Discover millions of ebooks, audiobooks, and so much more with a free trial

Only $11.99/month after trial. Cancel anytime.

Hulivesha - Kategalu
Hulivesha - Kategalu
Hulivesha - Kategalu
Ebook295 pages1 hour

Hulivesha - Kategalu

Rating: 0 out of 5 stars

()

Read preview

About this ebook

ಮಂಗಳೂರಿನಲ್ಲಿ 70 ಮತ್ತು 80 ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿವೇಷ ಎಂದರೆ ಮೈ ಮೇಲೆ ಆವೇಶ ಬಂದಂತೆ. ನವರಾತ್ರಿಯ ಕೊನೆಯ ಆ ನಾಲ್ಕು-ಐದು ದಿನಗಳಲ್ಲಿ ಅಲ್ಲಲ್ಲಿ ಹುಲಿವೇಷದ ನೃತ್ಯ ನೋಡಿ, ಅದರ ಜೊತೆ ರಸ್ತೆಗಳಲ್ಲಿ ಒಂದಿಷ್ಟು ಅಡ್ಡಾಡಿ, ನಂತರ ಕೊನೆಯ ದಿನ ಶಾರದಾ ಮಾತೆಯ ಶೋಭಾಯಾತ್ರೆಯ ಜೊತೆ ಕೊನೆಗೊಳ್ಳುವ ಆ ದಿನಗಳು, ಮುಂದಿನ ವರ್ಷ ಮತ್ತೆ ಎದುರು ನೋಡುವಂತವು. ಇಂತಹ ಅನುಭವಗಳನ್ನು ಕೊಟ್ಟ ಹುಲಿವೇಷದ ದಂಡನ್ನು ಆಧಾರವಾಗಿಟ್ಟು ಕತೆ ಬರೆಯುವ ಹುಮ್ಮಸ್ಸಾಯಿತು. ಬರೆದು ಮುಗಿಸಿದಾಗ ಅದು ಕಾದಂಬರಿಯಷ್ಟು ದೊಡ್ದದಾಗಲಿಲ್ಲ, ಸಣ್ಣ ಕತೆಯಷ್ಟು ಸಣ್ಣದಾಗಲಿಲ್ಲ. ವಿನಾಃ ಕಾರಣ ಅದನ್ನು ಎಳೆದು ಕಾದಂಬರಿ ಮಾಡುವುದೋ ಅಥವಾ ಮೊಟಕುಗೊಳಿಸಿ ಸಣ್ಣ ಕತೆ ಮಾಡುವುದಕ್ಕೆ ಮನಸ್ಸು ಬರಲಿಲ್ಲ. ಆ ಕತೆಯನ್ನು ಇದ್ದ ಹಾಗೆ ಬಿಟ್ಟು ಅದರ ಜೊತೆಗೆ ಆರು ಇತರ ಕತೆಗಳನ್ನು ಜೊತೆಗೂಡಿಸಿ ಈ ಕಥಾ ಸಂಕಲನ ಹೊರ ತಂದಿದ್ದೇನೆ. ಎಲ್ಲಾ ಕತೆಗಳು ಮತ್ತು ಪಾತ್ರಗಳು ಕಾಲ್ಪನಿಕ. ಕೆಲವು ಕತೆಗಳು ಪ್ರತಿಲಿಪಿ ಆನ್ಲೈನ್ ದಲ್ಲಿ ಪ್ರಕಟವಾಗಿ ಮನ್ನಣೆಗಳಿಸಿವೆ.
ಪುಸ್ತಕ ಬರೆಯಲು ಸಮಯ ಮತ್ತು ವಾತಾವರಣ ಒದಗಿಸಿ ಕೊಟ್ಟ ನನ್ನ ಪತ್ನಿ, ಮಕ್ಕಳು, ತಾಯಿ ತಂದೆಯವರಿಗೆ ನಾನು ಸದಾ ಆಭಾರಿ. ಪ್ರಕಟಿಸಲು ಒಪ್ಪಿದ ಟೋಟಲ್ ಕನ್ನಡದ ಮಾಲೀಕರು ಶ್ರೀ ಲಕ್ಷ್ಮಿಕಾಂತ್ ರವರಿಗೆ ಹಾಗೂ ಕರಡು ಪ್ರತಿಯನ್ನು ತಿದ್ದಿದ ನನ್ನ ಅಕ್ಕ ಶ್ರೀಮತಿ ಗೀತಾ ಪೈ ಯವರಿಗೆ ಧನ್ಯವಾದಗಳು. ಪುಸ್ತಕದ ಮಾರಾಟದ ಲಾಭಾಂಶವೆಲ್ಲಾ ಸದುಪಯೋಗಿ ಕೆಲಸಕ್ಕೆ ನನ್ನ ಪ್ರತಿ ಪುಸ್ತಕದಂತೆ ಮೀಸಲಾಗಿಟ್ಟಿದ್ದೇನೆ. ನಿಮ್ಮ ಅನಿಸಿಕೆಗಳನ್ನು ಕೆಳಕಂಡ ಮಿಂಚಂಚೆ / ದೂರವಾಣಿಗಳ ಮೂಲಕ ವ್ಯಕ್ತ ಪಡಿಸಲು ನನ್ನ ಕಳಕಳಿಯ ಮನವಿ.
ಇಂತಿ ನಿಮ್ಮಯ,
ವಿಠಲ್ ಶೆಣೈ
LanguageKannada
Release dateApr 2, 2021
ISBN6580235806067
Hulivesha - Kategalu

Related to Hulivesha - Kategalu

Related ebooks

Reviews for Hulivesha - Kategalu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Hulivesha - Kategalu - Vittal Shenoy

    http://www.pustaka.co.in

    ಹುಲಿ ವೇಷ - ಕ ತೆ ಗ ಳು

    Hulivesha – Kategalu

    Author:
    ಠಲ್ ಶೆಣೈ

    Vittal Shenoy

    For more books

    http://www.pustaka.co.in/home/author/vittal-shenoy

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ನನ್ನುಡಿ

    ಮಂಗಳೂರಿನಲ್ಲಿ 70 ಮತ್ತು 80 ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿವೇಷ ಎಂದರೆ ಮೈ ಮೇಲೆ ಆವೇಶ ಬಂದಂತೆ. ನವರಾತ್ರಿಯ ಕೊನೆಯ ಆ ನಾಲ್ಕು-ಐದು ದಿನಗಳಲ್ಲಿ ಅಲ್ಲಲ್ಲಿ ಹುಲಿವೇಷದ ನೃತ್ಯ ನೋಡಿ, ಅದರ ಜೊತೆ ರಸ್ತೆಗಳಲ್ಲಿ ಒಂದಿಷ್ಟು ಅಡ್ಡಾಡಿ, ನಂತರ ಕೊನೆಯ ದಿನ ಶಾರದಾ ಮಾತೆಯ ಶೋಭಾಯಾತ್ರೆಯ ಜೊತೆ ಕೊನೆಗೊಳ್ಳುವ ಆ ದಿನಗಳು, ಮುಂದಿನ ವರ್ಷ ಮತ್ತೆ ಎದುರು ನೋಡುವಂತವು. ಇಂತಹ ಅನುಭವಗಳನ್ನು ಕೊಟ್ಟ ಹುಲಿವೇಷದ ದಂಡನ್ನು ಆಧಾರವಾಗಿಟ್ಟು ಕತೆ ಬರೆಯುವ ಹುಮ್ಮಸ್ಸಾಯಿತು. ಬರೆದು ಮುಗಿಸಿದಾಗ ಅದು ಕಾದಂಬರಿಯಷ್ಟು ದೊಡ್ದದಾಗಲಿಲ್ಲ, ಸಣ್ಣ ಕತೆಯಷ್ಟು ಸಣ್ಣದಾಗಲಿಲ್ಲ. ವಿನಾಃ ಕಾರಣ ಅದನ್ನು ಎಳೆದು ಕಾದಂಬರಿ ಮಾಡುವುದೋ ಅಥವಾ ಮೊಟಕುಗೊಳಿಸಿ ಸಣ್ಣ ಕತೆ ಮಾಡುವುದಕ್ಕೆ ಮನಸ್ಸು ಬರಲಿಲ್ಲ. ಆ ಕತೆಯನ್ನು ಇದ್ದ ಹಾಗೆ ಬಿಟ್ಟು ಅದರ ಜೊತೆಗೆ ಆರು ಇತರ ಕತೆಗಳನ್ನು ಜೊತೆಗೂಡಿಸಿ ಈ ಕಥಾ ಸಂಕಲನ ಹೊರ ತಂದಿದ್ದೇನೆ. ಎಲ್ಲಾ ಕತೆಗಳು ಮತ್ತು ಪಾತ್ರಗಳು ಕಾಲ್ಪನಿಕ. ಕೆಲವು ಕತೆಗಳು ಪ್ರತಿಲಿಪಿ ಆನ್ಲೈನ್ ದಲ್ಲಿ ಪ್ರಕಟವಾಗಿ ಮನ್ನಣೆಗಳಿಸಿವೆ.

    ಪುಸ್ತಕ ಬರೆಯಲು ಸಮಯ ಮತ್ತು ವಾತಾವರಣ ಒದಗಿಸಿ ಕೊಟ್ಟ ನನ್ನ ಪತ್ನಿ, ಮಕ್ಕಳು, ತಾಯಿ ತಂದೆಯವರಿಗೆ ನಾನು ಸದಾ ಆಭಾರಿ. ಪ್ರಕಟಿಸಲು ಒಪ್ಪಿದ ಟೋಟಲ್ ಕನ್ನಡದ ಮಾಲೀಕರು ಶ್ರೀ ಲಕ್ಷ್ಮಿಕಾಂತ್ ರವರಿಗೆ ಹಾಗೂ ಕರಡು ಪ್ರತಿಯನ್ನು ತಿದ್ದಿದ ನನ್ನ ಅಕ್ಕ ಶ್ರೀಮತಿ ಗೀತಾ ಪೈ ಯವರಿಗೆ ಧನ್ಯವಾದಗಳು. ಪುಸ್ತಕದ ಮಾರಾಟದ ಲಾಭಾಂಶವೆಲ್ಲಾ ಸದುಪಯೋಗಿ ಕೆಲಸಕ್ಕೆ ನನ್ನ ಪ್ರತಿ ಪುಸ್ತಕದಂತೆ ಮೀಸಲಾಗಿಟ್ಟಿದ್ದೇನೆ. ನಿಮ್ಮ ಅನಿಸಿಕೆಗಳನ್ನು ಕೆಳಕಂಡ ಮಿಂಚಂಚೆ / ದೂರವಾಣಿಗಳ ಮೂಲಕ ವ್ಯಕ್ತ ಪಡಿಸಲು ನನ್ನ ಕಳಕಳಿಯ ಮನವಿ.

    ಕತೆಗಳು

    1. ಅದೇ ಧ್ವನಿ

    2. ಹುಲಿ ವೇಷ

    3. ತಕ್ಷಕನ ದೋಷ

    4.ಅವಳು ಅವನು ಮತ್ತು ಕೋಣೆ

    5. ಬಂಗಾರದ ಬಳೆ

    6. ನಿ.ಹೀ.ಸಂ

    7.ಕೀರ್ತಿ ಟ್ರಾವೆಲ್ಸ್

    1. ಅದೇ ಧ್ವನಿ

    ಮುಂದಿನ ಸ್ಪರ್ಧಿ, ನಮ್ಮೆಲ್ಲರ ನೆಚ್ಚಿನ ಹೊಸ ಪ್ರತಿಭೆ ಶ್ರೀ ಮನೋಜ್ ಕುಮಾರ್, ಉದ್ಘೋಷಕರು ಮೈಕಿನಲ್ಲಿ ಜೋರಾಗಿ ಕಿರುಚಿದರು. ಪ್ರೇಕ್ಷಕರು ಅತೀ ಹುಮ್ಮಸ್ಸಿನಿಂದ ಕರತಾಡನ ಕೊಟ್ಟರು.

    ಮನೋಜ್ ಕುಮಾರ್ ದಿಟ್ಟವಾದ ಹೆಜ್ಜೆಯನ್ನೇ ಇಟ್ಟುಕೊಂಡು ವೇದಿಕೆಯನ್ನು ಏರಿದನು, ಮೆಟ್ಟಿಲು ಹತ್ತುವಾಗ ವೇದಿಕೆಗೆ ಒಮ್ಮೆ ಕೈ ಮುಗಿದನು. ಕರ್ನಾಟಕದ ಹೊಸ ಧ್ವನಿಗಳು ಟಿ.ವಿ ಕಾರ್ಯಕ್ರಮದ ಕೊನೆಯ ಹಂತದ ಸ್ಪರ್ಧೆ ಅದಾಗಿತ್ತು. ನಾಲ್ಕು ಪ್ರತಿಭೆಗಳು, ನಾಲ್ಕು ಹೊಸ ಧ್ವನಿಗಳು, ನಾಲ್ಕು ಆಕಾಂಕ್ಷಿಗಳು, ಆದರೆ ಒಬ್ಬರು ಮಾತ್ರ ವಿಜಯಿ. ಅದು ಯಾರು ಎಂದು ತಿಳಿಯಲು ಕರ್ನಾಟಕದಾದ್ಯಂತ ಎಲ್ಲರೂ ಕಾದು ಕುಳಿತಿದ್ದರು. ವಿಜೇತರಾದ ಒಬ್ಬರಿಗೆ ಮಾತ್ರ ಹೆಸರಾಂತ ಸಂಗೀತ ನಿರ್ದೇಶಕ ಜೋಡಿ ಅಮರ್-ಕುಶಲ್ ರವರ ಜೊತೆ ಅವರ ಮುಂದಿನ ಚಿತ್ರ ನಿನ್ನ ಪ್ರೀತಿಯ ದಲ್ಲಿ ಹಾಡು ಹಾಡುವ ಅವಕಾಶ. ಸಂಗೀತ ನಿರ್ದೇಶಕ ಜೋಡಿ ಅಮರ್- ಕುಶಲ್ ಇಬ್ಬರೂ ಇವತ್ತಿನ ಸ್ಪರ್ಧೆಯ ತೀರ್ಪುಗಾರರು.

    ವೇದಿಕೆಯ ಮೇಲೆ ಮನೋಜ್ ತಲುಪಿದೊಡನೆ ಸ್ಮಶಾನ ಮೌನ ಆವರಿಸಿತು. ಮೈಕ್ ಕೈಗೆ ಸಿಕ್ಕಿದೊಡನೆ ತನ್ನ ಗಂಟಲನ್ನೊಮ್ಮೆ ಸರಿಪಡಿಸಿಕೊಂಡು ಮನೋಜ್ ಪ್ರಾರಂಭದ ಮಾತುಗಳನ್ನಾಡಿದ –

    ಪ್ರೇಕ್ಷಕ ವರ್ಗದಲ್ಲಿರುವ ಮಹಿಳೆಯರೇ, ಮಹನಿಯರೇ, ಕಾರ್ಯಕ್ರಮದ ಪ್ರಾಯೋಜಕರೇ ಮತ್ತು ತೀರ್ಪುಗಾರ ವೃಂದದಲ್ಲಿರುವ ಗೌರವಾನ್ವಿತ ಗುರುಗಳೇ. ತಮ್ಮೆಲ್ಲರಲ್ಲೂ ನಾನು ತಲೆ ಬಾಗಿಸಿ ಆಶೀರ್ವಾದ ಬೇಡಿಕೊಳ್ಳುತ್ತಿದ್ದೇನೆ. ಕೇವಲ ಒಂದು ಚಿಕ್ಕ ಪ್ರಯತ್ನ ಮಾಡೋಣಾ ಎಂದು ಈ ಸ್ಪರ್ಧೆಗಿಳಿದ ನಾನು ಇವತ್ತು ಫೈನಲ್ಸ್ ತಲುಪಿದ್ದು ನನಗೆಯೇ ನಂಬಲಾಗುತ್ತಿಲ್ಲ. ನನ್ನನ್ನು ಇಲ್ಲಿಯವರೆಗೆ ಕರೆದು ತಂದು ನಿಲ್ಲಿಸಿದ್ದು ನಿಮ್ಮೆಲ್ಲರ ಪ್ರೀತಿ ಮತ್ತು ಅಮ್ಮನವರ ಆಶೀರ್ವಾದ,

    ಕ್ಯಾಮೆರಾಗಳೆಲ್ಲವೂ ಸಭೆಯಲ್ಲಿ ಕೂತಿದ್ದ ಮನೋಜನ ತಾಯಿ ಮುಕ್ತಾಳ ಮೇಲೆಯೇ ಛಾಯಿಸಿದವು. ಮುಕ್ತಾ ಸಂಕೋಚದ ಮುಗುಳ್ನಗು ಸೂಸಿದರೂ ಈ ಹಂತದ ವರೆಗೆ ಬಂದ ಮಗನು, ಸ್ಪರ್ಧೆ ಗೆಲ್ಲುತ್ತಾನೋ ಇಲ್ಲವೋ ಎಂಬ ಆತಂಕ ಅವಳಲ್ಲಿ ಸಹಜವಾಗಿ ತುಂಬಿತ್ತು. ಮನೋಜ್ ಮುಂದುವರಿಸಿದ,

    ಸೋಲು-ಗೆಲುವು ಎಲ್ಲರ ಜೀವನದ ಒಂದು ಅವಿಭಾಜ್ಯ ಅಂಗ. ಆದರೆ ಮೊದಲನೇ ಸುತ್ತಿನಿಂದ ಈಗ ಕೊನೆಯ ಸುತ್ತಿನ ವರೆಗೂ ನಾನು ಸೋಲು-ಗೆಲುವಿನ ಹಂಗಿಲ್ಲದೆ, ಹಾಡುವ ಹಾಡುಗಳನ್ನು ಖುಷಿ ಪಟ್ಟು ಹಾಡುತ್ತಿದ್ದೇನೆ. ಐ ಅಂ ಎಂಜೋಯಿಂಗ್ ದಿ ಪ್ರೋಸೆಸ್, ನಾಟ್ ದಿ ರಿಸಲ್ಟ್. ಕೊನೆಯ ಸುತ್ತಿನ ವರೆಗೂ ಕರೆದು ತಂದ ನಿಮ್ಮೆಲ್ಲರ ಸಲುವಾಗಿ ಈಗ ನಾನು ಹಾಡುತ್ತಿರುವ ಹಾಡು ‘ಬಾನಿಗೊಂದು ಎಲ್ಲೆಯೆಲ್ಲಿದೆ’, ಅಣ್ಣಾವ್ರು ಹಾಡಿದ ‘ಪ್ರೇಮದ ಕಾಣಿಕೆ’ ಚಿತ್ರದ ಹಾಡು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳು ಹೀಗೆಯೇ ಮುಂದುವರೆಯಲಿ. ನಿಮಗಾಗಿ ಈಗ ನನ್ನ ಈ ಹಾಡು,

    ಮತ್ತೊಮ್ಮೆ ಚಪ್ಪಾಳೆಗಳು, ಅವು ಮುಗಿದೊಡನೆ ಮನೋಜ್ ಹಾಡಲು ಪ್ರಾರಂಭಿಸಿದ.

    ಬಾನಿಗೊಂದು ಎಲ್ಲೆ ಎಲ್ಲಿದೆ?

    ನಿನ್ನಾಸೆಗೆಲ್ಲಿ ಕೊನೆಯಿದೆ?

    ಏಕೆ ಕನಸು ಕಾಣುವೆ?

    ನಿಧಾನಿಸು ನಿಧಾನಿಸು...

    ದೈವದತ್ತವಾದ ಸಿರಿಕಂಠವು ಅವನದಾಗಿತ್ತು. ಮುಖ ತುಂಬಿ ತುಳುಕುವಷ್ಟು ಸ್ಪೂರ್ತಿ ಅವನು ಹಾಡುವಾಗ ಹೊರ ಸೂಸಿದನು. ಮೊದಲೇ ಸುಶ್ರಾವ್ಯವಾಗಿದ್ದ ಹಾಡಿಗೆ ಅವನು ಇನ್ನಷ್ಟು ಮೈಮರೆತು, ಭಾವ ತುಂಬಿ ಹಾಡಿ, ಪ್ರೇಕ್ಷಕರೆಲ್ಲರನ್ನು ಇನ್ಯಾವುದೋ ಲೋಕಕ್ಕೆ ಕರೆದೊಯ್ದನು. ಹಾಡು ಮುಗಿಯುವಷ್ಟರಲ್ಲಿ ಅವನ ಅಭಿಮಾನಿಗಳು ಇನ್ನಷ್ಟು ಹೆಚ್ಚಾದರು. ಅವನ ಹಾಡುವಿಕೆಯನ್ನು ಹೊಗಳಲು ಅದೆಷ್ಟೋ ಜನರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಮನೋಜ್ ಎಲ್ಲರಿಗೂ ತಲೆಬಾಗಿ ವೇದಿಕೆಯಿಂದಿಳಿದು ಸ್ಪರ್ಧಿಗಳ ಮಧ್ಯೆ ಇರುವ ತನ್ನ ಜಾಗದಲ್ಲಿ ಹೋಗಿ ಕೂತನು.

    ಈಗ ಮುಂದಿನ ಸ್ಪರ್ಧಿ ಚರಣ್ ರಾಜ್.... ಉದ್ಘೋಷಕರು ಕಾರ್ಯಕ್ರಮವನ್ನು ಮುಂದುವರಿಸಿದರು. ಮನೋಜ್ ಕುಳಿತಲ್ಲೇ ತಾಯಿಯತ್ತ ನೋಡಿ ವಿಶ್ವಾಸದ ನಗು ಬೀರಿದನು. ಇವತ್ತು ಈ ಹಂತಕ್ಕೆ ತಲುಪಲು ಅವನ ಜೀವನದ ಪರಿಶ್ರಮವನ್ನು ಒಮ್ಮೆ ಅವನು ಜ್ಞಾಪಿಸಿಕೊಂಡು ನೆನಪಿನ ಲೋಕಕ್ಕಿಳಿದನು.

    ***

    ಮನೋಜ್ ನ ತಾಯಿ ಮುಕ್ತಾ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದಿದ್ದಳು. ಕರುಳಿನ ಕ್ಯಾನ್ಸರ್ ರೋಗಕ್ಕೆ, ಯಾವುದೇ ಸೂಚನೆಯೂ ಇಲ್ಲದೇ ಕೆಲವೇ ತಿಂಗಳುಗಳಲ್ಲಿ ಅವಳ ಗಂಡ ಬಲಿಯಾಗಿದ್ದರು. ಆಗ ಮನೋಜ್ ಗೆ ಕೇವಲ ಎಂಟು ವರುಷ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಾ, ತನ್ನ ಏಕೈಕ ಮಗನನ್ನು ಮುಂದಿನ ಹದಿನೈದು ವರುಷಗಳ ಕಾಲ ಸಾಕಿ ಸಲಹಿದ್ದರು. ವಿದ್ಯಾಭ್ಯಾಸದಲ್ಲಿ ಮನೋಜ್ ಅಂತಹ ಚುರುಕಾದ ಹುಡುಗನಾಗಿರಲಿಲ್ಲ. ಸಾಮಾನ್ಯವಾಗಿ ಎರಡನೆಯ ದರ್ಜೆಯಲ್ಲಿ ಪಾಸಾಗುತ್ತಿದ್ದ ಅವನು, ಅಪ್ಪಿ ತಪ್ಪಿ ಕೆಲವೊಮ್ಮೆ ಮೊದಲನೆಯ ದರ್ಜೆ ಬಂದದ್ದೂ ಉಂಟು. ಶಾಲೆಯಲ್ಲಿ ಪಾಠಕ್ಕಿಂತ ಎನ್.ಸಿ.ಸಿ, ನಾಟಕಗಳಲ್ಲಿ ಅಭಿನಯ, ಕ್ರೀಡಾ ಸಂಘದ ಉಸ್ತುವಾರಿ ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಅವನ ಒಲವು ಹೆಚ್ಚಿತ್ತು.

    ಮುಕ್ತಾ ಮನೋಜ್ ನನ್ನು ಓದಿನಲ್ಲಿ ಚುರುಕುಗೊಳಿಸಲು ಬಹಳಷ್ಟು ಪ್ರಯತ್ನಿಸಿದ್ದಳು. ಬ್ಯಾಂಕಿನ ಕೆಲಸ ಮುಗಿಸಿ ಮನೆಗೆ ಬರುವಾಗ ಸುಸ್ತಾಗಿದ್ದರೂ, ಮಗನ ಪಠ್ಯ ಪುಸ್ತಕಗಳನ್ನು ತಿರುವಿ ಅವನ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುತ್ತಿದ್ದಳು. ಸುಮಾರು ಆರನೆಯ ತರಗತಿಗೆ ಬಂದಾಗ ತನ್ನ ಮಗನು, ಪಾಠದ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಉಳ್ಳವನು ಅಲ್ಲ ಎಂಬ ಸತ್ಯ ಅವಳಿಗೆ ಅರಿವಾಯಿತು. ಇವನು ಜೀವನದಲ್ಲಿ ತನ್ನದೇ ಚಾಕಚಕ್ಯತೆಯಲ್ಲಿ ಮುಂದೆ ಬರಬೇಕು ಎಂದು ಅವಳಿಗೆ ತಿಳಿದಿತ್ತು.

    ಪ್ರತಿನಿತ್ಯ ಮನೋಜ್ ಸ್ನಾನ ಮಾಡುವಾಗ ತನಗಿಷ್ಟವಾದ ಹಾಡುಗಳನ್ನು ಹಾಡುತ್ತಿದ್ದ. ಪಕ್ಕ ಪಕ್ಕ ಮನೆಯಿದ್ದ ಆ ವಠಾರದಲ್ಲಿ ಆ ಹಾಡುಗಳು ಪಕ್ಕದ ಮನೆಯ ಸರೋಜಮ್ಮನ ಅಡುಗೆ ಮನೆಗೂ ಕೇಳಿಸುತ್ತಿತ್ತು. ಸರೋಜಮ್ಮ ಒಮ್ಮೊಮ್ಮೆ ಅಡುಗೆ ನಿಲ್ಲಿಸಿ ಹಾಡಿನ ಸವಿಯನ್ನು ಅನುಭವಿಸುತ್ತಿದ್ದಳು. ಒಮ್ಮೆ ಅವರ ಮನೆಗೆ ಬಂದಾಗ ಸರೋಜಮ್ಮನೇ ಮುಕ್ತಾಳ ಬಳಿ ಮನೋಜ್ ನ ಬಾತ್ ರೂಂ ಹಾಡುಗಾರಿಕೆ ಬಗ್ಗೆ ಹೇಳಿದಳು.

    ಒಮ್ಮೊಮ್ಮೆ ರೇಡಿಯೋದಲ್ಲಿ ಹಾಡು ಬರ್ತಾ ಇದೆಯೋ ಅಥವಾ ಹೊರಗಡೆ ಯಾರಾದ್ರೂ ಹಾಡ್ತಾ ಇದ್ದಾರೋ ತಿಳಿಯಲ್ಲ, ಅಷ್ಟು ಚೆನ್ನಾಗಿ ಹಾಡ್ತಾನೆ ನಿಮ್ಮ ಮಗ. ಅವನು ಸಾಧಾರಣವಾದ ಬಚ್ಚಲು ಮನೆಯ ಗಾಯಕನಲ್ಲ, ಅವನಲ್ಲಿ ನಿಜಕ್ಕೂ ಪ್ರತಿಭೆ ಇದೆ. ನೀವ್ಯಾಕೆ ಅವನಿಗೆ ಸಂಗೀತ ಕಲಿಸುವುದಿಲ್ಲ? ಎಂದು ಸರೋಜಮ್ಮ ಕೇಳಿದಾಗಲೇ ಮುಕ್ತಾ ತನ್ನ ಮಗನ ಹಾಡುಗಾರಿಕೆಯ ಬಗ್ಗೆ ಗಂಭೀರವಾಗಿ ಯೋಚಿಸಿದ್ದು. ಅದೇ ವರ್ಷ ಶಾಲೆಯ ಸಂಗೀತ ಸ್ಪರ್ಧೆಯೊಂದರಲ್ಲಿ ಮೊದಲ ಬಹುಮಾನ ಪಡೆದು ಬಂದಾಗ, ಮುಕ್ತಾಳಿಗೆ ತನ್ನ ಮಗನನ್ನು ಸಂಗೀತ ತರಬೇತಿಗೆ ಕಳುಹಿಸಬೇಕು ಎಂಬುದು ಖಚಿತವಾಯಿತು. ಮನೆಯ ಖರ್ಚನ್ನು ಒಂದಷ್ಟು ಸಮದೂಗಿಸಿ, ತನ್ನ ನೆರೆಹೊರೆಯಲ್ಲಿದ್ದ ಶಾಸ್ತ್ರೀಯ ಸಂಗೀತ ಕ್ಲಾಸ್ ಒಂದಕ್ಕೆ ಮಗನನ್ನು ಅವನ ಹದಿಮೂರನೆಯ ಹುಟ್ಟುಹಬ್ಬದ ದಿನ ಸೇರಿಸಿದಳು. ಮನೋಜ್ ಗೆ ಅದು ತನ್ನ ತಾಯಿ ಕೊಟ್ಟ ಅತಿ ದೊಡ್ಡ ಬಹುಮಾನ. ಅತಿಯಾದ ಹುರುಪಿನಿಂದ ಸಂಗೀತ ಕಲಿತರೂ, ಶಾಲೆಯ ಪಾಠದ ವಿಷಯದಲ್ಲಿ ಅವನು ಹಿಂದೆ ಬೀಳದಂತೆ ಕಟ್ಟೆಚ್ಚರಿಕೆ ವಹಿಸಿ ಮುಕ್ತಾ ಅವನನ್ನು ಪಾಲಿಸಿಕೊಂಡು ಹೋಗಿದ್ದಳು.

    ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದರೂ ಮನೋಜ್ ನ ಒಲವು ಚಿತ್ರಗೀತೆಗಳತ್ತವೂ ಬಹಳವಿತ್ತು. ಕೇವಲ ಒಂದು ಬಾರಿ ಹಾಡು ಕೇಳಿದರೆ ಸಾಕು, ಅದರ ರಾಗ-ತಾಳ-ಶೃತಿ ಮತ್ತು ರಚನೆ ಎಲ್ಲವನ್ನೂ ಬಲು ಬೇಗ ಹಿಡಿದು ಎರಡೇ ನಿಮಿಷಗಳಲ್ಲಿ ಅದನ್ನು ಹಾಡಿ ತೋರಿಸುತ್ತಿದ್ದ. ಶಾಸ್ತ್ರೀಯ ಸಂಗೀತದ ತರಬೇತಿ ಅವನ ಕಂಠವನ್ನು ಇನ್ನಷ್ಟು ಪಳಗಿಸಿ ಇಟ್ಟಿತ್ತು. ಸಂಗೀತದ ಕ್ಲಾಸ್ ನಲ್ಲಿ ಬಹುತೇಕ ಮಂದಿ ಸಮಯ ಕಳೆಯಲು ಬರುತ್ತಿದ್ದರು. ಆದರೆ ಮನೋಜ್ ನ ಪ್ರತಿಭೆಯನ್ನು ಅವನ ಗುರುಗಳು ಗುರುತಿಸಿದ್ದರು. ಅಂತೆಯೇ ಅವನನ್ನು ಅಲ್ಲಲ್ಲಿ ನಡೆಯುವ ಸ್ಪರ್ಧೆಗಳು, ವಾರ್ಷಿಕ ಕಾರ್ಯಕ್ರಮಗಳು ಇತ್ಯಾದಿಗಳಲ್ಲಿ ಹಾಡಿಸುತ್ತಿದ್ದರು. ಕಾಲ ಕಳೆದಂತೆ ವೇದಿಕೆ-ಸಮಾರಂಭಗಳಲ್ಲಿ ಹಾಡುವಷ್ಟು ಧೈರ್ಯ ಮತ್ತು ಅಭ್ಯಾಸ ಅವನಿಗೆ ಬಂತು. ಮನೋಜನ ಬಾತ್ರೂಂ ಹಾಡುಗಾರಿಕೆಯಲ್ಲೂ ಬಂದ ಗಮನಾರ್ಹ ಬದಲಾವಣೆಗಳು ಸರೋಜಮ್ಮನಿಗೂ ತಿಳಿಯಿತು.

    ಹತ್ತನೆಯ ತರಗತಿಯ ಪರೀಕ್ಷೆಯ ಹಿಂದಿನ ದಿನ ಇತರ ವಿಧ್ಯಾರ್ಥಿಗಳು ತಲೆಕೆಟ್ಟು ಓದುತ್ತಿದ್ದರೆ, ಮನೋಜ್ ಯಾವುದೋ ಸಭೆಯೊಂದರಲ್ಲಿ ಹಾಡುತ್ತಿದ್ದ. ಓದಿನ ಬಗ್ಗೆ ಅವನಿಗಿದ್ದ ಆಸಕ್ತಿ ಪಾಸ್ ಮಾರ್ಕ್ಸ್ ಗಳಿಸುವಷ್ಟು ಮಾತ್ರ. ಮುಕ್ತಾ ಕೂಡಾ ಮಗನಲ್ಲಿ ಅನಾವಶ್ಯಕವಾದ ಓದಿನ ಒತ್ತಡ ಹೇರಲಿಲ್ಲ. ಇದರ ಪರಿಣಾಮವೇನೋ, ಮನೋಜ್ ಹತ್ತನೆಯ ತರಗತಿಯಲ್ಲಿ ಎಲ್ಲರ ಅಪೇಕ್ಷೆ ಮೀರಿ 70 ಶೇಖಡಾ ಅಂಕಗಳನ್ನು ಗಳಿಸಿ ತೇರ್ಗಡೆಯಾದ. ಹೀಗೆಯೇ ಮುಂದೆ ಓದು ಮತ್ತು ಹಾಡುಗಾರಿಕೆಗಳನ್ನು ಸಮನಾಗಿಸಿ ಕರೆದೊಯ್ದು ಮನೋಜ್ ಬಿ.ಕಾಂ ಪದವೀಧರನಾದ. ಸದಾ ಸಂಗೀತದಲ್ಲಿ ಒಂದು ಬ್ರೇಕ್ ಸಿಗಲು ಶತಪ್ರಯತ್ನ ಪಡುತ್ತಿದ್ದ. ಒಬ್ಬ ಗಾಯಕನಾಗುವುದು ಅವನು ಹಲವು ವರುಷಗಳಿಂದ ಕಟ್ಟಿ ಕೊಂಡ ಕನಸು. ಅದು ನನಸಾಗುವ ವರೆಗೆ ಜೀವನದ ಅವಶ್ಯಕ ಖರ್ಚುಗಳನ್ನು ಪೂರೈಸಲು ‘ರಾವ್ ಅಂಡ್ ಬಾಳಿಗಾ’ ಎಂಬ ಚಾರ್ಟರ್ಡ್ ಅಕೌಂಟೆಂಟ್ ಆಫೀಸ್ ನಲ್ಲಿ ಕೆಲಸಕ್ಕೆ ಸೇರಿ ಕೊಂಡ.

    ಆ ವರ್ಷವೇ ಶುರುವಾದ ಕರ್ನಾಟಕದ ಹೊಸ ಧ್ವನಿಗಳು ಕಾರ್ಯಕ್ರಮ ಈಗಾಗಲೇ ಬಹಳಷ್ಟು ಜನಪ್ರಿಯತೆ ಗಳಿಸಿತ್ತು. ಚಿಗುರೊಡೆಯುತ್ತಿರುವ ಗಾಯಕ ಪ್ರತಿಭೆಗಳನ್ನು ಜನರಿಗೆ ಟಿ.ವಿ ಯ ಮುಖಾಂತರ ಪರಿಚಯಿಸುವುದು ಮತ್ತು ಅದರಲ್ಲಿ ಅತ್ಯುತ್ತಮವಾದ ಒಂದು ಪ್ರತಿಭೆಯನ್ನು ವರ್ಷದ ಕೊನೆಯಲ್ಲಿ ವಿಜಯಿಯಾಗಿ ಘೋಷಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ವಿಜೇತರಿಗೆ ಸಿನೆಮಾದಲ್ಲಿ ಹಾಡುವ ಅವಕಾಶಗಳೂ ಸಿಗುತ್ತಿದ್ದವು. ಅಂತೆಯೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೋಜ್ ಕಳೆದ ಒಂದು ವರ್ಷದಿಂದ ಶತಪ್ರಯತ್ನ ಹಾಕುತ್ತಿದ್ದ. ಆರು ಕೋಟಿ ಕನ್ನಡಿಗರಲ್ಲಿ ಹಾಡುವ ಪ್ರತಿಭೆಗಳಿಗೆ ಏನೂ ಕೊರತೆ ಇರಲಿಲ್ಲ, ಆದುದರಿಂದ ಹೊಸ ಧ್ವನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಅರ್ಜಿಗಳು ಹನುಮಂತನ ಬಾಲದಂತೆ ಬೆಳೆದಿತ್ತು. ಅನೇಕ ಅರ್ಜಿಗಳು ಕಸದ ಬುಟ್ಟಿಗೂ ಸೇರುತ್ತಿದ್ದವು. ಹಲವು ತಿಂಗಳುಗಳು ಕಳೆದರೂ ಮನೋಜನಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಕರೆ ಬಂದಿರಲಿಲ್ಲ, ಬಹುಶಃ ತನ್ನ ಅರ್ಜಿಯೂ ಕಸದಬುಟ್ಟಿಗೆ ಸೇರಿರಬಹುದು ಎಂದು ಯೋಚಿಸಿ ಅವನು ಸ್ವಲ್ಪ ಧೃತಿಗೆಟ್ಟಿದ್ದ.

    ಅದೊಮ್ಮೆ ಮನೋಜ್ ಯಾವುದೋ ಬರ್ತ್ ಡೇ ಪಾರ್ಟಿಯಲ್ಲಿ ಹಾಡುತ್ತಿದ್ದಾಗ, ಅದೇ ಪಾರ್ಟಿಗೆ ಬಂದಿದ್ದ ಹೊಸ ಧ್ವನಿಗಳು ಕಾರ್ಯಕ್ರಮ ಪ್ರಸಾರವಾಗುವ ಟಿ.ವಿ ಚಾನೆಲ್ ನ ಮುಖ್ಯಸ್ಥನೊಬ್ಬರು ಅವನ ಪ್ರತಿಭೆಗೆ ಕಿವಿಗೊಟ್ಟರು. ಆ ಕೂಡಲೇ ಮನೋಜ್ ನ ಕೈಲಿ ಒಂದು ಹೊಸ ಅರ್ಜಿ ಬರೆಸಿಕೊಂಡು ಕೇವಲ ಎರಡೇ ವಾರಗಳಲ್ಲಿ ಅವನಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಕರೆ ಬರುವಂತೆ ಮಾಡಿದರು. ಕೊನೆಗೂ ಮನೋಜ್ ಗೆ ರಾಜ್ಯ ಮಟ್ಟದಲ್ಲಿ ಪ್ರತಿಭೆಯನ್ನು ಗುರುತಿಸುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ಖುಲಾಯಿಸಿತು. ಆ ಅದೃಷ್ಟವೇ ಅವನನ್ನು ಇಂದು ಈ ಒಂದು ದೊಡ್ಡ ಮಂಟಪದಲ್ಲಿ ತಂದು ನಿಲ್ಲಿಸಿತ್ತು.

    ***

    ಈಗ ಈ ವರ್ಷದ ಹೊಸ ದ್ವನಿ ಯಾರೆಂದು ತಿಳಿಯುವ ಸಮಯ ಬಂದಿದೆ. ನಮ್ಮ ಜಡ್ಜ್ ಗಳು ಸಂಪೂರ್ಣವಾಗಿ ಗೊಂದಲ ಗೊಂಡಿದ್ದಾರೆ, ಇವತ್ತಿನ ಸ್ಪರ್ಧೆ ಅಷ್ಟು ಮಟ್ಟಿಗೆ ನಿಕಟವಾಗಿತ್ತು. ಆದರೆ ವಿಜಯಿ ಒಬ್ಬರೇ ಆಗಬೇಕು. ಅದು ಯಾರು ಎಂದು ತಿಳಿಯೋಣ ಒಂದು ಸಣ್ಣ ಬ್ರೇಕ್ ನ ನಂತರ, ಎಂದು ಕಾರ್ಯಕ್ರಮದ ಉದ್ಘೋಷಕರು ಅಂದಾಗ ಅಯ್ಯೋ ಇನ್ನೆಷ್ಟು ಕಾಯಬೇಕು ಎಂಬ ಪ್ರತಿಕ್ರಿಯೆ ಎಲ್ಲರಲ್ಲೂ ಮೂಡಿತು.

    ಮುಕ್ತಾ ಪ್ರೇಕ್ಷಕರಲ್ಲಿ ತನ್ನ ಉಗುರು ಕಚ್ಚಿಕೊಂಡು ಕುಳಿತಿದ್ದಳು, ಆದರೆ ಮನೋಜ್ ಸಂಯಮದಲ್ಲಿದ್ದ. ತಾನೇ ಗೆಲ್ಲುವ ಆತ್ಮವಿಶ್ವಾಸ ಅವನಲ್ಲಿತ್ತು, ಅದೃಷ್ಟ ದೇವತೆ ತನಗೆ ಒಲಿಯುವಳೇ ಎಂಬ ಧೃಡತೆ ಅವನಲ್ಲಿತ್ತು. ಈ ಕಾರ್ಯಕ್ರಮದಲ್ಲಿ ಗೆಲ್ಲುವ ಧ್ಯೇಯವನ್ನೇ ಕಳೆದೆರಡು ವರುಷಗಳಿಂದ ಅವನು ಇಟ್ಟಿದ್ದ. ಇಲ್ಲೇ ಇದ್ದ ಸಂಗೀತ ನಿರ್ದೇಶಕ ಜೋಡಿ ಅಮರ್–ಕುಶಲ್ ಜೊತೆ ಚಿತ್ರಗಳಲ್ಲಿ ಹಾಡುವ ಕನಸನ್ನೂ ಕಟ್ಟಿದ್ದ.

    ಬ್ರೇಕ್ ಮುಗಿದಾಗ ಕುಶಲ್ ಕೈಯಲ್ಲಿ ಮೈಕ್ ಇತ್ತು. ಪ್ರೇಕ್ಷಕರೂ ಚರಣ್.. ಚರಣ್..., ಇನ್ನು ಕೆಲವರು ಮನೋಜ್ ಮನೋಜ್ ಎಂದು ತಮ್ಮ ಇಷ್ಟದ ಗಾಯಕನನ್ನು ಬೆಂಬಲಿಸುತ್ತಿದ್ದರು. ವಿಜಯಿಯನ್ನು ಘೋಷಿಸುವ ಮೊದಲು ಸ್ಪರ್ಧೆಯ ಜಡ್ಜ್ ಅಮರ್ ತನ್ನ ಮಾತುಗಳನ್ನು ಆರಂಭಿಸಿದರು.

    ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಮತ್ತೊಮ್ಮೆ ಅಭಿನಂದನೆಗಳು. ಎಲ್ಲರ ಪ್ರದರ್ಶನ ಉತ್ತಮವಾಗಿಯೇ ಇತ್ತು. ಆದರೆ ಇವತ್ತು ಗೆಲ್ಲುವುದು ಒಬ್ಬರಿಗೆ ಮಾತ್ರ ಸಾಧ್ಯ. ದೇರ್ ಕ್ಯಾನ್ ಓನ್ಲಿ ಬಿ ಒನ್ ವಿನ್ನರ್. ನಿಮ್ಮಲ್ಲಿ ಕೆಲವರು ಸುಲಭವಾದ ಹಾಡುಗಳನ್ನು ಹಾಡಿದ್ದೀರಿ, ಸ್ಪರ್ಧೆಯಲ್ಲಿ ಸುಲಭವಾಗಲಿ ಎಂದೇನೋ? ಇನ್ನು ಕೆಲವರು ಒಂದೇ ತರಹದ ಹಾಡುಗಳನ್ನು ಹಾಡಿದ್ದೀರಿ. ಆದರೆ ಒಬ್ಬ ಯಶಸ್ವಿ ಗಾಯಕನಾಗಲು ನೀವು ಅನೇಕ ವೈವಿಧ್ಯಮಯ ಹಾಡುಗಳು, ಬೇರೆ ಬೇರೆ ಮೂಡ್ ವ್ಯಕ್ತಪಡಿಸುವ ಹಾಡುಗಳು, ಸಿರಿತನವಾದ ಸಾಹಿತ್ಯ ತುಂಬಿರುವ ಹಾಡುಗಳು ಇವುಗಳನ್ನು ಹಾಡಬೇಕಾಗುತ್ತದೆ. ಜೀವನದ ಅನೇಕ ವೈವಿಧ್ಯಗಳನ್ನು ಹಾಡಲ್ಲಿ ವ್ಯಕ್ತ ಪಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಮತ್ತು ಕುಶಲ್ ಕುಳಿತುಕೊಂಡು ಒಬ್ಬ ವಿನ್ನರ್ ಆಯ್ಕೆ ಮಾಡಿದ್ದೀವಿ, ಎಂದು ಅಮರ್ ಹೇಳಿ ಉದ್ಘೋಷಕರ ಕಡೆ ನೋಡಿದರು. ಉದ್ಘೋಷಕರು ತನ್ನ ಕೈಯಲ್ಲಿ ವಿಜೇತರ ಹೆಸರಿದ್ದ ಕವರ್ ಅನ್ನು ತೆರೆಯುತ್ತಾ –

    ಲೇಡೀಸ್ ಅಂಡ್ ಜಂಟಲ್ಮ್ಯಾನ್ ನಮ್ಮ ಈ ವರ್ಷದ ಹೊಸ ಧ್ವನಿ ‘ಮನೋಜ್ ಕುಮಾರ್ ಕತ್ರಿ’ ಉದ್ಘೋಷಕರು ಹೇಳುವಷ್ಟರಲ್ಲಿ ಪ್ರೇಕ್ಷಕರೆಲ್ಲರೆಲ್ಲರೂ ಎದ್ದು ನಿಂತು ಮುಗಿಲು ಮುಟ್ಟಿಸುವಷ್ಟು ಜೋರಾಗಿ ಚಪ್ಪಾಳೆ ತಟ್ಟಿದರು. ಮುಕ್ತಾ ಕುಳಿತಲ್ಲೇ ಕಿವುಡಿಯಾದಳು, ನಂಬಲಾಗದಷ್ಟು ಆಶ್ಚರ್ಯ ಅವಳಿಗಾಯಿತು. ಮನೋಜ್ ಸ್ತಂಭಿಭೂತನಾದ. ಕೂಡಲೇ ಎದ್ದು ಅಮ್ಮನಿರುವ ಕಡೆ ಬಂದು ಅವಳ ಕಾಲು ಹಿಡಿದು ಆಶೀರ್ವಾದ ಪಡೆದನು. ಇಬ್ಬರೂ ಆನಂದಬಾಷ್ಪ ಸುರಿಸಿ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡರು.

    Enjoying the preview?
    Page 1 of 1