಯವಾದ ವಿಜಯನಗರದ ದಿನಗಳಿಗೆ ಕರೆದೊಯ್ದು ಮಂತ್ರ ಮುಗ್ಧ ಮಾಡುತ್ತದೆ. ಹಂಪಿ, ಹೊಸಪೇಟೆ, ಕಮಲಾಪುರ, ವಿರೂಪಾಕ್ಷ, ಉಗ್ರನರಸಿಂಹ, ಹಜಾರರಾಮ, ಮಹಾನವಮಿ ದಿಬ್ಬಗಳಲ್ಲಿ ಸಂಭವಿಸುವ ಎಲ್ಲ ಘಟನೆಗಳೂ ಕನ್ನಡಿಗರ ಅಭಿಮಾನದ ಕೇಂದ್ರಗಳಾಗಿವೆ. ಇದು ಓದುಗರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ. ಲೇಖಕರ ಚರಿತ್ರೆಯ ಬಗೆಗಿನ ತಿಳುವಳಿಕೆ, ವೈಜ್ಞಾನಿಕತೆಯ ನಿಲುವು ಕೃತಿಯಲ್ಲಿ ಅನೇಕ ಕಡೆ ಉದಿತವಾಗುತ್ತದೆ. ಭವಿಷ್ಯದರ್ಶಕ, ಬೆಂಡವಾಲೆಗಳು, ಯೋಧರು, ವಿಶ್ವನಾಥನೆಂಬ ಮಿತ್ರ ಅವುಗಳ ಪ್ರಸ್ತುತಿ ಈ ಕೃತಿಗೆ ನಾಟಕದ ಮಾಂತ್ರಿಕ ಸ್ಪರ್ಶ ನೀಡಿ ರಂಜಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ನಾಯಕಿಯ ಪತ್ನಿ ದೇವಿಕಾಳ ಪ್ರಬುದ್ಧತೆ ಹಾಗೂ ಸ್ನೇಹಪರತೆ ನಮ್ಮನ್ನು ತಾಗುತ್ತದೆ. ಅವಳು ತನ್ನ ಅಣ್ಣನ ಜೊತೆಗೂಡಿ ತನ್ನ ಪತಿಯ ಜೀವನದ ಒಂದು ದೊಡ್ಡ ಸಮಸ್ಯೆಯನ್ನು ತಾಳಿಕೋಟೆಯ ಕದನದ ಹಿನ್ನೆಲೆಯಲ್ಲಿ ಬಗೆಹರಿಸುವ ಪ್ರಯತ್ನ ಅನನ್ಯವಾದದ್ದು. ಓದುಗರಲ್ಲಿ ಚರಿತ್ರೆಯ ಪ್ರೇಮವನ್ನು ಬಿತ್ತುತ್ತಾ, ಜೊತೆಗೆ ಕದಡಿದ ಮನಸ್ಸನ್ನು ತಹಬಂದಿಗೆ ತರಲು ವಿಭಿನ್ನವಾಗಿ ಪ್ರಯತ್ನಿಸಬೇಕೆಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಿರುವ ಈ ಕೃತಿ ಕನ್ನಡಿಗರ ಮನಗೆಲ್ಲಲಿ, ಅನೇಕ ಮುದ್ರಣಗಳನ್ನು ಕಾಣಲಿ ಎಂದು ಆಶಿಸುತ್ತೇನೆ.

    ಇಂತಹದೊಂದು ಕೃತಿಯನ್ನು ನಮ್ಮ ಕೈಗಿಟ್ಟಿರುವ ಲೇಖಕರಾದ ಶ್ರೀ ವಿಠಲ್ ಶೆಣೈಯವರನ್ನು ಈ ಎಲ್ಲ ಕಾರಣಗಳಿಗಾಗಿ ಅಭಿನಂದಿಸುತ್ತಾ, ಅವರ ಲೇಖನಿಯ ಮತ್ತಷ್ಟು ಕೃತಿಗಳು ಕನ್ನಡಕ್ಕೆ ದಕ್ಕಲೆಂದು ಹಾರೈಸುತ್ತೀನಿ.

    - ಡಾ. ಶುಭದಾ ಹೆಚ್. ಎನ್

    (ಶಿಕ್ಷಣತಜ್ಞೆ, ಲೇಖಕಿ, ಭಾಂದವ್ಯ ಸಮನ್ವಯ ಶಾಲೆ ಸಂಸ್ಥಾಪಕಿ, ರಾಜ್ಯ-ರಾಷ್ಟ್ರ ಪ್ರಶಸ್ತಿ ವಿಜೇತೆ)

    *****

    ಕದನದ ಮುಂಚೆ

    ಮೊದಲ ಬಾರಿ ಹಂಪಿಗೆ ಹೋದಾಗ ಅಲ್ಲಿನ ಸೌಂದರ್ಯ ನೋಡಿ ನಾನು ಬೆರಗಾದೆ. ಅಲ್ಲಿಯ ಮಣ್ಣು, ಅಲ್ಲಿಯ ಪ್ರಕೃತಿ ಚೆಲುವು, ಅಲ್ಲಿಯ ಸ್ಮಾರಕಗಳ ಸೊಬಗು ಕಂಡು ಆಶ್ಚರ್ಯವಾದರೂ ಅರ್ಧ ನಾಶವಾದ ಊರನ್ನು ನೋಡಿ ತನು ಮನಗಳು ತಲ್ಲಣಿಸಿದವು. ಹಂಪಿಯ ಬಜಾರಿನಲ್ಲಿ ನಡೆದುಕೊಂಡು ಹೋದಾಗ ಯಾಕೋ ಏನೋ ವಿಜಯನಗರದ ಕಾಲದಲ್ಲಿ ಇವು ಹೇಗಿರುತ್ತಿದ್ದವು? ಇಲ್ಲಿ ತರಕಾರಿ ಮಾರುವಂತೆ ವಜ್ರ ವೈಡುರ್ಯಗಳನ್ನೂ ಮಾರುತ್ತಿದ್ದರೋ? ಎಂದು ಊಹಿಸುತ್ತಿದ್ದೆ. ಅಲ್ಲಿಯೇ ನನಗೆ ನಮ್ಮ ಗತಕಾಲದ ಭವ್ಯ ವಿಜಯನಗರ ರಾಜ್ಯದ ಮೇಲೆ ಒಂದು ಕಥೆಯನ್ನು ಬರೆಯುವ ಇಚ್ಚೆಯಾಯಿತು. ಪೂರ್ತಿ ಚಾರಿತ್ರಿಕ ಅಲ್ಲದಿದ್ದರೂ ಹಲವು ಚಾರಿತ್ರಿಕ ಅಂಶಗಳಿರುವ, ವಿಜಯನಗರ ಸಾಮ್ರಾಜ್ಯವನ್ನು ಓದುಗರಿಗೆ ನೆನಪಿಸುವ ಒಂದು ಕುತೂಹಲಕಾರಿ ಕಾದಂಬರಿಯನ್ನು ಸುಮಾರು ಎರಡು ವರುಷಗಳ ವರೆಗೆ ತಲೆಯಲ್ಲೇ ಹೊತ್ತುಕೊಂಡು ರಾತ್ರಿ ಹೊತ್ತು ನಿದ್ದೆ ಬರದಿದ್ದಾಗ ಕಥೆಯ ತಿರುಳಿನ ಬಗ್ಗೆ ಚಿಂತಿಸುತ್ತಾ ಕೊನೆಗೆ ಕಾಗದದಲ್ಲಿ (ಅರ್ಥಾತ್ ಕಂಪ್ಯೂಟರ್) ಇಳಿಸಿದೆ. ಅನೇಕ ಸಲ ಇದನ್ನು ಓದಿ ಇದು ನಾಲ್ಕು ಜನರು ಓದಿ ಮೆಚ್ಚುವಂತಹ ಕಥೆಯೋ, ಅಲ್ಲವೋ ಎಂದು ಬಹಳಷ್ಟು ಆಲೋಚಿಸಿ ಇದನ್ನು ಪ್ರಕಟಿಸಲು ನಿರ್ಧರಿಸಿದೆ.

    ಈ ಕಥೆಯಲ್ಲಿ ನಾಯಕ-ನಾಯಕಿ, ಸರಸ-ವಿರಸ  ಇಲ್ಲ. ಆದರೂ  ಓದುಗರನ್ನು ತನ್ನತ್ತ ಸೆಳೆಯುವ ಆಕರ್ಷಣೆ ಇದೆ ಎಂಬುವುದು ನನ್ನ ಧೃಡ ನಂಬಿಕೆ. ಬರೆಯಲು ಬೇಕಿರುವ ಅನೇಕ ಮಾಹಿತಿಗಳಿಗೆ ಅಂತರ್ಜಾಲದಲ್ಲಿ ಮತ್ತು ರಾಬರ್ಟ್ ಸಿವೆಲ್ ರವರ ‘ಮರೆತು ಹೋದ ಸಾಮ್ರಾಜ್ಯ’ ಪುಸ್ತಕದಲ್ಲಿ ದೊರಕಿದ ಸಹಾಯ ಇಲ್ಲಿ ಉಲ್ಲೇಖಿಸದಿದ್ದರೆ ತಪ್ಪಾಗುತ್ತದೆ. ಪುಸ್ತಕವನ್ನು ಸೃಷ್ಟಿಸಲು ಪರೋಕ್ಷವಾಗಿ ಸಹಕರಿಸಿದ ನನ್ನ ಪತ್ನಿ-ಮಕ್ಕಳು, ತಾಯಿ-ತಂದೆಯವರಿಗೆ ಅನಂತ ಧನ್ಯವಾದಗಳು. ಅವರ ಜೊತೆ ತೊಡಗಿಸಬೇಕಾದ ಬಹಳಷ್ಟು ಸಮಯವನ್ನು, ನಾನು ಈ ಕಥೆ ಬರೆಯಲು ತೊಡಗಿಸಿದ್ದೇನೆ. ನಾನು ಬರೆದ ಮೊದಲ ಆವೃತ್ತಿಯನ್ನು ಓದಿ ಅದನ್ನು ಪರಿಷ್ಕರಿಸಿದ ನನ್ನ ಮಿತ್ರ ಸತೀಶ್ ಸಿಂದೋಗಿಯವರಿಗೆ ಕೂಡಾ ನಾನು ಆಭಾರಿ. ಪ್ರಕಟಿಸಲು ಒಪ್ಪಿದ ಟೋಟಲ್ ಕನ್ನಡದ ಮಾಲೀಕ ವಿ. ಲಕ್ಷ್ಮೀಕಾಂತ್, ಮುಖಪುಟ ಮತ್ತು ಒಳಪುಟಗಳಿಗೆ ಮೆರುಗು ತಂದ ಅಜಿತ್ ಕೌಂಡಿನ್ಯ ರವರಿಗೆ ತುಂಬು ಹೃದಯದ ಧನ್ಯವಾದಗಳು. ಒಂದಾನೊಂದು ಕಾಲದಲ್ಲಿ ದಕ್ಷಿಣ ಭಾರತದ ವಿಜಯನಗರದ ಪ್ರಜೆಗಳಾಗಿದ್ದ ನಮ್ಮೆಲ್ಲರ ಪೂರ್ವಜರಿಗೆ ಈ ಪುಸ್ತಕವನ್ನು ಸಮರ್ಪಿಸುತ್ತಿದ್ದೇನೆ. ಬಹುಶಃ ಈ ಪುಸ್ತಕವನ್ನು ಓದುವ ಎಲ್ಲಾ ಓದುಗರ ಪೂರ್ವಜರು ಇದರಲ್ಲಿ ಸೇರಿರಬಹುದು.

    ಈ ಕಥೆಯನ್ನು ಓದಲು ನೀವೆಲ್ಲಾ ತೊಡಗಿಸಿದ ಸಮಯಕ್ಕೆ ನಾನು ಚಿರಋಣಿ. ಓದಿ ನಿಮಗೆ ಅನಿಸಿಕೆಗಳನ್ನು ಕೊಡುವುದಿದ್ದಲ್ಲಿ ಕೆಳಗೆ ಕೊಟ್ಟಿರುವ ಇಮೇಲ್, ಫೇಸ್ಬುಕ್ ಪುಟಗಳಲ್ಲಿ ಬರೆಯಿರಿ.

    *****

    ಒಂದು

    ಇವತ್ತಿನ ದಿನವು ನನ್ನ ಪಾಲಿಗೆ ಬಹಳ ಮಹತ್ವದ ದಿನವಾಗಲಿದೆ. ಜೀವನದಲ್ಲಿ ಹಿಂದೆಂದೂ ಮಾಡಿರದ ಕೆಲಸವನ್ನು ನಾನು ಇವತ್ತು ಮಾಡಲು ಹೊರಟಿದ್ದೇನೆ. ಇದರ ಬಗ್ಗೆ ಬಹಳ ಯೋಚನೆ ಮಾಡಿ, ಮನೋಧೈರ್ಯವೆಲ್ಲಾ ಒಗ್ಗೂಡಿಸಿ ಈಗ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಮಾಡಲಿರುವ ಈ ಮಹತ್ವದ ಕೆಲಸ, ನನ್ನ ಕೆಲವೇ ನಿಕಟವರ್ತಿಗಳಿಗೆ ಮಾತ್ರ ಗೊತ್ತಿದೆ. ಅದರಲ್ಲಿ ನನ್ನ ಹೆಂಡತಿಯೂ ಒಬ್ಬಳು.

    ಐದಾರು ವರ್ಷಗಳಿಂದ ನಾನು ಚಲಾಯಿಸುತ್ತಿರುವ ಮಾರುತಿ ಆಲ್ಟೋ ಕಾರನ್ನು, ಇವತ್ತು ಓಡಿಸುವಾಗ ನನ್ನಲ್ಲಿ ಸ್ವಲ್ಪ ಕಳಕಳಿ ಇತ್ತು. ಇಷ್ಟು ವರುಷಗಳಲ್ಲಿ ನಾನು ಇದರ ಜೊತೆ ಒಂದು ಮಧುರ ಬಾಂಧವ್ಯವನ್ನೇ ಬೆಳೆಸಿಕೊಂಡಿದ್ದೇನೆ, ಇದನ್ನು ಬೀಳ್ಕೊಡಲು ನಾನು ಸಿದ್ಧವಿರಲಿಲ್ಲ. ಮನಸ್ಸಿನಲ್ಲಿ ಅಂದು ಕೊಂಡ ಹಾಗೆ ಕೆಲಸ ನಡೆಯುತ್ತೋ, ಇಲ್ಲವೋ? ಅದು ವಿಫಲವಾದರೆ ಬರುವ ಸಂಧರ್ಭವನ್ನು ಹೇಗೆ ಎದುರಿಸುವುದು? ನನ್ನ ಮುಂದಿರುವ ಸಮಸ್ಯೆಯನ್ನು ಬೇರೆ ಯಾವ ತರಹ ಬಗೆಹರಿಸುವುದು? ಇತ್ಯಾದಿ ಕೆಲವು ಅಜ್ಞಾತ ವಿಷಯಗಳತ್ತ ನನ್ನ ಮನಸ್ಸು ಬೇಡವೆಂದರೂ ಹರಿಯುತ್ತಿತ್ತು. ಕಾರಿನಲ್ಲಿ ನಾನು ಇವೆಲ್ಲದರ ಬಗ್ಗೆ ಪೂರ್ತಿ ಚಿಂತಿತನಾಗಿ, ಮೈ ಮರೆತು ಚಲಾಯಿಸುತ್ತಿದ್ದೆ.

    ಜನ ನಿಬಿಡವಾದ ರಸ್ತೆಯಲ್ಲಿ ಕಾರಿನ ನಂಬರ್ ಪ್ಲೇಟ್ ಮಾಡುವ ಅಂಗಡಿಯನ್ನು ಹುಡುಕುತ್ತಾ ಇದ್ದೆ. ಸುತ್ತಲೂ ಕಿಕ್ಕಿರಿದ ಜನಸಂದಣಿ, ಸಾಲು-ಸಾಲು ಅಂಗಡಿಗಳು, ಇದರಲ್ಲಿ ಒಂದು ಪುಟ್ಟದಾದ ಆ ನಂಬರ್ ಪ್ಲೇಟ್ ಅಂಗಡಿಯನ್ನು ಹುಡುಕುವುದು ಸುಲಭದ ಮಾತಲ್ಲ. ಅಂತಹ ಅಂಗಡಿ ಕಂಡ ಕೂಡಲೇ ಒಂದೇ ಸಮನೆ ಬ್ರೇಕ್ ಒತ್ತಿದೆ, ಹಠಾತ್ತಾಗಿ ಕಾರ್ ನಿಂತಾಗ ಹಿಂದಿನ ಕಾರಿನವ ಪೆಂ ಎಂದು ಕರ್ಕಶವಾಗಿ ಹಾರ್ನ್ ಮಾಡಿ ನನಗೆ ಬೈದ. ನಾನದನ್ನು ಲೆಕ್ಕಿಸಲಿಲ್ಲ.

    ಇನ್ನಷ್ಟೇ ಮೀಸೆ ಚಿಗುರುತ್ತಿರುವ ಹುಡುಗ ಆ ಅಂಗಡಿಯನ್ನು ಚಲಾಯಿಸುತ್ತಿದ್ದ. ಒಮ್ಮೆ ಅಂಗಡಿಯ ಉದ್ದಕ್ಕೂ ಯಾರಾದರೂ ಹಿರಿಯರು, ಅವನ ಅಪ್ಪ-ಅಮ್ಮ ಇದ್ದಾರೋ ಎಂದು ದೃಷ್ಟಿ ಹಾಯಿಸಿದೆ.

    ಏನಾಗ್ಬೇಕಿತ್ತು ಸಾರ್? ಆ ಹುಡುಗನೇ ಕೇಳಿದ.

    ದೊಡ್ಡವ್ರು ಯಾರೂ ಇಲ್ವೇನಪ್ಪಾ? ನಾನು ಕೇಳಿದೆ.

    ನಾನಿದ್ದೀನಲ್ಲಾ, ಏನು ಹೇಳಿ? ಅವನು ನಗುತ್ತಾ ಕೇಳಿದ.

    ಅವನ ವ್ಯವಹಾರ ಪ್ರಜ್ಞೆ ನೋಡಿ ನಾನು ಬೆರಗಾದೆ. ಅವನಲ್ಲಿ ಅವನ ವಯಸ್ಸಿಗಿಂತ ಹೆಚ್ಚು  ಪ್ರಬುದ್ಧತೆ ಇತ್ತೆನಿಸಿತು. ಅಂಗಡಿಯಲ್ಲಿ ವಿವಿಧ ತರಹದ ನಂಬರ್ ಪ್ಲೇಟ್‌ಗಳು ಗೋಡೆಯ ಮೇಲೆ ನೇತು ಹಾಕಿತ್ತು. ನಾನು ಅದರಲ್ಲೊಂದನ್ನು ಆಯ್ಕೆ ಮಾಡಿ,

    ಈ ತರಹದ ನಂಬರ್ ಪ್ಲೇಟ್ ಬೇಕಿತ್ತು, ಎಂದು ಕೇಳಿದೆ.

    ಅವನು ಅದನ್ನು ನೋಡಿ ಸಾರ್, ಅದು ಒಂದು ವಿಚಿತ್ರ ಸ್ಟೈಲ್, ಇದರಲ್ಲಿ ಸರಿಯಾಗಿ ನಂಬರ್ ಕಾಣ್ಸೋದಿಲ್ಲ. ನಿಮ್ಗೆ ಗೊತ್ತಾಗ್ಲಿ ಅಂತ ಈಗ್ಲೇ ಹೇಳಿದ್ದೀನಿ, ಎಂದು ಹೇಳಿದ.

    ಮತ್ತ್ಯಾಕೆ ಇಲ್ಲಿ ನೇತಾಕಿದ್ದೀಯಾ? ನಾನು ಕೇಳಿದೆ.

    ಇರ್ತಾರೆ ಸಾರ್ ತಗೊಳ್ಳೋರು, ಸ್ಟೈಲ್ ಮಾಡ್ತಾರೆ, ಆಮೇಲೆ ಪೋಲಿಸ್ ಕೈಲಿ ಸಿಕ್ಕಾಕಿ ಕೊಳ್ತಾರೆ. ನಮ್ಗೇನಂತೆ? ಅವನು ನಗುತ್ತಾ ಹೇಳಿದ.

    ಪರ್ವಾಗಿಲ್ಲಪ್ಪ, ನಂಗೆ ಬೇಕಾಗಿದ್ದೇ ಇಂತದ್ದು. ನಾನೂ ಸ್ವಲ್ಪ ಸ್ಟೈಲ್ ಹೊಡಿತೀನಿ, ಎಂದು ನಾನು ಹೇಳಿದಾಗ ಅವನು ನನ್ನ ಮುಖವನ್ನೇ ನೋಡಿದ.

    ಯಾಕ್ ಸಾರ್? ಪೋಲಿಸ್ ಹಿಡಿಬೇಕಂತ ಆಸೆನಾ? ಅವನು ಕೇಳಿದಾಗ ನನ್ನ ಮೈ ಜುಂ ಅಂದಿತು. ನಾನು ಇವತ್ತು ಮಾಡುವ ಕೆಲಸವನ್ನು ಪೋಲಿಸರಿಂದ ದೂರ ಇಡಬೇಕಿತ್ತು, ಪೋಲಿಸ್ ಎಂಬ ಶಬ್ದವೇ ನನಗೆ ಇವತ್ತು ಭಯ ತರುತ್ತಿತ್ತು.

    ಜಾಸ್ತಿ ಮಾತಾಡ್ತಿಯಪ್ಪಾ ನೀನು! ನಾನು ಕೋಪದಲ್ಲಿ ಹೇಳಿದೆ.

    ನಂಬರ್ ಹೇಳಿ?  ಪೆನ್ ಪೇಪರ್ ಹಿಡಿದು ಹುಡುಗ ಕೇಳಿದ.

    KA-15 M-3642 ನಾನು ಹೇಳಿದೆ. ಅವನು ದೂರದಲ್ಲಿ ನಿಂತಿದ್ದ ನನ್ನ ಕಾರಿನ ನಂಬರ್ ಪ್ಲೇಟನ್ನು ಕತ್ತು ನೇರ ಮಾಡಿ ದಿಟ್ಟಿಸಿದ. ಅದರ ನಂಬರ್ KA-15 M-4852 ಆಗಿತ್ತು.

    ಅಲ್ಲಿ ನೋಡಿದ್ರೆ ಬೇರೆ ನಂಬರ್ ಇದೆ? ಅವನು ಕೇಳಿದ.

    ಅದು... ಅದು... ಇವನಿಗೆ ಏನಪ್ಪಾ ಹೇಳುವುದು?  ಯೋಚನೆ ಮಾಡುವಷ್ಟರಲ್ಲಿ ಹೊರಗಡೆ ನಂಬರ್ ಪ್ಲೇಟ್‌ಗಳ ರಾಶಿಯನ್ನು ನೋಡಿ ಥಟ್ ಅಂತ ಉಪಾಯ ಹೊಳೆಯಿತು.

    ಅದು ಏನಂದ್ರೆ, ನಾನು ಇದುವರೆಗೆ ತಗೊಂಡಿರುವ ಎಲ್ಲಾ ಗಾಡಿಗಳ ನಂಬರ್ ಪ್ಲೇಟ್‌ಗಳನ್ನು ನನ್ನ ಗ್ಯಾರೇಜಲ್ಲಿ ನೇತು ಹಾಕಿದ್ದೀನಿ. ಇಲ್ಲಿ ಹೊರಗಡೆ ಹಾಕಿದ್ದೀರಲ್ಲ? ಅದೇ ತರಹ. ಸುಮ್ನೆ ನೆನಪಿಗೆ. ಆದ್ರೆ ಇದರ ಮುಂಚಿನ ಕಾರ್ ಮಾರಿದಾಗ, ಅದರ ಪ್ಲೇಟ್ ಕಳಚಿ ಇಡೋದನ್ನ ಮರೆತು ಬಿಟ್ಟೆ, ಅದಕ್ಕೆ ಈಗ ಅದರ ಪ್ಲೇಟ್ ಮಾಡಿಸುತ್ತಿದ್ದೀನಿ,  ನಾನು ಕಥೆ ಕಟ್ಟಿದೆ.

    ಇದೆಂತಹ ವಿಚಿತ್ರ ಶೋಕಿ! ಅದರ ಆರ್.ಸಿ ಬುಕ್ ಕೊಡಿ,

    ಆಗ್ಲೇ ಹೇಳಿದ್ನಲ್ಲಪ್ಪಾ? ಕಾರ್ ಮಾರಿ ಆಗಿದೆ, ಆರ್.ಸಿ ಬುಕ್ ಎಲ್ಲಿಂದ?

    ಆಗಲ್ಲಾ ಸರ್, ಆರ್.ಸಿ ಬುಕ್ ಇಲ್ದೇ ಮಾಡಿ ಕೊಡಕ್ಕೆ ಆಗಲ್ಲಾ! ಎಂದು ಹುಡುಗ ನಿಖರವಾಗಿ ಹೇಳಿ ಬಿಟ್ಟ.

    ದಯವಿಟ್ಟು ಮಾಡಪ್ಪಾ! ದುಡ್ಡು ಬೇಕಾದ್ರೆ ಜಾಸ್ತಿ ಕೊಡ್ತೀನಿ, ನಾನು ಪರ್ಸ್ ತೆಗೆದೆ. ಅವನು ನನ್ನ ಮುಖ ನೋಡಿದ, ಹಾಗೆಯೇ ಪರ್ಸಲ್ಲಿರುವ ನೋಟುಗಳನ್ನೂ ನೋಡಿದ. ಮನಸ್ಸಿಲ್ಲದವನಂತೆ ಹೂಂ ಎಂದು ತಲೆ ಅಲ್ಲಾಡಿಸಿದ. ಒಳಗಡೆ ಹೋಗಿ ತನ್ನ ಕಂಪ್ಯೂಟರ್ ಕೀಲಿಗಳನ್ನು ಜೋರಾಗಿ ಕುಕ್ಕಿದಾಗ, ಅವನು ಅರೆಮನಸ್ಸಿಂದ ಕೆಲಸ ಮಾಡುತ್ತಿದ್ದಾನಂತ ತಿಳಿಯಿತು. ಏನೋ ಇನ್ನಷ್ಟು ಕುಟ್ಟಿ ನನಗೆ ನಂಬರ್ ಸರಿ ಇದೆಯೇ? ಅಂತ ಮಾನಿಟರ್ ತೋರಿಸಿ ಕೇಳಿದ. ನಾನು ಮೊದಲು ಹೇಳಿದ ನಂಬರ್ ನನಗೆ ಮರೆತು ಹೋಗಿತ್ತು. ಸುಮ್ಮನೆ ಹೂಂ ಎಂದು ತಲೆ ಅಲ್ಲಾಡಿಸಿದೆ. ಸ್ವಲ್ಪ ಹೊತ್ತಿನ ನಂತರ ಅವನು ನಂಬರ್ ಪ್ಲೇಟ್ ತಂದು ಕೊಟ್ಟ.

    ಎಷ್ಟಾಯ್ತು? ನಾನು ಕೇಳಿದಾಗ,

    ಏಳ್ನೂರು ರೂಪಾಯಿ, ಅವನು ನಗುತ್ತಾ ಹೇಳಿದ.

    ಲೋಫರ್! ಯಾಕೆ ಅಷ್ಟೊಂದು? ಐದು ನಿಮಿಷದ ಕೆಲ್ಸ ಅಲ್ವಾ ಇದು?

    ಸ್ವಲ್ಪ ಬಾಯಿ ಬಿಗಿ ಹಿಡಿದು ಮಾತಾಡಿ ಸರ್! ಆರ್.ಸಿ ಬುಕ್ ಇಲ್ದೇ ಈ ತರಹ ಮಾಡೋಂಗಿಲ್ಲ! ಅವನು ಕೋಪಿಸಿ ಹೇಳಿದ. ಪರ್ಸಿಂದ ಐನೂರು ರೂಪಾಯಿ ನೋಟನ್ನು ಅವನತ್ತ ಇಟ್ಟು,

    ಇಷ್ಟು ಸಾಕು ಬಿಡಪ್ಪಾ, ಎಂದು ಹೇಳಿ ನಂಬರ್ ಪ್ಲೇಟ್ ತಗೊಂಡು ಬಂದೆ. ಅವನು ಏನೂ ಮಾತಾಡದೆ ದುಡ್ಡು ಜೇಬಲ್ಲಿ ಇಳಿಸಿದ. ನಾನು ಈಗ ಮಾಡುತ್ತಿರುವ ಮಹತ್ತರ ಕೆಲಸಕ್ಕೆ ಎಷ್ಟು ದುಡ್ಡು ಸುರಿಯಲೂ ಸಿದ್ಧನಾಗಿದ್ದೆ. ಆದರೂ ಜಿಪುಣತನ ಯಾಕೆ ತೋರಿಸುತ್ತಿದ್ದೆ ಎಂದು ನನಗೆ ಗೊತ್ತಾಗಲಿಲ್ಲ.

    ಕಾರ್ ಚಾಲನೆ ಮಾಡಿ ಸ್ವಲ್ಪ ದೂರದಲ್ಲಿದ್ದ ಸ್ಕ್ರೀನ್ ಪ್ರಿಂಟಿಂಗ್ ಅಂಗಡಿಯ ಹತ್ತಿರ ಹೋದೆ. ಆ ಅಂಗಡಿಯವ ನಾನು ಹೋದ ಕೂಡಲೇ ಒಂದು ಕರಪತ್ರದ ಕಂತೆಯನ್ನು ಕೊಟ್ಟ. ನಾನು ಅದರ ಆರ್ಡರ್ ಎರಡು ದಿನ ಹಿಂದೆ ಅವನಲ್ಲಿ ಕೊಟ್ಟಿದ್ದೆ. ಅದರಲ್ಲಿ ಒಂದು ಕರಪತ್ರವನ್ನು ತೆಗೆದು ಕಾರಿನ ಡ್ಯಾಶ್-ಬೋರ್ಡ್‌ನಲ್ಲಿ ಇಟ್ಟೆ. ಈ ಕರಪತ್ರ ಕೂಡಾ ನನ್ನ ಇವತ್ತಿನ ಮಹತ್ತರ ಕೆಲಸದ ಒಂದು ಅಂಶ. ವಾಚ್ ನೋಡಿದಾಗ ಆಗಲೇ ಗಂಟೆ ಎರಡಾಗಿತ್ತು. ಬುರ್ ಅಂತ ನಾನು ಕಾರು ಚಲಾಯಿಸಿ, ಈಗ ಜನರಿಲ್ಲದ ರಸ್ತೆಯನ್ನು ಹುಡುಕುತ್ತಿದ್ದೆ. ಸ್ವಲ್ಪ ದೂರ ಹೋದ ಮೇಲೆ ಅಂತಹ ಒಂದು ರಸ್ತೆ ಸಿಕ್ಕಿತು. ಹಿಂದೆ-ಮುಂದೆ ಒಮ್ಮೆ ಸರಿಯಾಗಿ ನೋಡಿ, ಕಾರ್ ನಿಲ್ಲಿಸಿದೆ.

    ಟೂಲ್ ಬಾಕ್ಸ್‌ನಿಂದ ಸ್ಕ್ರೂ ಡ್ರೈವರ್ ತೆಗೆದು ಕಾರಿನ ಈಗಿದ್ದ ನಂಬರ್ ಪ್ಲೇಟ್ ಬಿಚ್ಚಿ, ನಾನು ತಂದಿದ್ದ ಹೊಸ ಪ್ಲೇಟನ್ನು ಸಿಕ್ಕಿಸಿದೆ. ಕಾರಿನ ನಂಬರ್ ಈಗ ಬದಲಾಗಿ KA-15 M-3642 ಆಯಿತು. ಪಕ್ಕದಲ್ಲೇ ಒಂದು ಮೋರಿ ಇತ್ತು. ಹಳೇ ನಂಬರ್ ಪ್ಲೇಟನ್ನು ಆಚೆ ಈಚೆ ಯಾರೂ ನೋಡದಂತೆ, ಆ ಮೋರಿಯಲ್ಲಿ ಎಸೆದೆ. ನಾನು ಮಾಡಲಿರುವ ಕೆಲಸಕ್ಕೆ ಈಗ ಎಲ್ಲವೂ ಸಿದ್ಧವಾಗಿತ್ತು. ಮತ್ತೆ ಕಾರ್ ಹತ್ತಿ, ಸಾಗರ ಪಟ್ಟಣದ ಬೈ ಪಾಸ್‌ನತ್ತ ಚಲಾಯಿಸಿದೆ. ಬೈ ಪಾಸ್ ಹತ್ತಿರ ಬಂದಂತೆ ಹೊರಗಡೆ ರಸ್ತೆಯತ್ತ ಕಣ್ಣು ಹಾಯಿಸುತ್ತಿದ್ದೆ.

    Enjoying the preview?
    Page 1 of 1